ಟಿ.ಪಿ.ರಮೇಶ್ ಅವರ 75ನೇ ಜನ್ಮ ದಿನೋತ್ಸವ ಕಾರ್ಯಕ್ರಮ : ಕ್ರಿಯಾಶೀಲತೆಯಿಂದ ನಿಶ್ಚಿತ ಗುರಿ ಸಾಧಿಸಲು ಸಾಧ್ಯ : ಶಾಸಕ ಎ.ಎಸ್.ಪೊನ್ನಣ್ಣ : ಗಣ್ಯರಿಂದ ಅಹಿಂದ ನಾಯಕನ ಸಾಧನೆಯ ಬಣ್ಣನೆ
admincoorgdaily


ಮಡಿಕೇರಿ : ಕ್ರಿಯಾಶೀಲತೆ, ಶ್ರದ್ಧೆ ಮತ್ತು ಪ್ರಾಮಾಣಿಕತನವನ್ನು ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡವರು ತಮ್ಮ ನಿಶ್ಚಿತ ಗುರಿ ಸಾಧಿಸಲು ಸಾಧ್ಯ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಘಟನೆಯ ಸರದಾರ, ಹತ್ತಾರು ಕ್ಷೇತ್ರಗಳಲ್ಲಿ ಅವಿರತ ಶ್ರಮವಹಿಸಿ ಸಮಾಜಮುಖಿ ಸೇವೆಯನ್ನು ಮಾಡಿಕೊಂಡು ಬಂದಿರುವ ಅಹಿಂದ ನಾಯಕ ಟಿ.ಪಿ.ರಮೇಶ್ ಅವರ 75ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ನಗರದ ರೆಡ್ ಬ್ರಿಕ್ಸ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
1994ರ ವಿಧಾನಸಭಾ ಚುನಾವಣೆಯಲ್ಲಿ ರಮೇಶ್ ಅವರು ಜನತಾದಳದ ಅಭ್ಯರ್ಥಿಯಾಗಿ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಿದಾಗ ನನ್ನ ತಂದೆಯವರಾದ ಎ.ಕೆ.ಸುಬ್ಬಯ್ಯ ಅವರು ಬಿಎಸ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಸ್ಪರ್ಧೆಯಲ್ಲಿ ಟಿ.ಪಿ.ರಮೇಶ್ ಅವರು ಅಲ್ಪ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಸೋಲು ಕಂಡಿದ್ದರು. ಅಲ್ಲಿಂದ ಅವರ ಪರಿಚಯವಾಯಿತು.
ಟಿ.ಪಿ.ರಮೇಶ್ ಅವರು ಕೊಡಗು ಜಿಲ್ಲೆಯಲ್ಲಿ ಹತ್ತಾರು ಸಂಘಟನೆಗಳನ್ನು ಕಟ್ಟಿ ಬೆಳೆಸಿ ಜನರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಿ ಬೆಳೆದು ಬಂದವರು. ಹಣ ಬಲ, ಜಾತಿ ಬಲ, ಯಾವುದೂ ಇಲ್ಲದ ರಮೇಶ್ ಅವರು ಬೆಳೆದು ಬಂದ ರೀತಿ ಅವರ ಶ್ರಮದ ಪ್ರತೀಕವಾಗಿದೆ ಎಂದರು.
ಮಡಿಕೇರಿ ವಿಧಾಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಟಿ.ಪಿ.ರಮೇಶ್ ಅವರನ್ನು ಸನ್ಮಾನಿಸಿ ಮಾತನಾಡಿ ಸಾರ್ವಜನಿಕ ಜೀವನದಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹಿರಿಯರ ಮಾರ್ಗದರ್ಶನ ನಮಗೆ ಬೇಕು. ಟಿ.ಪಿ.ರಮೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಕಾಲಕಾಲಕ್ಕೆ ನೀಡುವ ಸಲಹೆಗಳು ನಮ್ಮ ಕೆಲಸಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ತಿಳಿಸಿದರು.
ಅವರು ರಾಜ್ಯ ರೇಷ್ಮೆ ಮಾರಾಟ ನಿಗಮದ ಅಧ್ಯಕ್ಷರಾಗಿದ್ದಾಗ ನಮ್ಮ ತಂದೆಯವರು ರಾಜ್ಯದ ರೇಷ್ಮೆ ಇಲಾಖಾ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ರಮೇಶ್ ಅವರ ಪರಿಚಯ ನನಗಾಯಿತು ಎಂದರು.
ಕೊಡಗಿನ ರಾಜಕೀಯ ಕ್ಷೇತ್ರ ಮತ್ತು ಸಮಾಜ ಸೇವೆಗಳಲ್ಲಿ ದೀರ್ಘ ಕಾಲ ಬೆಳೆದು ಬಂದಿರುವ ಅವರು ಪ್ರಾಮಾಣಿಕ ವ್ಯಕ್ತಿತ್ವದವರಾಗಿದ್ದಾರೆ. ಅವರ ಮಾರ್ಗದರ್ಶನ ಜಿಲ್ಲೆಗೆ ಇನ್ನಷ್ಟು ಕಾಲ ದೊರಕಲೆಂದು ಶುಭ ಹಾರೈಸಿದರು.
ಟಿ.ಪಿ.ರಮೇಶ್ ಅವರ ಸಾರ್ವಜನಿಕ ಬದುಕಿಗೆ ಮತ್ತು ರಾಜಕೀಯ ಬೆಳವಣಿಗೆಗೆ ಮಾರ್ಗದರ್ಶಕರಾಗಿದ್ದ ಹಿರಿಯ ರಾಜಕಾರಣಿ, ಮುತ್ಸದ್ಧಿ ನಾಯಕ, ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರನ್ನು ರಮೇಶ್ ದಂಪತಿ ಗೌರವಿಸಿ ಸನ್ಮಾನಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಎಂ.ಸಿ.ನಾಣಯ್ಯ ಅವರು ನಾನು ಸಾರ್ವಜನಿಕ ಜೀವನ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಟಿ.ಪಿ.ರಮೇಶ್ ಅವರನ್ನು 1974 ರಲ್ಲಿ ಪರಿಚಯವಾಯಿತು. 1978 ರಲ್ಲಿ ನಾನು ಮಡಿಕೇರಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಪರವಾಗಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿ ನನ್ನ ಗೆಲುವಿಗೆ ಸಹಕಾರ ನೀಡಿದ್ದರು ಎಂದು ಬಣ್ಣಿಸಿದರು.
ನಾನು ಜೆ.ಹೆಚ್.ಪಟೇಲರ ಸರಕಾರದಲ್ಲಿ ಮಂತ್ರಿಯಾಗಿದ್ದಾಗ ರಮೇಶ್ ಅವರು ಜನತಾದಳದ ಜಿಲ್ಲಾಧ್ಯಕ್ಷರಾಗಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಿ ಪರಾಭವ ಕಂಡ ಬಳಿಕ ಅವರನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಿದೆ ಎಂದು ನೆನಪಿಸಿಕೊಂಡರು.
ಪತ್ರಿಕಾಭವನ ನಿರ್ಮಾಣ, ಅಂಗನವಾಡಿ ಸಂಘಟನೆಗಳ ಬಲವರ್ಧನೆ ಸೇರಿದಂತೆ ಎಲ್ಲಾ ಕೆಲಸಗಳಲ್ಲಿ ಅವರು ಯಶಸ್ಸನ್ನು ಕಂಡಿದ್ದಾರೆ ಎಂದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಅವರು ಟಿ.ಪಿ.ರಮೇಶ್ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಟಿ.ಪಿ.ರಮೇಶ್ ಅವರ ಬಾಲ್ಯ ಸ್ನೇಹಿತ, ಸಾಹಿತಿ, ಕವಿ, ಬಿ.ಎ.ಶಂಷುದ್ದೀನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಮೇಶ್ ನನ್ನ ಬಾಲ್ಯ ಸ್ನೇಹಿತ, ನಾನು ಅವರು ಜೊತೆ ಜೊತೆಯಾಗಿ ಬೆಳೆದವರು. ಜಿಲ್ಲೆಯಲ್ಲಿ 1981 ರಲ್ಲಿ ಗೋಕಾಕ್ ಚಳುವಳಿ ಆರಂಭಗೊಂಡಾಗ ರಮೇಶ್ ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಚಳುವಳಿಯ ನೇತೃತ್ವ ವಹಿಸಿಕೊಂಡರು. ನಾನು ಪ್ರಧಾನ ಕಾರ್ಯದರ್ಶಿಯಾಗಿದ್ದೆ, ಇಡೀ ಜಿಲ್ಲೆಯಲ್ಲಿ ಗೋಕಾಕ್ ಚಳುವಳಿ ವ್ಯಾಪಕವಾಗಿ ಹಬ್ಬಿತ್ತು. ಕೊಡಗು ಬಂದ್, ಪಂಜಿನ ಮೆರವಣಿಗೆ, ಪ್ರತಿಭಟನೆಗಳು ನಡೆದವು. ಅಂದು ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಶಕ್ತಿ ದಿನ ಪತ್ರಿಕೆಯ ಬೆಳ್ಳಿ ಹಬ್ಬಕ್ಕೆ ಆಗಮಿಸುವುದನ್ನು ತಿಳಿದು ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಲು ನಾವು ನಿರ್ಧರಿಸಿದೆವು.
ಪೊಲೀಸರು ರಾತೋರಾತ್ರಿ ಎಲ್ಲರನ್ನು ಬಂಧಿಸಲು ಮುಂದಾದರು, ರಮೇಶ್ ಅವರು ಪೊಲೀಸರ ಕೈಗೆ ಸಿಗದೆ ಎಂ.ಪಿ.ಮುತ್ತಪ್ಪ ಅವರ ಮನೆಯಲ್ಲಿ ತಂಗಿದರು.
ವಿಷಯ ತಿಳಿದು ಬೆಳಿಗ್ಗೆ ಪೊಲೀಸರು ಬಂದು ಮುತ್ತಪ್ಪ ಅವರನ್ನು ಕರೆದುಕೊಂಡು ಹೋದರು. ರಮೇಶ್ ಅವರು ಅಲ್ಲೇ ಅವಿತು ಕುಳಿತು ಚಳ್ಳೆ ಹಣ್ಣು ತಿನ್ನಿಸಿ ತಿಮ್ಮಯ್ಯ ವೃತ್ತದಲ್ಲಿ 60 ಮಂದಿ ಕಾರ್ಯಕರ್ತರೊಂದಿಗೆ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಿ ಬಂಧನಕ್ಕೆ ಒಳಗಾದರು. ಅವರಲ್ಲಿ ಚಲ ಮತ್ತು ನಾಯಕತ್ವದ ಗುಣ ಆಗಲೇ ಇತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ನಡೆಸಿ ಅವರು ಯಶಸ್ಸು ಕಂಡರು. ನಾನು ಕೂಡ ಪ್ರಧಾನ ಕಾರ್ಯದರ್ಶಿಯಾಗಿ ಅವರೊಡನೆ ಕಾರ್ಯನಿರ್ವಹಿಸಿದ್ದೇನೆ. 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಡಿಕೇರಿಗೆ ತಂದದ್ದು ದೊಡ್ಡ ಸಾಹಸವಾಗಿತ್ತು. ಸುಮಾರು 1 ವರ್ಷ ಕಾಲ ಸಮ್ಮೇಳನಕ್ಕೆ ಬೇಕಾಗುವ ಸಿದ್ಧತೆಗಳನ್ನು ಮಾಡಲಾಯಿತು. ಉಪಸಮಿತಿಗಳನ್ನು ರಚಿಸಿ ತರಬೇತಿಗಳನ್ನು ನೀಡಿ ಸಂಪೂರ್ಣ ಸ್ವಾತಂತ್ರ್ಯ ವಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಯಿತು.
ಸಮ್ಮೇಳನವನ್ನು ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಯಶಸ್ವಿಯಾಗಿ ನಡೆಸುವಲ್ಲಿ ರಮೇಶ್ ಅವರ ನಾಯಕತ್ವ ಪ್ರಮುಖ ಕಾರಣವಾಗಿದೆ ಎಂದು ಬಿ.ಎ.ಶಂಷುದ್ದೀನ್ ತಿಳಿಸಿದರು.
ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅವರು ಮಾತನಾಡಿ ಹಿಡಿದ ಕೆಲಸವನ್ನು ಚಲ ಬಿಡದೆ ಎಲ್ಲರ ಸಹಕಾರ ಪಡೆದು ಯಶಸ್ವಿಗೊಳಿಸುವ ನಾಯಕತ್ವ ಟಿ.ಪಿ.ರಮೇಶ್ ಅವರಲ್ಲಿ ಇದೆ. ಯಾವುದೇ ಕಾರ್ಯಕ್ರಮವನ್ನು ಮಾಡಿದರೂ ಅದು ಶಿಸ್ತಿನಿಂದ ಕೂಡಿರುತ್ತದೆ ಎಂದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ ಅವರು ಮಾತನಾಡಿ ಯಾವುದೇ ಸಂಘಟನೆ ಕಟ್ಟಿದರೂ ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ರಮೇಶ್ ಅವರಿಗೆ ಒಂದು ಗುರಿ ಇತ್ತು. ಹಾಗಾಗಿ ಅವರು ಜಿಲ್ಲೆಯಲ್ಲಿ ಹತ್ತಾರು ಸಂಘಟನೆಗಳಲ್ಲಿ ಯಶಸ್ವಿ ನಾಯಕರಾಗಿ ರೂಪುಗೊಂಡರು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ಕೊಡಗು ಜಿಲ್ಲೆಯ ಪತ್ರಕರ್ತರೆಲ್ಲರಿಗೂ ಅನುಕೂಲವಾಗುವಂತೆ ಪತ್ರಿಕಾ ಭವನವನ್ನು ಎಲ್ಲರ ಸಹಕಾರದೊಂದಿಗೆ ರಮೇಶ್ ಅವರು ನಿರ್ಮಿಸಿದರು.
ಕೊಡಗು ಪ್ರೆಸ್ ಕ್ಲಬ್ ನ್ನು ಅಸ್ತಿತ್ವಕ್ಕೆ ತಂದರು, ಪತ್ರಕರ್ತರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ನ ತಾಲ್ಲೂಕು, ಜಿಲ್ಲಾಧ್ಯಕ್ಷರಾಗಿ 10-20 ಸಮ್ಮೇಳನಗಳನ್ನು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆಸಿ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧಗೊಳಿಸಿದರು. ಮಹಿಳಾ ಲೇಖಕಿಯರಿಗೆ ಪ್ರೋತ್ಸಾಹದಾಯಕವಾಗಿ ದಿ.ಬಿ.ಜಿ.ವಸಂತ ಅವರು ನೀಡಿದ ಗೌರವಮ್ಮ ದತ್ತಿಯನ್ನು ಮಹಿಳಾ ಲೇಖಕಿಯರಿಗೆ ಸೀಮಿತಗೊಳಿಸಿದರು. ಇಂದು ಜಿಲ್ಲೆಯಲ್ಲಿ 24 ಮಹಿಳೆಯರು ಗೌರಮ್ಮ ದತ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದರು.
ಜಿಲ್ಲೆಯ ಹಿರಿಯ ಸಹಕಾರಿ ಸಂಪಾಜೆಯ ಬಿ.ಎ.ಗಣಪತಿ ಅವರು ಮಾತನಾಡಿ ಟಿ.ಪಿ.ರಮೇಶ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿದ್ದಾಗ ಮೊದಲ ಬಾರಿಗೆ ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳವನ್ನು ಸಂಪಾಜೆಯ ಕೊಯನಾಡಿನಲ್ಲಿ ಆಯೋಜಿಸಿ ಹಳ್ಳಿಯ ಕಡೆ ಸಾಹಿತ್ಯದ ನಡಿಗೆಯನ್ನು ಬೆಳೆಸಿದರು.
ಸಹಕಾರ ಕ್ಷೇತ್ರದಲ್ಲೂ ಅವರು ಅಪಾರ ಸೇವೆ ಸಲ್ಲಿಸಿದ್ದು, ಕೆಲಸ ಮಾಡಬೇಕೆನ್ನುವ ಚಲ ಅವರಲ್ಲಿ ಮೊದಲಿನಿಂದಲೂ ಇತ್ತು. ವಿವಿಧ ಸಂಘಟನೆಗಳನ್ನು ಹುಟ್ಟು ಹಾಕಿ ಅವುಗಳಲ್ಲಿ ಯಶಸ್ಸನ್ನು ಕಂಡರು. ತಾಲ್ಲೂಕು ಮತ್ತು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾಗಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಯುವಕ ಸಂಘ, ಯುವತಿ ಮಂಡಳಿಗೆ ಜೀವ ತುಂಬಿ ಯುವ ಸಮ್ಮೇಳನಗಳನ್ನು ನಡೆಸಿದರು ಎಂದು ತಿಳಿಸಿದರು.
ಅಂಗನವಾಡಿ ಸಂಘಟನೆ ಮತ್ತು ಅಹಿಂದ ಸಂಘಟನೆಯನ್ನು ಕಟ್ಟಿ ಬೆಳೆಸಿದ ಅವರು ಕಾರ್ಯಕರ್ತೆಯರಿಗೆ, ದುರ್ಬಲ ವರ್ಗದವರಿಗೆ ನಾಯಕತ್ವ ತುಂಬಿ ಅವರ ಬೇಡಿಕೆಗಳಿಗಾಗಿ ಜಿಲ್ಲೆ ಮತ್ತು ರಾಜ್ಯದಲ್ಲಿ ಹೋರಾಟ ಮಾಡಿದವರು ರಮೇಶ್ ಅವರು ಎಂದರು.
ಅಮೃತ ವರ್ಷಾಚರಣೆಯ ಕೇಂದ್ರ ಬಿಂದು ಟಿ.ಪಿ.ರಮೇಶ್ ಅವರು ಮಾತನಾಡಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವ ನನ್ನ ಪತ್ನಿ ನಿರ್ಮಲ, ಪುತ್ರಿಯರಾದ ಸಂಧ್ಯಾ, ಸ್ವಾತಿ, ಅಳಿಯ ನವೀನ ಹಾಗೂ ಕುಟುಂಬದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಮನೆ ಮನೆಗೆ ಪತ್ರಿಕೆ ಹಾಕುತ್ತಿದ್ದ ನಾನು ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾದಕನಾಗಿ, ಪರಾಕ್ರಮ ಸಂಜೆ ಪತ್ರಿಕೆಯ ಸಹ ಸಂಪಾದಕನಾಗಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕನಾಗಿ, ಅಖಿಲ ಭಾರತ ಮತ್ತು ರಾಜ್ಯಮಟ್ಟದ ಸಣ್ಣ ಪತ್ರಿಕೆಗಳ ಸಂಪಾದಕರ ಸಂಘದ ಪದಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ.
ವರ್ಕ್ ಶಾಪ್ ನಲ್ಲಿ ಮೆಕಾನಿಕ್ ಆಗಿದ್ದ ನಾನು ಕ್ರಮೇಣ ರಾಜಕೀಯದಲ್ಲಿ ಬೆಳೆದು ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷನಾಗಿ, ಹಾಗೆಯೇ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳದ ಅಧ್ಯಕ್ಷನಾಗಿ ಜೀವನದಲ್ಲಿ ಉತ್ತಮ ಗುರಿ ಇಟ್ಟುಕೊಂಡು ಪ್ರಾಮಾಣಿಕತನದಿಂದ ದುಡಿದಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಜೀವನದಲ್ಲಿ ಕಪ್ಪುಚುಕ್ಕಿ ಬಾರದಂತೆ ಎಚ್ಚರ ವಹಿಸುವ ಜವಾಬ್ದಾರಿ ನಿಭಾಯಿಸಲಿದ್ದೇನೆ ಎಂದು ಹೇಳಿದರು.
ಸಂಘಟನೆ, ಹೋರಾಟ, ಒಳ್ಳೆಯ ಆಡಳಿತ, ಭ್ರಷ್ಟಚಾರ ಮುಕ್ತ ಜೀವನಶೈಲಿ, ನೇರನುಡಿ, ಸಮಾಜಕ್ಕೆ ಕೆಡುಕನ್ನು ಉಂಟುಮಾಡುವ ಸನ್ನಿವೇಶಗಳ ವಿರುದ್ಧ ಹೋರಾಟದ ಪ್ರವರ್ತಿಯನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನನ್ನ ಐವತ್ತು ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಕಾರ್ಮಿಕ, ಯುವಜನ, ರಾಜಕೀಯ, ಸಹಕಾರ, ಚೇಂಬರ್ ಆಫ್ ಕಾಮರ್ಸ್, ದಸರಾ ಉತ್ಸವ ಪತ್ರಿಕೋದ್ಯಮ, ಶಿಕ್ಷಣ, ಅಂಗನವಾಡಿ, ಅಹಿಂದ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಆಯಾ ಸಂಘಟನೆಗಳ ಸದಸ್ಯರ ಹಿತಕ್ಕಾಗಿ ಹೋರಾಡಿ ನ್ಯಾಯ ದೊರಕಿಸಿದ್ದೇನೆ ಎಂದು ಟಿ.ಪಿ.ರಮೇಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ನೇಹ ಸಮ್ಮಿಲನ ಸಮಿತಿ ವತಿಯಿಂದ ಟಿ.ಪಿ.ರಮೇಶ್ ಹಾಗೂ ನಿರ್ಮಲ ದಂಪತಿಯನ್ನು ಗೌರವಿಸಿ ಸನ್ಮಾನಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಮುಖಂಡರು, ಸ್ನೇಹಿತರು ಹಾಗೂ ಹಿತೈಷಿಗಳು ದಂಪತಿಯನ್ನು ಗೌರವಿಸಿ ಸನ್ಮಾನಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರೇವತಿ ರಮೇಶ್ ನಿರೂಪಿಸಿದರು. ಸಂಧ್ಯಾ ನವೀನ್ ಪ್ರಾರ್ಥಿಸಿ, ವಂದಿಸಿದರು, ಶ್ವೇತಾ ರವೀಂದ್ರ ಸ್ವಾಗತಿಸಿದರು. ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ತುಳಸಿ ಮೋಹನ್ ಟಿ.ಪಿ.ರಮೇಶ್ ಅವರ ಪರಿಚಯ ಮಾಡಿದರು.