Kodagu

ಗೋಣಿಕೊಪ್ಪದಲ್ಲಿ ಶ್ರೀ ನಾರಾಯಣ ಗುರು ಜಯಂತಿ ಆಚರಣೆ

admincoorgdaily

ಗೋಣಿಕೊಪ್ಪದಲ್ಲಿ ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಪೊನ್ನಂಪೇಟೆ, ಸೆ.20: ಶ್ರೀ ನಾರಾಯಣ ಧರ್ಮ ಪರಿಪಾಲನ ಶಾಖಾ ಯೋಗಂ, ಗೋಣಿಕೊಪ್ಪ ಹಾಗೂ ಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ವತಿಯಿಂದ 172ನೇ ಶ್ರೀ ನಾರಾಯಣ ಗುರು ಜಯಂತಿಯನ್ನು ಭಾನುವಾರ ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರದಲ್ಲಿ ಆಚರಿಸಲಾಯಿತು.
ಮೋನಿಷಾ ನಾರಾಯಣ್ ತಂಡ ಸ್ವಾಗತ ನೃತ್ಯ ಹಾಗೂ ಸಪ್ತಾಶ್ರೀ ತಂಡದವರು ತಿರುವಾದಿರ ನೃತ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಪಿ.ಆರ್. ಸುರೇಂದ್ರ (ಸೂರ್ಯ) ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ಸಾಮಾಜಿಕ ಸುಧಾರಣೆಯಲ್ಲಿ ಬಸವಣ್ಣ ಹಾಗೂ ಶ್ರೀ ನಾರಾಯಣಗುರು ಅವರ ಕೊಡುಗೆ ಮಹತ್ವದ್ದಾಗಿದೆ. ಅಸ್ಪೃಶ್ಯತೆ, ಜಾತಿ–ಮತಗಳ ನಡುವಿನ ಭೇದಭಾವ ಮತ್ತು ಶೋಷಣೆಯಿಂದ ಕೂಡಿದ್ದ ಕೇರಳವನ್ನು ‘ದೇವರ ನಾಡು’ ಎಂದು ಕರೆಯುವ ಮಟ್ಟಕ್ಕೆ ಪರಿವರ್ತಿಸುವಲ್ಲಿ ನಾರಾಯಣಗುರು ಅವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

ಮಲಯಾಳಿ ಸಮುದಾಯದೊಂದಿಗೆ ತಮ್ಮ ಕುಟುಂಬಕ್ಕೆ ಹಲವು ವರ್ಷಗಳಿಂದ ಆತ್ಮೀಯ ಬಾಂಧವ್ಯವಿದೆ. ಗೋಣಿಕೊಪ್ಪದ ಎಸ್‌ಎನ್‌ಡಿಪಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರಕಿಸಿಕೊಡಲು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ  ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ ಅವರ ಕೊಡುಗೆಯನ್ನು ಸ್ಮರಿಸಿದರು, ಮುಂದಿನ ದಿನಗಳಲ್ಲಿಯೂ ಸಮುದಾಯದ ಅಭಿವೃದ್ಧಿಗೆ ಶಾಸಕ ಪೊನ್ನಣ್ಣ ಅವರೊಂದಿಗೆ ಕೈಜೋಡಿಸುವ ಭರವಸೆ ನೀಡಿದರು.

ಎಸ್‌ಎನ್‌ಡಿಪಿ ಯೂನಿಯನ್ ಕೊಡಗು ಅಧ್ಯಕ್ಷ ವಿ.ಕೆ. ಲೋಕೇಶ್  ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸುಮಾರು 15,000 ನೋಂದಾಯಿತ ಸದಸ್ಯರನ್ನು ಹೊಂದಿರುವ ಎಸ್.ಡಿ.ಪಿ.ಪಿ. (SNDP) ಬೃಹತ್ ಸಾಮಾಜಿಕ ಸಂಘಟನೆಯಾಗಿದೆ. ವಿಶ್ವಗುರು ನಾರಾಯಣ ಗುರುಗಳು 1903ರಲ್ಲಿ ಸ್ಥಾಪಿಸಿದ ಈ ಸಂಘಟನೆ ಇಂದು ವಿಶ್ವದಾದ್ಯಂತ ಸುಮಾರು 36 ಲಕ್ಷ ಸದಸ್ಯರು ಹಾಗೂ ಸಾವಿರಾರು ಶಾಖೆಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗಿನ ವಿರುದ್ಧ ನಾರಾಯಣ ಗುರುಗಳು ರಕ್ತಪಾತವಿಲ್ಲದೆ ಮಹತ್ವದ ಸಾಮಾಜಿಕ ಕ್ರಾಂತಿ ನಡೆಸಿದರು. ದೇವಸ್ಥಾನ ಪ್ರವೇಶ, ಶಿಕ್ಷಣ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಅವರ ಚಿಂತನೆಗಳು ದಾರಿ ಮಾಡಿಕೊಟ್ಟವು. ಮಹಾತ್ಮ ಗಾಂಧಿ ಹಾಗೂ ರವೀಂದ್ರನಾಥ ಟಾಗೋರ್ ಅವರಂತಹ ಗಣ್ಯರೂ ನಾರಾಯಣ ಗುರುಗಳನ್ನು ಭೇಟಿಯಾಗಿದ್ದರು ಎಂದು ಅವರು ಸ್ಮರಿಸಿದರು.

ಕೊಡಗು ಜಿಲ್ಲೆಯಲ್ಲಿ ಎಸ್.ಡಿ.ಪಿ.ಪಿ. ವತಿಯಿಂದ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳು, ವೈದ್ಯರು, ಪಿಎಚ್‌ಡಿ ಪದವೀಧರರು, ಚಿನ್ನದ ಪದಕ ವಿಜೇತರು, ಮಾಧ್ಯಮ ಕ್ಷೇತ್ರದವರು, ಮಾಜಿ ಸೈನಿಕರು ಹಾಗೂ ಜನಪ್ರತಿನಿಧಿಗಳನ್ನು ಗುರುತಿಸಿ ಗೌರವಿಸಲಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಚಿಂತಕರಾಗಿ ಪಾಲ್ಗೊಂಡು ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಡಾ. ರಾಮಚಂದ್ರನ್ ಎಂ ಮಾತನಾಡಿ ,ಮಹಾತ್ಮ ಗಾಂಧೀಜಿ ಹಾಗೂ ಶ್ರೀ ನಾರಾಯಣ ಗುರುಗಳ ಐತಿಹಾಸಿಕ ಭೇಟಿಯ ಸಂದರ್ಭವನ್ನು ಸ್ಮರಿಸಿಕೊಳ್ಳುತ್ತಾ, ಗುರುಗಳ ದಾರ್ಶನಿಕತೆಯ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ಮುಟ್ಟಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಗಾಂಧೀಜಿಯವರು ಇಂಗ್ಲಿಷ್‌ನಲ್ಲಿ ಮತ್ತು ನಾರಾಯಣ ಗುರುಗಳು ಸಂಸ್ಕೃತದಲ್ಲಿ ಅನುವಾದಕರ ನೆರವಿನಿಂದ ನಡೆಸಿದ ಸಂವಾದವು ಭಾರತದ ವೈಚಾರಿಕ ಇತಿಹಾಸದಲ್ಲಿ  ಪ್ರಮುಖ ಘಟ್ಟವಾಗಿದೆ.

ಸುಮಾರು 100-120 ವರ್ಷಗಳ ಹಿಂದೆ ಕೇರಳದಲ್ಲಿ ಜನಾಂಗೀಯ ತಾರತಮ್ಯ, ಅಸಮಾನತೆ ಹಾಗೂ ಮೂಲಭೂತ ಹಕ್ಕುಗಳ ನಿರಾಕರಣೆ ತೀವ್ರವಾಗಿತ್ತು. ಶೂದ್ರರು ಹಾಗೂ ಮಹಿಳೆಯರಿಗೆ ಶಿಕ್ಷಣ, ಮೇಲ್ವಸ್ತ್ರ ಧರಿಸುವ ಹಕ್ಕು ಮತ್ತು ರಸ್ತೆಯಲ್ಲಿ ಸಂಚರಿಸುವ ಸ್ವಾತಂತ್ರ್ಯವೂ ಇರಲಿಲ್ಲ. ಇಂತಹ ಸಾಮಾಜಿಕ ದುಸ್ಥಿತಿಯನ್ನು ಕಂಡು ಸ್ವಾಮಿ ವಿವೇಕಾನಂದರು ಅಂದಿನ ಕೇರಳವನ್ನು 'ಭ್ರಾಂತಾಲಯ' (ಹುಚ್ಚರ ಆಸ್ಪತ್ರೆ) ಎಂದು ಕರೆದಿದ್ದರು.
ಇಂತಹ ಕತ್ತಲೆಯ ವಾತಾವರಣದಲ್ಲಿ ಚೆಂಪಳಂತಿಯಲ್ಲಿ ಜನಿಸಿದ ಶ್ರೀ ನಾರಾಯಣ ಗುರುಗಳು, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳನ್ನು ಕರಗತ ಮಾಡಿಕೊಂಡು ಜ್ಞಾನದ ಬೆಳಕು ಚೆಲ್ಲಿದರು. 'ಮತ ಯಾವುದಾದರೇನು, ಮನುಷ್ಯ ಒಳ್ಳೆಯವನಾದರೆ ಸಾಕು' ಹಾಗೂ 'ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು' ಎಂಬ ಸಾರ್ವಕಾಲಿಕ ತತ್ತ್ವಗಳನ್ನು ಬೋಧಿಸಿದರು.

ಪ್ರಪಂಚದ 780 ಕೋಟಿ ಮಾನವರಲ್ಲೂ ಹರಿಯುವ ರಕ್ತದ ಬಣ್ಣ ಹಾಗೂ ಉಸಿರಾಡುವ ಗಾಳಿ ಒಂದೇ ಆಗಿದ್ದು, ಮಾನವ ಸಹೋದರತ್ವವೇ ಮುಖ್ಯವಾಗಿದೆ. ಗುರುಗಳು ನೀಡಿದ 'ಸಂಘಟಿತರಾಗಿ ಶಕ್ತಿಶಾಲಿಯಾಗಿರಿ' ಎಂಬ ಕರೆ ಇಂದಿನ ಲೇಬರ್ ಯೂನಿಯನ್‌ಗಳಿಂದ ಹಿಡಿದು ವಿಶ್ವಸಂಸ್ಥೆಯ ವರೆಗೆ ಜಾಗತಿಕ ಹಂತದಲ್ಲಿ ಪ್ರಸ್ತುತವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸುಧೀರ್ಘ ಸೇವೆ ಮಾಡಿದ ಎಂಟು ಮಾಜಿ ಯೋಧರನ್ನು ಹಾಗೂ ಎಸ್ಎನ್ಡಿಪಿಯ ಅಭಿವೃದ್ಧಿಗಾಗಿ ದುಡಿಯುತ್ತಿರುವ ನಾಲ್ವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರನ್ನು ಸನ್ಮಾನಿಸಿ ಗೌರವಿಸಲಾಯಿತು. 

2025-26 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಹಾಗೂ ಬಿ ಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಸದಸ್ಯರ ಮಕ್ಕಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರಜಿನಿ ಮದುರಾಜ್ ಪ್ರಾರ್ಥಿಸಿದರು‌. ಗೋಣಿಕೊಪ್ಪ ಮಹಿಳಾ ಶಾಖೆಯ ಸಹಕಾರ್ಯದರ್ಶಿ ಪ್ರೀಯಾ ಅರುಣ್ ಸ್ವಾಗತಿಸಿದರು .

ಪ್ರಾಸ್ತಾವಿಕವಾಗಿ ಕಾರ್ಯದರ್ಶಿ ಕೆ ವಿ ಭಾಸ್ಕರ್ ಮಾತನಾಡಿದರು. ಜ್ಯೋತಿ ಅರುಣ್ ಹಾಗೂ ಸುಬ್ರಮಣಿ ನಿರೂಪಿಸಿದರು. ಸಪ್ತಶ್ ರಾಮಕೃಷ್ಣನ್ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಎನ್‌ಡಿಪಿ ಗುರುಜಯಂತಿ ಆಚರಣ ಸಮಿತಿಯ ಅಧ್ಯಕ್ಷ ಪಿ.ಆರ್. ಸುರೇಂದ್ರ ಗೋಣಿಕೊಪ್ಪಲು ಎಸ್‌ಎನ್‌ಡಿಪಿ ಶಾಖೆಯ ಅಧ್ಯಕ್ಷ ಪಿ. ಜಿ. ರಾಜಶೇಖರ್ ,
ಎಸ್‌ಎನ್‌ಡಿಪಿ ಗುರು ಜಯಂತಿ ಸಂಘದ ಗೌರವಾಧ್ಯಕ್ಷ  ಶಾಜಿ ಅಚ್ಯುತನ್ ,ಕಾರ್ಯದರ್ಶಿಯಾದ ಕೆ. ಬಿ. ಭಾಸ್ಕರ್ ,ಶಾಖೆಯ ಮಹಿಳಾ ಸಂಘಟನೆಯ ಅಧ್ಯಕ್ಷೆ ಅಶ್ವಧಿ ಚಂದ್ರನ್ , ಮಾಜಿ ಸೈನಿಕರು, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.