ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ : ನಿವೃತ್ತ ಮುಖ್ಯ ಶಿಕ್ಷಕರಿಗೆ ಸನ್ಮಾನ
admincoorgdaily

ಸುಂಟಿಕೊಪ್ಪ, ಸೆ.26:
ಸ್ವಸ್ಥ ಹಾಗೂ ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದಾದದ್ದು ಮತ್ತು ಅಪಾರವಾದುದು ಎಂದರು.
ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ನೈತಿಕತೆ, ಗೌರವ, ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾರೆ
ಎಂದು ಲಯನ್ಸ್ ಕ್ಲಬ್ ಪ್ರಾಂತೀಯ - 6 ರ ವಲಯ - 3 ರ ಅಧ್ಯಕ್ಷ ಮದನ್ ಮಾದಯ್ಯ ಹೇಳಿದರು.
ಸುಂಟಿಕೊಪ್ಪ ಲಯನ್ಸ್ ಕ್ಲಬ್ ಗೆ
ಶುಕ್ರವಾರ ( ಸೆ.25 ರಂದು ) ಸಂಜೆ ಭೇಟಿ ನೀಡಿ
ಶಿಕ್ಷಕರ ದಿನಾಚರಣೆ ಹಾಗೂ ಸಾಮಾಜಿಕ ದಿನಾಚರಣೆಯ
ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಶಿಕ್ಷಕರ ದಿನಾಚರಣೆಯ
ಮಹತ್ವ ಕುರಿತು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕೇವಲ ಪುಸ್ತಕದ ಜ್ಞಾನದ ಜತೆಗೆ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ನೀಡುವುದು ಮುಖ್ಯವಾಗಿದೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನವು ದೇವರಿಗಿಂತಲೂ ಮಿಗಿಲಾದದ್ದು ಮತ್ತು ಅತ್ಯಂತ ಶ್ರೇಷ್ಠವಾದದ್ದು. ಗುರುವು ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೋಡಿಸಿ, ಜ್ಞಾನವೆಂಬ ಬೆಳಕನ್ನು ನೀಡುವ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಮೂಲಕ ತಮ್ಮನ್ನು ಶಿಕ್ಷಣದ ಜತೆಗೆ ವಿಜ್ಞಾನ, ಪರಿಸರ ಹಾಗೂ ವೈಜ್ಞಾನಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಪ್ರಗತಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಟಿ.ಜಿ.ಪ್ರೇಮಕುಮಾರ್ ಅವರ ಸೇವಾ ಕಾರ್ಯ ಅನನ್ಯವಾದುದು ಎಂದು ಮದನ್ ಮಾದಯ್ಯ ಹೇಳಿದರು.
ಪ್ರಸಕ್ತ ಸುವರ್ಣ ವರ್ಷದ ಸಂಭ್ರಮಾಚರಣೆಯ
ಲ್ಲಿರುವ ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯು ತನ್ನ 50 ವರ್ಷದ ಪಯಣದಲ್ಲಿ ಅನೇಕ ಜನಪರ ಯೋಜನೆ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಸಮಾಜಕ್ಕೆ ಸಮರ್ಪಿಸಿದೆ ಎಂದು ಶ್ಲಾಘಿಸಿದರು.
ಸುವರ್ಣ ಸಂಭ್ರಮಾಚರಣೆಯ ಮೂಲಕ
ಲಯನ್ಸ್ ಸಂಸ್ಥೆಯು ಸಮಾಜಮುಖಿ ಹಾಗೂ ವೈವಿಧ್ಯಯ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲಿ ಎಂದು ಮದನ್ ಮಾದಯ್ಯ ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ
ರಾಜ್ಯಮಟ್ಟದ ಪರಿಸರ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ವಿಶೇಷ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಪರಿಸರ ಸಂಘಟಕರೂ ಆದ
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ
ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್,
ನಾವು ಸಮಾಜದಲ್ಲಿ ಬೇರೂರಿರುವ ಅಜ್ಞಾನ, ಮೌಢ್ಯ ಹಾಗೂ ಕಂದಾಚಾರಗಳ ವಿರುದ್ಧ ಧ್ವನಿ ಎತ್ತಿ ಯುವಜನಾಂಗದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಬಗ್ಗೆ ಹೆಚ್ಚಿನ ಜನಜಾಗೃತಿ ಮೂಡಿಸುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕಿದೆ ಎಂದರು.
ನಾವು ಪರಿಸರದ ಸಮಸ್ಯೆಗಳಿಗೆ ವೈಜ್ಞಾನಿಕ ವಿಧಾನದ ಮೂಲಕ ಪರಿಹಾರ ಕಂಡುಕೊಂಡು ಉತ್ತಮ ಭವಿಷ್ಯಕ್ಕಾಗಿ ಉತ್ತಮ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕಿದೆ ಎಂದರು.
ಲಯನ್ಸ್ ಸಂಸ್ಥೆಯು ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಪರಿಸರ ಸಂರಕ್ಷಣೆ ಜತೆಗೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡುತ್ತಿರುವುದು ಶ್ಲಾಘನೀಯವಾದುದು ಎಂದು
ಪ್ರೇಮಕುಮಾರ್ ಹೇಳಿದರು.
ಲಯನ್ಸ್ ಕ್ಲಬ್ ವತಿಯಿಂದ ಕೈಗೊಳ್ಳುವ ಪರಿಸರ ಸಂರಕ್ಷಣೆ, ಸ್ವಚ್ಛತೆ, ವೈಜ್ಞಾನಿಕ ಮನೋಭಾವ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಕ್ಲಬ್ ನ ಅಧ್ಯಕ್ಷ ಎಸ್.ಜಿ.ಶ್ರೀನಿವಾಸ್,
ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದಾದದ್ದು ಮತ್ತು ಅತ್ಯಂತ ಮಹತ್ವದ್ದಾಗಿದೆ.
ಶಿಕ್ಷಕರು ಕೇವಲ ಅಕ್ಷರಜ್ಞಾನವನ್ನು ನೀಡುವುದಿಲ್ಲ, ಬದಲಾಗಿ ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತಿದ್ದಾರೆ ಎಂದರು.
ಲಯನ್ಸ್ ಕ್ಲಬ್ ನ ಸುವರ್ಣ ಮಹೋತ್ಸವ ಆಚರಣೆ ಮೂಲಕ ವೈವಿಧ್ಯಮಯ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು.
ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ 16 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸುವದರೊಂದಿಗೆ ತಮ್ಮನ್ನು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಟಿ.ಜಿ.ಪ್ರೇಮಕುಮಾರ್ ಅವರ ಸೇವಾ ಕಾರ್ಯವನ್ನು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಗುರುತಿಸಿ ಅಭಿನಂದಿಸಲಾಗಿದೆ ಎಂದು ಶ್ರೀನಿವಾಸ್ ಹೇಳಿದರು.
ಮಡಿಕೇರಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಎಲ್.ಮೋಹನ್ ಕುಮಾರ್ ಮಾತನಾಡಿದರು.
ಸೋಮವಾರಪೇಟೆ ಲಯನ್ಸ್
ಕ್ಲಬ್ ಅಧ್ಯಕ್ಷ
ಎ.ಎಸ್.ಮಹೇಶ್, ಕುಶಾಲನಗರ ಲಯನ್ಸ್
ಕ್ಲಬ್ ಅಧ್ಯಕ್ಷ ಕೆ.ಎನ್.ಪವನ್ ಕುಮಾರ್, ಮಡಿಕೇರಿ ಕ್ಲಬ್ ನ ಅಧ್ಯಕ್ಷ ಎಲ್.ಮೋಹನ್ ಕುಮಾರ್,
ಸುಂಟಿಕೊಪ್ಪ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಟಿ.ಕೆ.ರಾಜೀವ್, ಕಾರ್ಯದರ್ಶಿ ಗ್ಲೆನ್ ಮೆನೇಜಸ್, ಖಜಾಂಚಿ ಕೆ.ಪಿ.ಜಗನ್ನಾಥ್ , ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಟಿ.ವಿ.ಶೈಲಾ
ಸೇರಿದಂತೆ ಕ್ಲಬ್ ನ ಪದಾಧಿಕಾರಿಗಳು ಹಾಗೂ ಇತರೆ ಕ್ಲಬ್ ನ ಸದಸ್ಯರು,ಶಿಕ್ಷಕರು ಪಾಲ್ಗೊಂಡಿದ್ದರು.
ಟಿ.ಕೆ.ರಾಜೀವ್ ಮತ್ತು ಅಂಜಲಿ ಯಶೋಧರ ಅತಿಥಿಗಳ ಪರಿಚಯ ಮಾಡಿದರು.
ಕ್ಲಬ್ ನ ಕಾರ್ಯದರ್ಶಿ ಗ್ಲೆನ್ ಮೆನೇಜಸ್ ವಂದಿಸಿದರು.