ಜಿಲ್ಲಾಡಳಿತದಿಂದ ಶ್ರೀ ಮಧ್ವಾಚಾರ್ಯರ ಜಯಂತಿ
admincoorgdaily

ಮಡಿಕೇರಿ:- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ಶ್ರೀ ಜಗದ್ಗುರು ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮವು ಬುಧವಾರ ನಡೆಯಿತು.
ಶ್ರೀ ಓಂಕಾರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಿ.ರಾಜೇಂದ್ರ ಮಾತನಾಡಿ ಮಧ್ವಾಚಾರ್ಯರ ಜೀವನ ಮತ್ತು ಬೋಧನೆಯು ಇಂದಿಗೂ ಸಹ ಅಸಂಖ್ಯಾತ ಅನುಯಾಯಿಗಳಿಗೆ ಸ್ಫೂರ್ತಿದಾಯಕ ಎಂದು ಹೇಳಿದರು.
ಮಧ್ವಾಚಾರ್ಯರ ದ್ವೈತ ತತ್ತ್ವ, ಆದಿ ಶಂಕರಾಚಾರ್ಯರ ಅದ್ವೈತತತ್ತ್ವ ಹಾಗೂ ರಾಮಾನುಜಾರ್ಯರ ವಿಶಿಷ್ಟಾದ್ವೈತ ತತ್ತ್ವಗಳ ಆಚರಣೆ ಮೂಲಕ ಆಚಾರ್ಯತ್ರಯರಿಂದ ಸನಾತನ ಹಿಂದೂ ಸಂಸ್ಕೃತಿ ಭದ್ರ ಬುನಾದಿಯೊಂದಿಗೆರಾಷ್ಟ್ರದಲ್ಲಿ ಬಲಯುತವಾಗಿದೆ ಎಂದು ಜಿ.ರಾಜೇಂದ್ರ ವಿವರಿಸಿದರು.
ಮಧ್ವಾಚಾರ್ಯರ ಪರಂಪರೆಯು ಹಲವಾರು ಮಠಗಳು,ದಾಸ ಸಾಹಿತ್ಯದ ಭಕ್ತಿಪಂಥ, ಮತ್ತು ಬೋಧನೆಗಳ ಮೂಲಕ ಅಭಿವೃದ್ಧಿ ಹೊಂದಿದೆ. ಆ ದಿಸೆಯಲ್ಲಿ ಅಧ್ಯಾತ್ಮಿಕ ಅನ್ವೇಷಕರಿಗೆ ದೈವಿಕತೆ ಅರಿತುಕೊಳ್ಳುವ ಹಾದಿಯಲ್ಲಿ ಮಾರ್ಗದರ್ಶನ ನೀಡಿದ್ದಾರೆ ಎಂದು ರಾಜೇಂದ್ರ ತಿಳಿಸಿದರು.
ಮಧ್ವಾಚಾರ್ಯರ ಬೋಧನೆಗಳು ದ್ವೈತ ತತ್ತ್ವ ಶಾಸ್ತ್ರದ ಮೂಲಕ ಸಾಮಾನ್ಯ ವ್ಯಕ್ತಿಗಳೂ ಪರಮಾರ್ಥವನ್ನು ಸರಳ ರೀತಿಯಲ್ಲಿ ಅರ್ಥೈಸಿಕೊಳ್ಳಲು ಸದವಕಾಶ ಕಲ್ಪಿಸಿದೆ. ಜೀವಾತ್ಮ ಮತ್ತು ಪರಮಾತ್ಮ ನಡುವಿನ ಬಾಂಧವ್ಯವನ್ನು ಮನದಟ್ಟಾಗುವಂತೆ ವಿವರಿಸಿದ್ದಾರೆ ಎಂದರು.
ಮಧ್ವಾಚಾರ್ಯರು ಕರ್ಮ,ಜ್ಞಾನ ಹಾಗೂ ಭಕ್ತಿ ಸಂಗಮದ ದ್ವೈತ ತತ್ವವನ್ನು ಸಮರ್ಪಕವಾಗಿ ಪ್ರತಿಪಾದಿಸಿದ್ದರು ಎಂದು ಜಿ.ರಾಜೇಂದ್ರ ನುಡಿದರು.
ಕೊಡಗು ವಿಪ್ರ ಸಂಘದ ಸ್ಥಾಪಕಾಧ್ಯಕ್ಷರಾದ ಶ್ರೀಧರ್ ನೆಲ್ಲಿತ್ತಾಯ ಅವರು ಮಾತನಾಡಿ 13 ನೇ ಶತಮಾನದ ದ್ವೈತ ವೇದಾಂತ ಸಿದ್ದಾಂತದ ಪ್ರತಿಪಾದಕರಾದ ಮಧ್ವಾಚಾರ್ಯರರು ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಮಧ್ವಾಚಾರ್ಯರು ಉಡುಪಿಯಲ್ಲಿ ಪೇಜಾವರ ಮಠ ಸೇರಿದಂತೆ ಅಷ್ಟ ಮಠಗಳನ್ನು ಸ್ಥಾಪಿಸಿ, ಸಮಾಜಕ್ಕೆ ಹಲವು ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಸದಸ್ಯರಾದ ಎಸ್.ಎಸ್.ಸಂಪತ್ ಕುಮಾರ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ರಮೇಶ್ ಹೊಳ್ಳ, ಮಡಿಕೇರಿ ನಗರ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಜಗದೀಶ್ ಸೋಮಯಾಜಿ, ಗೋಣಿಕೊಪ್ಪ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ರಾಧಾಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಇದ್ದರು.
ವಂದೇ ಮಾತರಂ ಹಾಗೂ ನಾಡಗೀತೆಯನ್ನು ಕೆ.ಜಯಲಕ್ಷ್ಮಿ, ಶಾಂತಿ ಅಚ್ಚಯ್ಯ, ರಾಜೇಶ್ವರಿ ವೀಣಾ ಹೊಳ್ಳ ಮತ್ತು ಗೀತಾ ಸಂಪತ್ ಹಾಡಿದರು.
ಮಧ್ವಾಚಾರ್ಯರ ಕುರಿತ ಹಾಡುಗಳನ್ನು ತನುಶ್ರೀ, ಸ್ವಾತಿ ಅರುಣ್ ಹಾಡಿದರು, ಕುಮಾರ ವಂದಿಸಿದರು.