Kodagu

ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ, ಶ್ರೀಕೃಷ್ಣನ ಆದರ್ಶಗಳನ್ನು ತಿಳಿದುಕೊಳ್ಳಿ : ಜಿ.ವಿ.ರವಿಕುಮಾರ್

admincoorgdaily

ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ,  ಶ್ರೀಕೃಷ್ಣನ ಆದರ್ಶಗಳನ್ನು ತಿಳಿದುಕೊಳ್ಳಿ : ಜಿ.ವಿ.ರವಿಕುಮಾರ್
ಮಡಿಕೇರಿ ಸೆ.4:-ಶ್ರೀಕೃಷ್ಣನನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದರ ಜೊತೆಗೆ ಜ್ಞಾನ, ಸತ್ಯ ಹಾಗೂ ಪ್ರೀತಿಯ ಸಂಕೇತದಿಂದ ನೋಡುತ್ತೇವೆ. ಆ ನಿಟ್ಟಿನಲ್ಲಿ ಶ್ರೀಕೃಷ್ಣನ ಆದರ್ಶವನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಗೌರವಾಧ್ಯಕ್ಷರಾದ ಜಿ.ವಿ.ರವಿಕುಮಾರ್ ಅವರು ತಿಳಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  
ಶ್ರಾವಣ ಮಾಸದಲ್ಲಿ ಕೃಷ್ಣಷ್ಟಾಮಿಯನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.
ಶ್ರೀಕೃಷ್ಣನಿಗೆ ಪುಷ್ಪಾಲಂಕಾರ, ಪುಷ್ಪಾರ್ಚನೆ ಹಾಗೂ ವಿಶೇಷ ಪೂಜೆಗಳನ್ನು ಮಾಡುವುದರ ಹಿಂದಿನ ಉದ್ದೇಶ ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರ ಆದರ್ಶ ಗುಣಗಳು, ಶಿಸ್ತು, ಪ್ರೀತಿ, ಒಗ್ಗಟ್ಟು ಮತ್ತು ಸಹಬಾಳ್ವೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೃಷ್ಣನ ಸಂದೇಶಗಳು ಇನ್ನಷ್ಟು ಪ್ರಸ್ತುತವಾಗಿವೆ. ಆಡಂಬರದ ಆಚರಣೆಗಿಂತ ಕೃಷ್ಣನ ಜೀವನ ಮೌಲ್ಯಗಳನ್ನು ಪಾಲಿಸುವುದು ಮುಖ್ಯ ಎಂದು ಹೇಳಿದರು.
ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ನೀಡಿದ ಭಗವದ್ಗೀತೆಯ ಉಪದೇಶ ಇಂದಿಗೂ ಮಾನವಕುಲಕ್ಕೆ ದಾರಿದೀಪವಾಗಿದೆ. ಮಾನವನ ಬದುಕು, ಕರ್ತವ್ಯ, ಧರ್ಮ ಮತ್ತು ಜೀವನ ಮೌಲ್ಯಗಳಿಗೆ ಸಂಬಂಧಿಸಿದ ಎಲ್ಲಾ  ಸಂದೇಶಗಳು ಭಗವದ್ಗೀತೆಯಲ್ಲಿ ಅಡಕವಾಗಿವೆ ಎಂದು ತಿಳಿಸಿದರು.

ಮಾನವನ ಜೀವನ ಸೀಮಿತ ಅವಧಿಯದ್ದಾಗಿದ್ದು, ಬಾಲ್ಯದಿಂದ ವೃದ್ಧಾಪ್ಯದವರೆಗೆ ಜೀವನದ ವಿವಿಧ ಹಂತಗಳಲ್ಲಿ ಮನುಷ್ಯ ಬೇರೆ ಬೇರೆ ಸಾಧನೆಗಳ ಹಿಂದೆ ಸಾಗುತ್ತಾನೆ. ವಯಸ್ಸು, ಶಿಕ್ಷಣದ ಅಂಕ, ಉದ್ಯೋಗ, ಸಂಬಳ, ಮಕ್ಕಳು, ಆಸ್ತಿ ಸೇರಿದಂತೆ ವಿವಿಧ ಅಳತೆಗೋಲುಗಳ ಮೂಲಕ ಬದುಕನ್ನು ಅಳೆಯುವ ಬದಲು, ದೊರೆತಿರುವ ಜೀವನವನ್ನು ಪ್ರೀತಿ, ಸಾಮರಸ್ಯ, ಹೊಂದಾಣಿಕೆ ಮತ್ತು ಸಂತೋಷದಿಂದ ಸಾಗಿಸಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪಗಳು ಮಾನವನಿಗೆ ಎಚ್ಚರಿಕೆಯ ಸಂದೇಶವಾಗಿವೆ. ಪ್ರಕೃತಿಯ ಮುಂದೆ ಮನುಷ್ಯ ಅಸಹಾಯಕನಾಗಿದ್ದು, ಪ್ರಕೃತಿಯನ್ನು ಪ್ರೀತಿಸಿ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಯಾವುದೇ ಕಾರ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕು ಹೊರತು, ಫಲದ ನಿರೀಕ್ಷೆಯಲ್ಲಿ ಕಾರ್ಯ ನಿರ್ವಹಿಸಬಾರದು. ಸತ್ಯ ಮತ್ತು ಪ್ರಾಮಾಣಿಕತೆಯಲ್ಲಿಯೇ ದೇವರನ್ನು ಕಾಣಲು ಸಾಧ್ಯ ಎಂದು ಹೇಳಿದರು.
ಗೌಳಿ ಸಮುದಾಯದವರು ಕೃಷ್ಣಾ ಷ್ಟಮಿಯನ್ನು ವಿಶೇಷವಾಗಿ ಆರಾಧಿಸುತ್ತಿದ್ದು, ಗೋವರ್ಧನಗಿರಿಯನ್ನು ಎತ್ತಿ ಗೋವುಗಳು ಹಾಗೂ ಗೋಪಾಲಕರನ್ನು ರಕ್ಷಿಸಿದ ಶ್ರೀಕೃಷ್ಣನ ಜೀವನ ಪ್ರಸಂಗಗಳು ಸಮುದಾಯದೊಂದಿಗೆ ವಿಶೇಷ ಸಂಬಂಧ ಹೊಂದಿವೆ ಎಂದು ತಿಳಿಸಿದರು.

ಶ್ರೀಕೃಷ್ಣನ ಬಾಲ್ಯದ ಜೀವನದಿಂದ ಹಿಡಿದು ಮಹಾಭಾರತದವರೆಗಿನ ಪ್ರತಿಯೊಂದು ಘಟನೆಯೂ ಜೀವನಕ್ಕೆ ಪಾಠವಾಗಿದೆ. ಸಂಕಷ್ಟಗಳನ್ನು ಎದುರಿಸುವ ಧೈರ್ಯ, ಕೆಟ್ಟದ್ದನ್ನು ತೊರೆದು ಒಳ್ಳೆಯತನದ ಹಾದಿಯಲ್ಲಿ ಸಾಗುವ ಗುಣ ಹಾಗೂ ಧರ್ಮದ ಪರವಾಗಿ ನಿಲ್ಲುವ ಸಂದೇಶವನ್ನು ಕೃಷ್ಣ ನೀಡಿದ್ದಾನೆ ಎಂದರು.

ಪ್ರತಿಯೊಬ್ಬರ ಮನಸ್ಸಿನಿಂದ ಕೆಟ್ಟ ಗುಣಗಳು ದೂರವಾಗಿ, ಪ್ರೀತಿ, ಒಗ್ಗಟ್ಟು, ಸಹಬಾಳ್ವೆ, ಜ್ಞಾನ ಮತ್ತು ಪ್ರಾಮಾಣಿಕತೆ ಬೆಳೆಯಬೇಕು. ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕುಶಾಲನಗರ ನಿವೃತ್ತ ಕಲಾ ಶಿಕ್ಷಕರಾದ ಉ.ರಾ.ನಾಗೇಶ್ ಅವರು ಉಪನ್ಯಾಸ ನೀಡಿ, ಕೃಷ್ಣನ ಜೀವನ ಸಂದೇಶಗಳು ಇಂದಿಗೂ ಪ್ರಸ್ತುತ. ಬದುಕುವ ಕಲೆಯನ್ನು ತೋರಿಸಿದ ಯೋಗೇಶ್ವರ. ಕೃಷ್ಣ ಜನ್ಮಾಷ್ಟಮಿ ಇತರ ಜಯಂತಿಗಳಿಗಿಂತ ವಿಭಿನ್ನವಾದ ಆಚರಣೆಯಾಗಿದ್ದು, ಭಗವಂತನನ್ನು ಮನುಷ್ಯ ರೂಪದಲ್ಲಿ ಕಂಡುಕೊಂಡ ಸಂಸ್ಕøತಿಯ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಮಧ್ಯರಾತ್ರಿ ಶ್ರೀಕೃಷ್ಣನು ಅವತರಿಸಿದನೆಂಬ ಪುರಾಣ ಪ್ರಸಂಗವನ್ನು ಸ್ಮರಿಸಿದರು.

ದ್ವಾಪರ ಯುಗದಲ್ಲಿ ಜನಿಸಿದ ಶ್ರೀಕೃಷ್ಣನು ಧರ್ಮ ಮತ್ತು ಅಧರ್ಮದ ನಡುವಿನ ಸಂಘರ್ಷದಲ್ಲಿ ಮಾನವಕುಲಕ್ಕೆ ಜೀವನದ ಸಾರವನ್ನು ತಿಳಿಸಿಕೊಟ್ಟಿದ್ದಾರೆ. ಕೃಷ್ಣನನ್ನು ಎಷ್ಟು ಅಧ್ಯಯನ ಮಾಡಿದರೂ ಹೊಸ ಹೊಸ ಅರ್ಥಗಳು ಮತ್ತು ಜೀವನ ಸಂದೇಶಗಳು ದೊರೆಯುತ್ತವೆ ಎಂದು ಹೇಳಿದರು.

ಭಾಗವತದಲ್ಲಿ ಕೃಷ್ಣನ ಲೀಲೆಗಳು, ಮಹಾಭಾರತದಲ್ಲಿ ಅವನ ರಾಜತಾಂತ್ರಿಕತೆ ಮತ್ತು ಧರ್ಮಸ್ಥಾಪನೆಯ ಕಾರ್ಯಗಳು, ಭಗವದ್ಗೀತೆಯಲ್ಲಿ ಜೀವನ ತತ್ವಗಳು ಹಾಗೂ ವಿಷ್ಣು ಸಹಸ್ರನಾಮದಲ್ಲಿ ಪರಮಾತ್ಮನ ಸ್ವರೂಪವನ್ನು ಕಾಣಬಹುದು. ಶಸ್ತ್ರ, ಶಾಸ್ತ್ರ ಮತ್ತು ಅಸ್ತ್ರಗಳ ಮೂಲಕ ಜಗತ್ತಿಗೆ ವಿವಿಧ ಸಂದೇಶಗಳನ್ನು ನೀಡಿದ ಅಪ್ರಮೇಯ ವ್ಯಕ್ತಿತ್ವ ಶ್ರೀಕೃಷ್ಣ ಅವರದು ಎಂದು ತಿಳಿಸಿದರು.

ಕೃಷ್ಣನು ಕೇವಲ ಬದುಕುವ ಕಲೆಯನ್ನು ಮಾತ್ರವಲ್ಲದೆ, ಬದುಕಿನ ಪ್ರತಿಯೊಂದು ಕ್ಷಣವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಯಾಗಿ, ಬಾಲಕನಾಗಿ, ರಾಜಕಾರಣಿಯಾಗಿ, ಆಡಳಿತಗಾರನಾಗಿ, ಸ್ನೇಹಿತನಾಗಿ ಹಾಗೂ ಸಮಾಜಮುಖಿ ವ್ಯಕ್ತಿಯಾಗಿ ಕೃಷ್ಣನ ವ್ಯಕ್ತಿತ್ವವನ್ನು ಅಧ್ಯಯನ ಮಾಡಿದರೆ ಜೀವನಕ್ಕೆ ಅಗತ್ಯವಾದ ಅನೇಕ ಪಾಠಗಳು ದೊರೆಯುತ್ತವೆ ಎಂದು ಹೇಳಿದರು.

ದ್ರೌಪದಿಯ ಮಾನ ರಕ್ಷಣೆ ಪ್ರಸಂಗವನ್ನು ಉಲ್ಲೇಖಿಸಿದ ಅವರು, ಪ್ರತಿಯೊಂದು ಸಂದರ್ಭದಲ್ಲಿ ಯಾವ ಕಾರ್ಯವನ್ನು ಮಾಡಬೇಕು ಎಂಬುದಕ್ಕೆ ಕೃಷ್ಣನ ನಡೆ ಮಾದರಿಯಾಗಿದೆ. ಅನ್ಯಾಯ ನಡೆದ ಸಂದರ್ಭದಲ್ಲಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಧರ್ಮವನ್ನು ರಕ್ಷಿಸಿದ ಸಂದೇಶವನ್ನು ಕೃಷ್ಣ ಜಗತ್ತಿಗೆ ನೀಡಿದ್ದಾರೆ ಎಂದರು.

ಭಗವಂತನ ಮುಂದೆ ಮನುಷ್ಯ ಯಾವುದೇ ಕಪಟ, ಸುಳ್ಳು ಅಥವಾ ಮುಖವಾಡವಿಲ್ಲದೆ ನಿಷ್ಕಲ್ಮಷ ಮನಸ್ಸಿನಿಂದ ಇರಬೇಕು, ಮೋಹವನ್ನು ಕಳಚಿ, ಕರ್ತವ್ಯದ ಕಡೆಗೆ ಮುನ್ನಡೆಯುವಂತೆ ಮಾಡಿದ ಭಗವದ್ಗೀತೆಯ ಸಂದೇಶ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ ಎಂದರು.
ಕೃಷ್ಣನ ಜೀವನದ ಪ್ರತಿಯೊಂದು ಘಟನೆಯಲ್ಲೂ ಸಮಾನತೆ, ಸ್ನೇಹ, ಪ್ರೀತಿ ಮತ್ತು ಮಾನವೀಯತೆಯ ಸಂದೇಶ ಅಡಗಿದೆ. ಜಾತಿ, ವರ್ಗ ಅಥವಾ ಸಾಮಾಜಿಕ ಭೇದಗಳಿಗೆ ಸೀಮಿತವಾಗದೆ ಎಲ್ಲರಿಗೂ ಸೇರಿದ ವ್ಯಕ್ತಿತ್ವ ಶ್ರೀಕೃಷ್ಣ ಅವರದು ಎಂದು ತಿಳಿಸಿದರು.

ಇಂದಿನ ಕಾಲಘಟ್ಟದಲ್ಲಿ ಸಮಾಜಕ್ಕೆ ಶ್ರೀಕೃಷ್ಣನ ಚಿಂತನೆಗಳು ಮತ್ತು ಜೀವನ ಸಂದೇಶಗಳು ಅತ್ಯಗತ್ಯವಾಗಿವೆ. ಕೃಷ್ಣನನ್ನು ಕೇವಲ ಪೂಜಿಸುವುದಕ್ಕಿಂತ, ಜೀವನದ ಮೌಲ್ಯಗಳನ್ನು ಅರ್ಥಮಾಡಿಕೊಂಡು ಅಳವಡಿಸಿಕೊಂಡಾಗ ಮಾತ್ರ ಜನ್ಮಾಷ್ಟಮಿ ಆಚರಣೆಗೆ ನಿಜವಾದ ಅರ್ಥ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಮಡಿಕೇರಿ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, 
ಕೃಷ್ಣಾಷ್ಟಮಿ ಹಬ್ಬವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಮಕ್ಕಳಲ್ಲಿ ಸಂಭ್ರಮ, ಉತ್ಸಾಹ ಹಾಗೂ ಕುಟುಂಬಗಳಲ್ಲಿ ಸಂತಸದ ವಾತಾವರಣವನ್ನು ಮೂಡಿಸುವ ವಿಶೇಷ ಹಬ್ಬವಾಗಿದೆ ಎಂದರು.

ದೊಡ್ಡವರು ಜೀವನದ ನಾನಾ ಸಮಸ್ಯೆಗಳು ಮತ್ತು ಚಿಂತನೆಗಳಲ್ಲಿ ಮುಳುಗಿರುತ್ತಾರೆ. ಆದರೆ ಮಕ್ಕಳ ಮುಗ್ಧತೆ, ನಗು ಮತ್ತು ಸಂಭ್ರಮವು ನಮ್ಮ ಎಲ್ಲ ದುಃಖಗಳನ್ನು ಕ್ಷಣಮಾತ್ರದಲ್ಲಿ ಮರೆಯುವಂತೆ ಮಾಡುತ್ತದೆ. ಕೃಷ್ಣನ ಬಾಲಲೀಲೆಗಳನ್ನು ಸ್ಮರಿಸುವ ಈ ಹಬ್ಬವು ಬದುಕಿನಲ್ಲಿ ಸಂತೋಷ ಮತ್ತು ಸಕಾರಾತ್ಮಕತೆಯನ್ನು ತುಂಬುತ್ತದೆ ಎಂದು ಹೇಳಿದರು.

ಇಂತಹ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪೆÇೀಷಕರು ಪೆÇ್ರೀತ್ಸಾಹಿಸಬೇಕು. ಇದರಿಂದ ಮಕ್ಕಳ ಪ್ರತಿಭೆ ಅನಾವರಣಗೊಳ್ಳುವುದರ ಜೊತೆಗೆ ನಮ್ಮ ಸಂಸ್ಕøತಿ, ಸಂಪ್ರದಾಯಗಳ ಪರಿಚಯವೂ ಮುಂದಿನ ಪೀಳಿಗೆಗೆ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಕೃಷ್ಣಾ ಷ್ಟಮಿ ಎಲ್ಲರ ಬದುಕಿನ ಕಷ್ಟ-ದುಃಖಗಳನ್ನು ಮರೆಯುವಂತೆ ಮಾಡಿ, ಸದಾ ಸಂತೋಷ, ಶಾಂತಿ ಮತ್ತು ನೆಮ್ಮದಿಯನ್ನು ನೀಡಲಿ ಎಂದು ಹಾರೈಸಿದರು. 
ಸಮಿತಿ ಖಜಾಂಚಿ ಜಿ.ಸಿ.ರಮೇಶ್ ಅವರು ಮಾತನಾಡಿ, ಕಾರಾಗೃಹದಲ್ಲಿ ಜನಿಸಿದ ಶ್ರೀಕೃಷ್ಣನು ತನ್ನ ಜೀವನದುದ್ದಕ್ಕೂ ಧರ್ಮ, ನ್ಯಾಯ ಮತ್ತು ಕರ್ತವ್ಯದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಎಂದು ಹೇಳಿದರು.

ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಭಗವದ್ಗೀತೆಯ ಮೂಲಕ ಜೀವನದ ಮಹತ್ತರ ಸಂದೇಶ ನೀಡಿದ್ದಾರೆ. ಮನುಷ್ಯನು ಫಲಾಪೇಕ್ಷೆ ಮಾಡದೆ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂಬ ಸಂದೇಶ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಶ್ರೀಕೃಷ್ಣನ ಆದರ್ಶ, ಜೀವನ ಮೌಲ್ಯಗಳು ಹಾಗೂ ಧರ್ಮದ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶ್ರೀಕೃಷ್ಣನ ಆದರ್ಶಗಳನ್ನು ರೂಢಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಶ್ರೀಧರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 ಕಾರ್ಯಕ್ರಮದಲ್ಲಿ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷರಾದ ಜಿ.ಎಲ್.ದಾಸ, ಗೌರವಾಧ್ಯಕ್ಷರಾದ ಜಿ.ಎ.ಚಾಮಿ, ಜಿ.ಜಿ.ಬಾಲಕೃಷ್ಣ, ಉಪಾಧ್ಯಕ್ಷರಾದ ಜಿ.ಸಿ.ಜಗದೀಶ್, ಪ್ರಧಾನ ಕಾರ್ಯದರ್ಶಿ ಜಿ.ಆರ್.ಗಣೇಶ್, ನಿರ್ದೇಶಕರಾದ ರಘುರಾಮ್,  ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಎಚ್.ಎಲ್.ದಿವಾಕರ್, ಮಹಿಳಾ ಸಂಚಾಲಕಿ ಪ್ರೇಮಾ ಕೃಷ್ಣಪ್ಪ ಪಾಲ್ಗೊಂಡಿದ್ದರು.
ರಮ್ಯ ನಿರೂಪಿಸಿದರು, ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿ, ವಂದಿಸಿದರು.