ಬಿಟ್ಟಂಗಾಲದಲ್ಲಿ'ಸೇವಾ ಸಂಕಲ್ಪ ಅಭಿಯಾನ'ದಡಿ ಸ್ವಚ್ಛ ಭಾರತ್ ಅಭಿಯಾನ ಯಶಸ್ವಿ
admincoorgdaily

ವಿರಾಜಪೇಟೆ:ಸೇವೆಯೇ ಸಂಘಟನೆಯ ಮೂಲಮಂತ್ರ ಹಾಗೂ ಸ್ವಚ್ಛತೆಯೇ ದೇವಸ್ಥಾನವಿದ್ದಂತೆ ಎಂಬ ಸದುದ್ದೇಶದೊಂದಿಗೆ, ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ರೈತ ಮೋರ್ಚಾ ವತಿಯಿಂದ 'ಸೇವಾ ಸಂಕಲ್ಪ ಅಭಿಯಾನ'ದ ಅಂಗವಾಗಿ ಬಿಟ್ಟಂಗಾಲ ಶಕ್ತಿ ಕೇಂದ್ರದ ಸಹಯೋಗದಲ್ಲಿ ಬಿಟ್ಟಂಗಾಲದಲ್ಲಿ ಸ್ವಚ್ಛ ಭಾರತ್ ಅಭಿಯಾನವನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಬಿಟ್ಟಂಗಾಲದ ಪ್ರಮುಖ ವೃತ್ತಗಳು, ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಬದಿಯ ಕಸಕಡ್ಡಿಗಳನ್ನು ತೆರವುಗೊಳಿಸುವ ಮೂಲಕ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ (ಶ್ರಮದಾನ) ತೊಡಗಿಸಿಕೊಂಡರು. ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ, ಪರಿಸರವನ್ನು ಸ್ವಚ್ಛವಾಗಿ ಮತ್ತು ಹಸಿರಾಗಿ ಇಟ್ಟುಕೊಳ್ಳುವ ಕುರಿತು ಸ್ಥಳೀಯ ನಿವಾಸಿಗಳಿಗೆ ಹಾಗೂ ವರ್ತಕರಿಗೆ ಜಾಗೃತಿ ಮೂಡಿಸಲಾಯಿತು.
ಈ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ, ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ಅಮ್ಮುಣಿಚಂಡ ರಂಜು ಪೂಣಚ್ಚ ಅವರು ಸ್ವಚ್ಛತಾ ಕಾರ್ಯದಲ್ಲಿ ಸ್ವತಃ ಪಾಲ್ಗೊಂಡು ಸ್ಫೂರ್ತಿ ತುಂಬಿದರು. ಸ್ವಚ್ಛ ಭಾರತ ಅಭಿಯಾನವು ಕೇವಲ ಒಂದು ಸರಕಾರಿ ಕಾರ್ಯಕ್ರಮವಾಗದೆ, ಪ್ರತಿಯೊಬ್ಬ ನಾಗರಿಕನ ದೈನಂದಿನ ಜೀವನದ ಅಭ್ಯಾಸವಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಈ ಸಮಾಜಮುಖಿ ಅಭಿಯಾನದಲ್ಲಿ ಕೊಡಗು ಜಿಲ್ಲಾ ರೈತ ಮೋರ್ಚಾದ ಎಲ್ಲಾ ಪ್ರಮುಖ ಪದಾಧಿಕಾರಿಗಳು, ಬಿಟ್ಟಂಗಾಲ ಶಕ್ತಿ ಕೇಂದ್ರದ ಸಂಚಾಲಕರು ಮತ್ತು ಸಹಸಂಚಾಲಕರು, ವಿವಿಧ ಬೂತ್‌ಗಳ ಅಧ್ಯಕ್ಷರು ಹಾಗೂ ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.