ಸುಂಟಿಕೊಪ್ಪ: ಸಂತೆ ವ್ಯಾಪಾರಿಗಳ 12 ವಾಹನಗಳ ಗಾಜು ಪುಡಿಗೈದ ಕಿಡಿಗೇಡಿಗಳು, ಪೊಲೀಸರಿಗೆ ದೂರು
admincoorgdaily

ಸುಂಟಿಕೊಪ್ಪ:ಸಂತೆಗೆಂದು ಬಂದಿದ್ದ ವ್ಯಾಪಾರಿಗಳ 12 ವಾಹನಗಳ ಗಾಜುಗಳನ್ನು ಕಿಡಿಗೇಡಿಗಳು ಹೊಡೆದು ಹಾನಿಗೈದ ಘಟನೆ ಭಾನುವಾರ ಸುಂಟಿಕೊಪ್ಪದಲ್ಲಿ ನಡೆದಿದೆ.
ಪ್ರತಿ ಭಾನುವಾರದಂತೆ ವ್ಯಾಪಾರಕ್ಕೆ ಬಂದಿದ್ದ ವ್ಯಾಪಾರಿಗಳು ತರಕಾರಿ, ದಿನಸಿ ಮತ್ತಿತರ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಇಳಿಸಿ, ವಾಹನಗಳನ್ನು ಉಲುಗುಲಿ ರಸ್ತೆಯ ಬಂಡಿಮಾಳ ಮತ್ತು ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿ ನಿಲ್ಲಿಸಿ ವ್ಯಾಪಾರದಲ್ಲಿ ತೊಡಗಿದ್ದರು.
ಈ ವೇಳೆ ಅವಕಾಶ ಬಳಸಿಕೊಂಡ ಕಿಡಿಗೇಡಿಗಳು ವಾಹನಗಳ ಕಿಟಕಿ ಗಾಜು ಒಡೆದು, ಡ್ಯಾಶ್ ಬೋರ್ಡ್ ಒಳಗೆ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೂ ನಗದು ಅಥವಾ ಬೆಲೆಬಾಳುವ ವಸ್ತು ಸಿಗದ ಕಾರಣ ಬರಿಗೈಯಲ್ಲಿ ಪರಾರಿಯಾಗಿದ್ದಾರೆ.
ಹಗಲು ಹೊತ್ತಿನಲ್ಲೇ ಇಂತಹ ಕೃತ್ಯ ನಡೆದಿರುವುದು ಸಾರ್ವಜನಿಕರು ಮತ್ತು ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.