Kodagu

ಕರಾವಳಿ ಅಭಿವೃದ್ಧಿಗೆ ರಾಜ್ಯ ಸರ್ಕಾರ 32,612 ಕೋಟಿ ರೂ ಅನುಮೋದನೆ, ತುಳು ಎರಡನೇ ಅಧಿಕೃತ ಭಾಷೆ; ಸಚಿವ ಸಂಪುಟ ನಿರ್ಣಯ

admincoorgdaily

ಕರಾವಳಿ ಅಭಿವೃದ್ಧಿಗೆ ರಾಜ್ಯ ಸರ್ಕಾರ 32,612 ಕೋಟಿ ರೂ  ಅನುಮೋದನೆ, ತುಳು ಎರಡನೇ ಅಧಿಕೃತ ಭಾಷೆ; ಸಚಿವ ಸಂಪುಟ ನಿರ್ಣಯ
ಮಂಗಳೂರು:- ತುಳು ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳುಭಾಷೆ ಮಾತನಾಡುತ್ತಾರೆ. ಹಾಗಾಗಿ ಈ ಎರಡು ಜಿಲ್ಲೆಗೆ ಅನ್ವಯವಾಗುವಂತೆ ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯಾಗಿ ಜಾರಿಗೊಳಿಸಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ತಿಳಿಸಿದ್ದಾರೆ. 

       ನಗರದ ಪ್ರಜಾಸೌಧ ಕಟ್ಟಡದ ಸಭಾಂಗಣದಲ್ಲಿ  ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
      ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದ್ದು, ಈ ಹಿನ್ನೆಲೆ ಸಾವಜನಿಕರಿಂದ ಅಭಿಪ್ರಾಯ ಪಡೆದು  ತೀರ್ಮಾನಿಸಲಾಗುವುದು. ಈ ಸಂಬಂಧ ಸಾವಜನಿಕರು ಒಂದು ತಿಂಗಳಲ್ಲಿ ಅಭಿಪ್ರಾಯ ನೀಡಬಹುದಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.

      ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬುದು ಸರಕಾರದ ಉದ್ದೇಶವಾಗಿದೆ.  ಆ ದಿಸೆಯಲ್ಲಿ ಪುತ್ತೂರು ತಾಲೂಕಿನ  ಬನ್ನೂರು ಗ್ರಾಮದಲ್ಲಿ ಗುರುತಿಸಿರುವ ಜಾಗದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು, ಬೋಧನಾ ಆಸ್ಪತ್ರೆ, ಹಾಸ್ಟೆಲ್‌ ಮತ್ತಿತರ ಮೂಲಭೂತ ಸೌಲಭ್ಯ ಒಳಗೊಂಡಂತೆ 549.79 ಕೋ.ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ತಿಳಿಸಿದರು.

    ಕರಾವಳಿ, ಮಲೆನಾಡು ಭಾಗದಲ್ಲಿ ಕರ್ನಾಟಕ ಪ್ರವಾಸೋದ್ಯಮ ನೀತಿ 2026 ಜಾರಿಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಹೊಸ ಪ್ರವಾಸೋದ್ಯಮ ನೀತಿಯಿಂದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದರಿಂದ ಮೂಲ ಸೌಲಭ್ಯ ಅಭಿವೃದ್ಧಿಗೆ ಒಳಿತಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
    ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರವಾಸೋದ್ಯಮ ಮಂಡಳಿ ಸ್ಥಾಪಿಸಲಾಗುವುದು. ಇದಕ್ಕಾಗಿ 500 ಕೋಟಿ ರೂ ಅನುದಾನ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು. 

      ದಕ್ಷಿಣ ಕನ್ನಡದಲ್ಲಿ ಮೀನುಗಾರಿಕಾ ಕಾಲೇಜು ಇದ್ದು, 60 ಮಂದಿ ವ್ಯಾಸಂಗ ಮಾಡಲು ಅವಕಾಶವಿದೆ. ಇನ್ನೂ 200 ಮಂದಿ ವ್ಯಾಸಂಗ ಮಾಡಲು ಅವಕಾಶ ಮಾಡಲಾಗುವುದು ಜೊತೆಗೆ ಮೀನುಗಾರಿಕಾ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆ ಆರಂಭಿಸಬೇಕು ಎಂಬ ಬೇಡಿಕೆ ಇದ್ದು, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
    ಸಮಗ್ರ ಕರ್ನಾಟಕ -ಸಮೃದ್ಧಿ ಕರ್ನಾಟಕ ಆಗಬೇಕು ಎಂಬುವುದು ಸರಕಾರದ ಆಶಯವಾಗಿದೆ. ಆ ನಿಟ್ಟಿನಲ್ಲಿ ಕರಾವಳಿ ಮತ್ತು ಮಲೆನಾಡು  ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು. 

     ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಧಾರ್ಮಿವಾಗಿ ಶ್ರೀಮಂತಿಕೆ ಹೊಂದಿವೆ. ಬ್ಯಾಂಕ್ ಗಳ ಉದಯಕ್ಕೆ ಕಾರಣವಾಗಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಚೇತ್ರದಲ್ಲಿ ಮುಂದೆ ಇದ್ದು, ಬಂದರು ಅಭಿವೃದ್ಧಿಗೂ ಸಹ ಮತ್ತಷ್ಟು ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.

      ಕರಾವಳಿ ಅಭಿವೃದ್ಧಿಗೆ ಚೇಂಬರ್ ಆಫ್ ಕಾಮರ್ಸ್ ಮೀನುಗಾರರು, ಕೈಗಾರಿಕೋದ್ಯಮಿಗಳು ಸೇರಿದಂತೆ ಹಲವರು ಹಲವು ಸಲಹೆ ನೀಡಿದ್ದಾರೆ. ಅವುಗಳನ್ನು ಪರಿಗಣಿಸಲಾಗುವುದು. ಒಟ್ಟಾರೆ ಇಂದಿನ ಸಚಿವ ಸಂಪುಟದಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ 32,612 ಕೋ.ರೂ ಅನುಮೋದನೆ ನೀಡಿದ್ದು, ಇದರಲ್ಲಿ ಗ್ರಾಮೀಣಾಭಿವೃದ್ಧಿ 16 ಸಾವಿರ ಕೋಟಿ ರೂ ಮತ್ತು ಮೂಲಸೌಲಭ್ಯ ಅಭಿವೃದ್ಧಿಗೆ 16 ಸಾವಿರ ಕೋಟಿ ರೂ ಒಳಗೊಂಡಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

       ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಮಾತನಾಡಿ, ಇದೊಂದು ಐತಿಹಾಸಿಕ ಸಂಪುಟ ಸಭೆಯಾಗಿದ್ದು, ಮೂಲ ಸೌಲಭ್ಯ ಬಂದರು ಒಳನಾಡು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು. 
     ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ಪಾಲಕ, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ನೇಮಕಾತಿಯಲ್ಲಿ      ಆದಿವಾಸಿ ಬುಡಕಟ್ಟು ಸಮಾಜದವರಿಗೆ ಶೇ.30 ರಷ್ಟು ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ತೀರ್ಮಾನಿಸಲಾಗಿದೆ ಎಂದು   ಉಪ ಮುಖ್ಯಮಂತ್ರಿ   ಅವರು ಹೇಳಿದರು. 

   ಸೋಲಿಗ, ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬ, ಪಣಿಯ, ಎರವ, ಕುಡಿಯ, ಮಲೆಕುಡಿಯ, ಹಲಸರು, ಸಿದ್ದಿ, ಕೊರಗರು ಮತ್ತಿತರ ಬುಡಕಟ್ಟು ಜನಾಂಗಗಳಿಗೆ  ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ ವಿಶೇಷ ಪ್ರಾಧಾನ್ಯತೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದೊಂದು ಐತಿಹಾಸಿಕ ದಾಖಲೆ ಎಂದು ಉಪ ಮುಖ್ಯಮಂತ್ರಿ ಅವರು ವರ್ಣಿಸಿದರು.
ಸಚಿವರಾದ ಯು.ಟಿ. ಖಾದರ್, ರಿಜ್ವಾನ್ ಅರ್ಷದ್, ವಿಜಯಾನಂದ್ ಕಾಶಪ್ಪನವರ್, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.