Kodagu

ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟ

admincoorgdaily

ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟ
ಸುಳ್ಯ: ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜು, ಕುರುಂಜಿಭಾಗ್ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟವು ಅಕ್ಟೋಬರ್ 31ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ತಾಲೂಕಿನ 10 ಪದವಿ ಪೂರ್ವ ಕಾಲೇಜುಗಳ ಕ್ರೀಡಾಪಟುಗಳು ಆಕರ್ಷಕ ಪಥಸಂಚಲನ ನಡೆಸಿ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಅಮರಜ್ಯೋತಿ ಕಾಲೇಜಿನ ವಿದ್ಯಾರ್ಥಿನಿ ಕೃತಿ ಮತ್ತು ತಂಡದವರು ಪ್ರಾರ್ಥನೆ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋಧ ರಾಮಚಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕ್ರೀಡಾ ಜ್ಯೋತಿಯ ಆಗಮನದೊಂದಿಗೆ ಕ್ರೀಡಾಂಗಣದಲ್ಲಿ ಕ್ರೀಡಾ ವಾತಾವರಣ ಮೂಡಿಬಂದಿತು. ಮುಖ್ಯ ಅತಿಥಿಗಳಾದ ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಸಮಿತಿ 'ಬಿ'ಯ ಆಡಳಿತಾಧಿಕಾರಿ ಭವಾನಿ ಶಂಕರ್ ಅಡ್ತಲೆ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಡಾ. ಯಶೋಧ ರಾಮಚಂದ್ರ, ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಸಮಿತಿ 'ಬಿ'ಯ ಆಡಳಿತಾಧಿಕಾರಿ ಭವಾನಿ ಶಂಕರ್ ಅಡ್ತಲೆ, ಪ್ರಸನ್ನ ಕಲ್ಲಾಜೆ, ಶ್ರೀಯುತ ಮಾದವ, ಲಗೋರಿ ಆಟದ ಪಿತಾಮಹ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಆಟಗಾರ ದೊಡ್ಡಣ್ಣ ಬರಮೇಲು, ಉಪಪ್ರಾಂಶುಪಾಲರಾದ ದೀಪಕ್ ವೈ.ಆರ್. ಹಾಗೂ ಸುಳ್ಯ ತಾಲೂಕು ಪದವಿಪೂರ್ವ ಕಾಲೇಜುಗಳ ಕ್ರೀಡಾ ಸಂಯೋಜಕಿ ಮತ್ತು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು, ಅರಂತೋಡಿನ ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಿ ಉಪಸ್ಥಿತರಿದ್ದರು.

ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆಜ್ಞಾ ಬಿ. ರೈ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಥಿ ಭವಾನಿ ಶಂಕರ್ ಅಡ್ತಲೆ ಅವರು ತಮ್ಮ ಭಾಷಣದಲ್ಲಿ ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಪರಸ್ಪರ ಸಹಕಾರ ಮನೋಭಾವವನ್ನು ಬೆಳೆಸುತ್ತದೆ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಬೇಕು ಎಂದು ಕರೆ ನೀಡಿದರು.
 
 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಏರೋಬಿಕ್ಸ್ ಪ್ರದರ್ಶನ ನಡೆಯಿತು. ಸರಕಾರಿ ಪ್ರಾಥಮಿಕ ಶಾಲೆ ಅರಂತೋಡಿನ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಧನಂಜಯ ಹಾಗೂ ಕೆವಿಜಿ ಅಮರಜ್ಯೋತಿ ಕಾಲೇಜಿನ ಕನ್ನಡ ಉಪನ್ಯಾಸಕಿ ಕು. ರೀತಿ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲರಾದ ದೀಪಕ್ ವೈ.ಆರ್. ವಂದಿಸಿದರು.

ಅಪರಾಹ್ನ 4 ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಅಥ್ಲೆಟಿಕ್ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾಕೂಟದ ಯಶಸ್ವಿ ಆಯೋಜನೆಗೆ ಸಹಕರಿಸಿದ ವಿವಿಧ ಶಾಲಾ-ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಅಕ್ಷತಾ ಡಿ.ಜೆ. ಹಾಗೂ ಕ್ರೀಡಾ ಸಂಯೋಜಕರಾದ ದೀಕ್ಷಿತ್ ಎಂ.ಕೆ. ಮತ್ತು ರಾಜೇಶ್ ಜೆ.ಕೆ. ಕ್ರೀಡಾಕೂಟದ ಸಂಘಟನೆಯಲ್ಲಿ ಸಹಕರಿಸಿದರು.