Kodagu

ರಾಜ್ಯ ಸರ್ಕಾರ ದಿವಾಳಿ: 24 ಸಾವಿರ ಕೋಟಿ ಕೊರತೆ, - ಮಾಜಿ ಶಾಸಕ ಅಪ್ಪಚ್ಚು ರಂಜನ್ ವಾಗ್ದಾಳಿ

admincoorgdaily

ರಾಜ್ಯ ಸರ್ಕಾರ ದಿವಾಳಿ: 24 ಸಾವಿರ ಕೋಟಿ ಕೊರತೆ, - ಮಾಜಿ ಶಾಸಕ ಅಪ್ಪಚ್ಚು ರಂಜನ್ ವಾಗ್ದಾಳಿ
ಕುಶಾಲನಗರ:ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ವೈಫಲ್ಯದಿಂದ ದಿವಾಳಿಯಾಗಿದ್ದು, ಬಜೆಟ್‌ನಲ್ಲಿ 24 ಸಾವಿರ ಕೋಟಿ ಕೊರತೆ ಇದ್ದರೂ ಪೊಳ್ಳು ಘೋಷಣೆಗಳನ್ನು ಮಾಡುತ್ತಿದೆ ಎಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಆಕ್ರೋಶ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದರು.

ವಿಧಾನಸಭೆಯಲ್ಲಿ 89 ಕೋಟಿ ದುರುಪಯೋಗವಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಅಂತಹವರನ್ನು ಮಂತ್ರಿ ಮಾಡಿ, ನಂತರ ರಾಜೀನಾಮೆ ಕೊಡುವ ಪರಿಸ್ಥಿತಿ ತಂದಿದ್ದು ಈ ಸರ್ಕಾರದ ಸಾಧನೆ ಎಂದು ಟೀಕಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸಿದ್ದಾಂತ ಎಜುಕೇಶನ್ ಟ್ರಸ್ಟ್ ಹೆಸರಿನಲ್ಲಿ 11 ಎಕರೆ ಜಾಗವನ್ನು ಬೋಗಸ್ ದಾಖಲೆ ಮೂಲಕ ಪಡೆದಿದ್ದಾರೆ. ಕೋರ್ಟ್ ಆದೇಶವಿದ್ದ 14 ಜನರಿಗೆ ಕೋಟ್ಯಂತರ ರೂಪಾಯಿ ಲಂಚ ಪಡೆದು ಅಪಾರ್ಟ್‌ಮೆಂಟ್ ಹಂಚಿಕೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಮೀಸಲಿಡಬೇಕಾದ ಬಜೆಟ್‌ನ ಶೇ.18ರಷ್ಟು ಹಣವನ್ನು ಕೂಡ ಈ ಸರ್ಕಾರ ಸಮರ್ಪಕವಾಗಿ ಬಳಕೆ ಮಾಡಿಲ್ಲ. ಇದು ಎಸ್‌ಸಿ/ಎಸ್‌ಟಿ ಜನಾಂಗಕ್ಕೆ ಮಾಡಿದ ದ್ರೋಹ ಎಂದು ಕಿಡಿಕಾರಿದರು.

ಮುಖ್ಯಮಂತ್ರಿಗಳು ದೇಶದಲ್ಲೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ. ಅವರು ಮನಸ್ಸು ಮಾಡಿದರೆ ತಮ್ಮ ಸ್ವಂತ ಹಣದಿಂದಲಾದರೂ ಈ ರಾಜ್ಯವನ್ನು ಉದ್ಧಾರ ಮಾಡಬಹುದು. ರೈತರ ಸಾಲಮನ್ನಾ ಮಾಡಿ ಪುಣ್ಯ ಕಟ್ಟಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳೆಗಾರರಿಗೆ ಮೂರು ಬಾರಿ ಪರಿಹಾರ ನೀಡಿದ್ದೇವೆ. 38 ಕೋಟಿ, 66 ಕೋಟಿ ಮತ್ತು 103 ಕೋಟಿ ರೂ.ಗಳನ್ನು ಸಣ್ಣ ಬೆಳೆಗಾರರಿಗೆ ತಲಾ 56 ಸಾವಿರದಂತೆ ನೇರವಾಗಿ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಆದರೆ ಈ ಸರ್ಕಾರ ರೈತ, ಬಡವ, ಕೂಲಿ ಕಾರ್ಮಿಕ ವಿರೋಧಿ ಸರ್ಕಾರ ಎಂದು ಆರೋಪಿಸಿದರು.

ಕಸ್ತೂರಿ ರಂಗನ್ ಮತ್ತು ಸಿ & ಡಿ ಲ್ಯಾಂಡ್ ಸಮಸ್ಯೆ:

ಕಸ್ತೂರಿ ರಂಗನ್ ವರದಿಯನ್ನು ಎಲ್ಲಾ ಪಕ್ಷಗಳು ಸೇರಿ ವಿರೋಧಿಸಿ ರಿಜೆಕ್ಟ್ ಮಾಡಿಸಿದ್ದೇವೆ. ಆದರೆ ಕೇಂದ್ರ ಸರ್ಕಾರ ರಚಿಸುವ ಸಮಿತಿಯಲ್ಲಿ ಅಧಿಕಾರಿಗಳ ಜೊತೆಗೆ ರೈತರನ್ನು ಕೂಡ ಸೇರಿಸಬೇಕು. ಜನವಸತಿ ಪ್ರದೇಶದಲ್ಲೇ ಕೊಡಗಿನ 53 ಗ್ರಾಮಗಳನ್ನು ಸೇರಿಸಿರುವುದನ್ನು ಕೈಬಿಡಬೇಕು. ನ್ಯಾಚುರಲ್ ಫಾರೆಸ್ಟ್ ಮತ್ತು ಇಎಸ್‌ಝಡ್ ಅನ್ನು ಝೀರೋಗೆ ತರಬೇಕು ಎಂದು ಆಗ್ರಹಿಸಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಿ & ಡಿ ಜಾಗವನ್ನು ಅರಣ್ಯಕ್ಕೆ ಹಸ್ತಾಂತರಿಸಿ ಆದೇಶ ಮಾಡಿರುವುದು ಖಂಡನೀಯ. ಇದರಿಂದ ಶಾಂತಳ್ಳಿ, ಬೆಟ್ಟದಳ್ಳಿ, ತೋರೆನೂರು, ಶೆಟ್ಟಳ್ಳಿ, ಸುರ್ಲಬ್ಬಿ ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಅನ್ಯಾಯವಾಗಿದೆ. 50-100 ವರ್ಷಗಳಿಂದ ವಾಸವಿರುವ ಬಡವರಿಗೆ 10 ಗುಂಟೆ ಜಮೀನು ನೀಡಲೂ ಈ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಡಾನೆ, ಹುಲಿ ದಾಳಿಯಿಂದ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲೇ 48 ಜನ ಸಾವನ್ನಪ್ಪಿದ್ದಾರೆ. ನಮ್ಮ ಅವಧಿಯಲ್ಲಿ ವರ್ಷಕ್ಕೆ 2-3 ಜನ ಸಾಯುತ್ತಿದ್ದರು. ಜನರಿಗೆ ರಕ್ಷಣೆ ನೀಡಲು ಈ ಸರ್ಕಾರ ವಿಫಲವಾಗಿದೆ. ವಂದೇ ಮಾತರಂ ವಿಚಾರದಲ್ಲೂ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ಕೇಂದ್ರದ ಆದೇಶ ಪಾಲಿಸದಿದ್ದರೆ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಒತ್ತಾಯಿಸಿದರು.