ಕೊಡಗಿನ ಮಲಯಾಳಿ ಸಮುದಾಯದ ಕುರಿತ ಪ್ರತಾಪ್ ಸಿಂಹ ಹೇಳಿಕೆಗೆ ತೀವ್ರ ಖಂಡನೆ
admincoorgdaily

ಮಡಿಕೇರಿ: ಕೊಡಗಿನ ಮಲಯಾಳಿ ಸಮುದಾಯದ ಕುರಿತು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಕೊಡಗಿನಾದ್ಯಂತ ಇರುವ ವಿವಿಧ ಮಲಯಾಳಿ ಸಂಘಟನೆಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ.
ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಪ್ರತಾಪ್ ಸಿಂಹ ಅವರು, ಕೊಡವ ಸಂಸ್ಕೃತಿಗೆ ಕೇರಳ ಮೂಲದ ಮಲಯಾಳಿ ಸಮುದಾಯದಿಂದ ಧಕ್ಕೆ ಆಗುತ್ತಿದೆ ಎಂಬ ಅರ್ಥ ಬರುವಂತೆ ಅವಹೇಳನಕಾರಿಯಾಗಿ ಮಾತನಾಡಿರುವುದು ಕೊಡಗಿನ ಮಲಯಾಳಿ ಸಮುದಾಯದವರಿಗೆ ನೋವುಂಟು ಮಾಡಿದೆ ಎಂದು ಸಂಘಟನೆಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿವೆ.
ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಜಿಲ್ಲಾ ಸಮಿತಿ ಹಾಗೂ ಕೊಡಗಿನ ವಿವಿಧ ಹಿಂದೂ ಮಲಯಾಳಿ ಸಂಘಟನೆಗಳು, ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ., ವಿಶ್ವಕರ್ಮ ಸಂಘಟನೆ, ಕೆ.ಎನ್.ಎಸ್. ಹಾಗೂ ತಿಯನ್ ಮಹಾಸಭಾ ಸಂಘಟನೆಗಳು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ.
ಕೊಡಗು ಮತ್ತು ಕೇರಳದ ನಡುವಿನ ಬಾಂಧವ್ಯ ತಲೆಮಾರುಗಳಿಂದ ಬೆಳೆದುಬಂದಿದೆ. ವ್ಯಾಪಾರ, ಹಬ್ಬಗಳು ಮತ್ತು ಧಾರ್ಮಿಕ ಆಚರಣೆಗಳು ಈ ಬಾಂಧವ್ಯವನ್ನು ಗಟ್ಟಿಗೊಳಿಸಿವೆ. ಕೊಡಗಿನ ಹಲವು ಕುಟುಂಬಗಳಲ್ಲಿ ಮತ್ತು ಹಲವು ದೇವಾಲಯಗಳಲ್ಲಿ ಆರಾಧಿಸುವ ಹಲವು ದೇವತೆಗಳ ಪೂಜಾ ಸಂಪ್ರದಾಯಗಳು ಕೇರಳದೊಂದಿಗೆ ನಂಟು ಹೊಂದಿವೆ. ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಟುಗಳು ಎರಡೂ ಪ್ರದೇಶಗಳ ಜನರು ಪರಸ್ಪರ ನಂಬಿಕೆ ಮತ್ತು ಆಚರಣೆಗಳಿಗೆ ನೀಡಿರುವ ಗೌರವವನ್ನು ತೋರಿಸುತ್ತವೆ ಎಂದು ಪ್ರಕಟಣೆ ತಿಳಿಸಿದೆ.
ಕೊಡಗಿನ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಮಲಯಾಳಿ ಕುಟುಂಬಗಳು ಕೊಡವ ಸಮುದಾಯ ಹಾಗೂ ಜಿಲ್ಲೆಯ ಇತರ ಸಮುದಾಯಗಳೊಂದಿಗೆ ತಲೆಮಾರುಗಳಿಂದ ನೆರೆಹೊರೆಯವರಾಗಿ, ಪರಸ್ಪರ ಸುಖದುಃಖಗಳಲ್ಲಿ ಜೊತೆಯಾಗಿ ಬದುಕಿವೆ. ನಮ್ಮ ಸಮುದಾಯದ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಯಾವುದೇ ರಾಜಕೀಯ ನಾಯಕರಿಂದ ಪ್ರಮಾಣಪತ್ರ ಬೇಕಿಲ್ಲ. ಕೊಡಗಿನ ಜನರೊಂದಿಗೆ ನಾವು ಬೆಳೆಸಿಕೊಂಡಿರುವ ಪರಸ್ಪರ ವಿಶ್ವಾಸ ಮತ್ತು ಗೌರವವೇ ನಮ್ಮ ಸಹಬಾಳ್ವೆಗೆ ಸಾಕ್ಷಿ ಎಂದು ಸಂಘಟನೆಗಳು ಹೇಳಿವೆ.
ಒಂದು ಸಮೀಕ್ಷೆಯ ಅಂದಾಜಿನ ಪ್ರಕಾರ, ಕೊಡಗು ಜಿಲ್ಲೆಯಲ್ಲಿ ಸುಮಾರು 45,000 ಮಲಯಾಳಿಗಳು ವಾಸಿಸುತ್ತಿದ್ದಾರೆ. ಜಿಲ್ಲೆಯ ಕೃಷಿ, ವ್ಯಾಪಾರ, ಶಿಕ್ಷಣ ಮತ್ತು ಸೇವಾ ಕ್ಷೇತ್ರಗಳಲ್ಲಿ ಸಮುದಾಯದವರು ತಮ್ಮ ಕೊಡುಗೆ ನೀಡುತ್ತಿದ್ದಾರೆ. ದೇಶದ ಅಭಿವೃದ್ಧಿಯಲ್ಲಿಯೂ ಮಲಯಾಳಿ ಸಮುದಾಯದವರು ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಉದ್ಯಮ, ಕ್ರೀಡೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ವೈವಿಧ್ಯತೆಯಲ್ಲಿ ಏಕತೆ ಭಾರತದ ಶಕ್ತಿ. ನಮ್ಮ ಸಂಸ್ಕೃತಿಯನ್ನು ಆಚರಿಸುವುದಷ್ಟೇ ಸಹಜವಾಗಿ ಇತರರ ಸಂಸ್ಕೃತಿಯನ್ನು ಗೌರವಿಸುವುದು ನಮ್ಮ ಸಹಬಾಳ್ವೆಯ ಆಧಾರ. ಸಾರ್ವಜನಿಕ ಜೀವನದಲ್ಲಿ ಗೌರವಾನ್ವಿತ ಸ್ಥಾನ ವಹಿಸಿದವರು ಯಾವುದೇ ಜಾತಿ, ಸಮುದಾಯ ಅಥವಾ ಧರ್ಮದವರ ಭಾವನೆಗಳಿಗೆ ಧಕ್ಕೆಯಾಗದಂತೆ ಜವಾಬ್ದಾರಿಯಿಂದ ಮಾತನಾಡಬೇಕು. ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವುದು ನಾಯಕತ್ವದ ಮೂಲ ಗುಣ. ಒಂದು ಸಮುದಾಯದ ಮೇಲೆ ಒಟ್ಟಾಗಿ ಹೊಣೆ ಹೊರಿಸುವ ಇಂತಹ ಹೇಳಿಕೆ ಆ ನಾಯಕತ್ವದ ಹೊಣೆಗಾರಿಕೆಗೆ ತಕ್ಕದ್ದಲ್ಲ ಎಂಬುದು ನಮ್ಮ ಅಭಿಪ್ರಾಯ ಎಂದು ಸಂಘಟನೆಗಳು ಹೇಳಿವೆ.
ಕೊಡಗಿನ ಸಂಸ್ಕೃತಿ, ಕೊಡಗಿನ ಸಂಪ್ರದಾಯ, ಆಚಾರ-ವಿಚಾರ ಮತ್ತು ಇತಿಹಾಸಕ್ಕೆ ತನ್ನದೇ ಆದ ಗೌರವವಿದೆ. ಅದನ್ನು ನಾವು ಕೂಡ ಗೌರವಿಸುತ್ತೇವೆ. ನಮಗೆ ಬೇಕಾಗಿರುವುದು ಸಂಘರ್ಷವಲ್ಲ, ಗೌರವ. ನಮಗೆ ಬೇಕಾಗಿರುವುದು ದ್ವೇಷವಲ್ಲ, ಸಹಬಾಳ್ವೆ. ಆದರೆ ನಮ್ಮ ಸಮುದಾಯದ ಆತ್ಮಗೌರವದ ವಿಚಾರದಲ್ಲಿ ನಾವು ಎಂದಿಗೂ ಮೌನವಾಗಿರುವುದಿಲ್ಲ ಎಂದು ಪ್ರಕಟಣೆ ಎಚ್ಚರಿಸಿದೆ.
ಕೊಡಗಿನ ಸಂಸ್ಕೃತಿಯನ್ನು ನಾಶ ಮಾಡುತ್ತಿರುವುದಕ್ಕೆ ಪ್ರತಾಪ್ ಸಿಂಹರವರ ಬಳಿ ನಿರ್ದಿಷ್ಟವಾದ ಸಾಕ್ಷ್ಯಗಳಿದ್ದರೆ ಅವುಗಳನ್ನು ಜನರ ಮುಂದೆ ಇಡಿ. ಯಾರಾದರೂ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ ಇಡೀ ಮಲಯಾಳಿ ಸಮುದಾಯವನ್ನು ಅಪರಾಧಿಗಳಂತೆ ಬಿಂಬಿಸಬೇಡಿ. ಕೊಡಗಿನ ಸಂಸ್ಕೃತಿಯ ಸಂರಕ್ಷಣೆಗೆ ಸಂಬಂಧಿಸಿದ ಯಾವುದೇ ಕಳಕಳದ ಬಗ್ಗೆ ಪರಸ್ಪರ ಗೌರವದಿಂದ ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಸಂಘಟನೆಗಳು ತಿಳಿಸಿವೆ.
ಆದುದರಿಂದ ಮಾಜಿ ಸಂಸದ ಪ್ರತಾಪ್ ಸಿಂಹರವರು ಕೊಡಗಿನ ಮಲಯಾಳಿ ಜನಾಂಗದವರ ಮೇಲೆ ಸಾರ್ವಜನಿಕ ಸಮಾರಂಭದಲ್ಲಿ ಮಾಡಿರುವ ನಿಂದನಾರ್ಹ ಹೇಳಿಕೆಯನ್ನು ಹಿಂಪಡೆಯಬೇಕು. ಅದರಿಂದ ಸಮುದಾಯಕ್ಕೆ ಉಂಟಾದ ನೋವಿಗೆ ಪತ್ರಿಕಾಗೋಷ್ಠಿಯ ಮುಖೇನ ವಿಷಾದ ವ್ಯಕ್ತಪಡಿಸಬೇಕೆಂದು ಆಗ್ರಹಿಸುತ್ತೇವೆ. ತಪ್ಪಿದಲ್ಲಿ ಮುಂದೆ ಆಗುವ ಹಾಗೂ ಹೋಗುಗಳಿಗೆ ಪ್ರತಾಪ್ ಸಿಂಹರವರೇ ಹೊಣೆಗಾರರಾಗುತ್ತಾರೆ ಎಂಬುದನ್ನು ಮನಗಾಣಬೇಕು. ಕೊಡಗಿನ ಪರಂಪರೆಯನ್ನು ಗೌರವಿಸುತ್ತಾ, ಜಿಲ್ಲೆಯ ಎಲ್ಲಾ ಸಮುದಾಯಗಳೊಂದಿಗೆ ಸೌಹಾರ್ದದಿಂದ ಬದುಕುವ ನಮ್ಮ ಬದ್ಧತೆಯನ್ನು ಈ ಸಂದರ್ಭದಲ್ಲಿ ಪುನರುಚ್ಚರಿಸುತ್ತೇವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.