Kodagu

ಕೊಡಗು ಜಿಲ್ಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿಜೆ, ಧ್ವನಿವರ್ಧಕ ಬಳಕೆಗೆ ಕಟ್ಟುನಿಟ್ಟಿನ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ

admincoorgdaily

ಕೊಡಗು ಜಿಲ್ಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿಜೆ, ಧ್ವನಿವರ್ಧಕ ಬಳಕೆಗೆ ಕಟ್ಟುನಿಟ್ಟಿನ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳು, ಹಬ್ಬ, ಜಾತ್ರೆ, ಮದುವೆ ಮೆರವಣಿಗೆಗಳಲ್ಲಿ ಡಿಜೆ, ಧ್ವನಿವರ್ಧಕಗಳ ಅತಿಯಾದ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸೋಮಶೇಖರ್ ಎಸ್.ಜೆ. ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಹಾಗೂ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ Noise Pollution (Regulation and Control) Rules, 2000 ಹಾಗೂ 35 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರ ಅಡಿ ಈ ಆದೇಶ ಜಾರಿಗೊಳಿಸಲಾಗಿದೆ.

ಆದೇಶದ ಪ್ರಮುಖ ಅಂಶಗಳು:

1.ಕೊಡಗು ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ನಡೆಯುವ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ Environment (Protection) Act-1986 ಮತ್ತು Noise Pollution Rules-2000ರ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

2.ಸುಪ್ರೀಂಕೋರ್ಟ್ ರಿಟ್ ಅರ್ಜಿ ಸಂಖ್ಯೆ 72/1998ರ ಆದೇಶ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಇಎನ್ 128/ಪಿಎಸ್ಇ/2022 ದಿನಾಂಕ 10-05-2022ರ ಅನ್ವಯ ನಿಗದಿತ ಡೆಸಿಬಲ್ (dB) ಮಿತಿಗಿಂತ ಹೆಚ್ಚು ಶಬ್ದ ಹೊರಡಿಸುವ ಯಾವುದೇ ರೀತಿಯ ಧ್ವನಿವರ್ಧಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

3.ಮಾನ್ಯ ಸುಪ್ರೀಂಕೋರ್ಟ್ ನ್ಯಾಯಾಲಯದ ತೀರ್ಪಿನ ಪ್ರಕಾರ ರಾತ್ರಿ 10:00 ಗಂಟೆಯಿಂದ ಬೆಳಗ್ಗೆ 06:00 ಗಂಟೆಯ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.

4.ಹಗಲು ಅವಧಿಯಲ್ಲಿ ನಿಯಮಾನುಸಾರ ಧ್ವನಿವರ್ಧಕಗಳನ್ನು ಬಳಸಲು ಇಚ್ಛಿಸುವ ಸಾರ್ವಜನಿಕರು/ಸಂಘ-ಸಂಸ್ಥೆಗಳು ಸಂಬಂಧಪಟ್ಟ ಸಹಾಯಕ ದಂಡಾಧಿಕಾರಿಗಳಿಂದ ಲಿಖಿತ ಪೂರ್ವಾನುಮತಿ ಪಡೆಯುವುದು ಕಡ್ಡಾಯ.

ಈ ಆದೇಶವನ್ನು ಉಲ್ಲಂಘಿಸಿ ಹೆಚ್ಚಿನ ಶಬ್ದ ಹೊರಡಿಸುವ ಧ್ವನಿವರ್ಧಕಗಳನ್ನು ಬಳಸಿದಲ್ಲಿ ಅಂತಹ ಉಪಕರಣಗಳನ್ನು ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಸಂಬಂಧಪಟ್ಟವರ ವಿರುದ್ಧ ಕಾನೂನು ರೀತ್ಯಾ ಪ್ರಕರಣಗಳು ಹಾಗೂ ಪೊಲೀಸ್ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಆದೇಶವನ್ನು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಇವರು ತಕ್ಷಣದಿಂದ ಜಾರಿಗೆ ತರಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.