Kodagu

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಮತ್ತು ಪ್ರೌಢ ಕಲ್ಲುಮಠ ಚಾಂಪಿಯನ್‌ಶಿಪ್

admincoorgdaily

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಮತ್ತು ಪ್ರೌಢ ಕಲ್ಲುಮಠ  ಚಾಂಪಿಯನ್‌ಶಿಪ್
ಕಲ್ಲುಮಠ:
ಶ್ರೀ ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಕಲ್ಲು ಮಠ ಇಲ್ಲಿ ಕರ್ನಾಟಕ  ಸರ್ಕಾರದ ಶಿಕ್ಷಣ ಇಲಾಖೆಯ ವತಿಯಿಂದ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟವನ್ನು ಉತ್ಸಾಹಭರಿತವಾಗಿ ಆಯೋಜಿಸಲಾಯಿತು. ಕ್ರೀಡಾಕೂಟದಲ್ಲಿ ಒಟ್ಟು ಒಂಬತ್ತು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.

ಸಂಸ್ಥೆಯ ಪರಮಪೂಜ್ಯ ಶ್ರೀ ಶ್ರೀ ಚರಮೂರ್ತಿ ಮಹಾಂತ  ಸ್ವಾಮೀಜಿ ಅವರ ಅನುಪಸ್ಥಿತಿಯಲ್ಲಿ ಶಾಲೆಯ ಉಪಾಧ್ಯಕ್ಷರಾದ ಶ್ರೀ ಡಿ.ಎಸ್. ವಿಶ್ವನಾಥ್ ಅವರು, ಕಾರ್ಯದರ್ಶಿಗಳಾದ ಶ್ರೀಯುತ ದಿವಾಕರ್ ಹೆಚ್ .ಎಂ ಅವರು, ಕೊಡ್ಲಿಪೇಟೆ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿಗಳಾದ ರವೀಶ್ ರವರು ಅವರು, ಬೆಸೂರು ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿಗಳಾದ ಮುರಳಿಧರ್ ಅವರು, ಶಾಲೆಯ ಮುಖ್ಯ ಶಿಕ್ಷಕರಾದ ಅಭಿಲಾಷ್ ಹೆಚ್. ಎಂ, ದೈಹಿಕ ಶಿಕ್ಷಕರಾದ ಪುನೀತ್ , ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕಾರ್ಯದರ್ಶಿ ಆಶಾ ಮೇಡಂ , ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾ ಕಾರ್ಯದರ್ಶಿಯಾದ ಸುನಿಲ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿ ಸಂಘದ ಕ್ರೀಡಾ ಸಚಿವರಾದ ಮಿಥುನ್ ಅವರು ಕ್ರೀಡಾ ಜ್ಯೋತಿಯನ್ನು ಓಟದ ಮೂಲಕ ತಂದು, ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಿದರು. ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದ ಶ್ರೀಯುತ ದಿವಾಕರ್ ಎಚ್.  ಎಂ ಅವರು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ನೀಡಿ, ಕ್ರೀಡೆಯು ಮಕ್ಕಳಲ್ಲಿ ಶಿಸ್ತು, ಸಮಯಪಾಲನೆ, ಆತ್ಮವಿಶ್ವಾಸ, ನಾಯಕತ್ವ ಗುಣ, ತಂಡದ ಮನೋಭಾವ ಮತ್ತು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತದೆ ಎಂದು ತಿಳಿಸಿದರು.

ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕ್ರೀಡಾಪಟುಗಳು ಶಿಸ್ತುಬದ್ಧವಾಗಿ ಪಥಸಂಚಲನದಲ್ಲಿ ಭಾಗವಹಿಸಿ ಕ್ರೀಡಾ ಸ್ಫೂರ್ತಿಯನ್ನು ಮೆರೆದರು. ಬಳಿಕ ಖೋ-ಖೋ, ವಾಲಿಬಾಲ್, ಥ್ರೋಬಾಲ್ ಮತ್ತು ಕಬಡ್ಡಿ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು.

ಈ ಬಾರಿಯೂ ಕಳೆದ ಬಾರಿಯಂತೆ ಶ್ರೀ ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಕಲ್ಲುಮಠದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಸಮಗ್ರ ಚಾಂಪಿಯನ್‌ಶಿಪ್ ಪಟ್ಟವನ್ನು ಅಲಂಕರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮುಂದಿನ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದರು.

ವಲಯ ಮಟ್ಟದ ಕ್ರೀಡಾ ಕಾರ್ಯದರ್ಶಿ ಆಶಾ ಮೇಡಂ ಅವರು ಸ್ಪರ್ಧೆಗಳ ನಿರ್ವಹಣೆಯನ್ನು ಸಮರ್ಪಕವಾಗಿ ನೆರವೇರಿಸಿ, ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಮುಂದಿನ ಹಂತದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಲಾಯಿತು.

ಬೆಸೂರು ಶಾಲೆಯಲ್ಲಿ ನಡೆದ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟದಲ್ಲೂ ಉತ್ತಮ ಸಾಧನೆ

17 ವರ್ಷದೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟವನ್ನು ಬೆಸೂರು ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿಯೂ ಶ್ರೀ ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಕಲ್ಲುಮಠದ ವಿದ್ಯಾರ್ಥಿಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದರು.

ಶಾಲೆಯ ವಿದ್ಯಾರ್ಥಿಗಳು ಖೋ-ಖೋ‌, ಕಬಡ್ಡಿ, ವಾಲಿಬಾಲ್, ಥ್ರೋಬಾಲ್ ಹಾಗೂ ಫುಟ್ಬಾಲ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಪ್ರೌಢಶಾಲಾ ವಿಭಾಗದಲ್ಲಿ ಬಾಲಕರ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ, ಬಾಲಕಿಯರ, ಥ್ರೋ ಬಾಲ್ ಮತ್ತು ಕೊಕ್ಕೋದಲ್ಲಿ ದ್ವಿತೀಯ ಸ್ಥಾನ, ಬಾಲಕರ ಫುಟ್ಬಾಲ್‌ನಲ್ಲಿ ದ್ವಿತೀಯ, ಹಾಗೂ ಅಥ್ಲೆಟಿಕ್ಸ್ ನಲ್ಲಿ ವಿವಿಧ ಸ್ಥಾನವನ್ನು  ಪಡೆದು ಶಾಲೆಗೆ ಕೀರ್ತಿ ತಂದರು.