Kodagu

ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

admincoorgdaily

ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಮಡಿಕೇರಿ ಸೆ.5:-ಕೊಡಗು ಜಿಲ್ಲೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಾಸಕರ ಶಾಸಕ ಪ್ರದೇಶಾಭಿವೃದ್ಧಿ ಅನುದಾನ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಕೈಜೋಡಿಸಿ ತಂತ್ರಜ್ಞಾನಾಧಾರಿತ ಶಿಕ್ಷಣ ಒದಗಿಸಲು ಯೋಜನೆ ರೂಪಿಸಲಾಗುವುದು ಎಂದು ಕೃಷಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಸಂಯುಕ್ತಾಶ್ರಯದಲ್ಲಿ ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು. 

ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಟ್ಯಾಬ್ ನೀಡಲು ವೆಚ್ಚವಾಗಲಿದ್ದು, ಶಾಸಕರು ತಲಾ ರೂ.25 ಲಕ್ಷ ಹಾಗೂ ಖಾಸಗಿ ಸಂಸ್ಥೆಗಳ ಸಿಎಸ್‍ಆರ್ ನಿಧಿಯಿಂದ ಉಳಿದ ಮೊತ್ತ ಭರಿಸಿ ಯೋಜನೆಯನ್ನು ಶೇ.100 ರಷ್ಟು ಪೂರ್ಣಗೊಳಿಸಲು ಯೋಜನೆ ರೂಪಿಸಲು ಚಿಂತಿಸುವಂತೆ ಸಚಿವರು ಸಲಹೆ ಮಾಡಿದರು. 
ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅಂಕಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆದರೆ ಕೇವಲ ಅಂಕಗಳೇ ಬುದ್ಧಿವಂತಿಕೆ ಅಥವಾ ಪ್ರತಿಭೆಯ ಮಾನದಂಡವಲ್ಲ. ವಿದ್ಯಾರ್ಥಿಗಳಲ್ಲಿ ವೈಚಾರಿಕತೆ, ಸೃಜನಶೀಲತೆ, ಆತ್ಮವಿಶ್ವಾಸ, ಮಾನವೀಯ ಅಂತಃಕರಣ ಮತ್ತು ಬದುಕಿನ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಬೆಳೆಸುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದರು. 

ಇಂದಿನ ದಿನಗಳಲ್ಲಿ ಮಕ್ಕಳ ಕೈಯಲ್ಲಿ ಪುಸ್ತಕದ ಜೊತೆಗೆ ಮೊಬೈಲ್ ಕೂಡ ಇದೆ. ಗೂಗಲ್‍ನಲ್ಲಿ ಹುಡುಕಿದರೆ ಸಾವಿರಾರು ಉತ್ತರಗಳು ದೊರೆಯುತ್ತವೆ. ಕೃತಕ ಬುದ್ಧಿಮತ್ತೆ ಯಾವುದೇ ಪ್ರಶ್ನೆಗೆ ಕ್ಷಣಾರ್ಧದಲ್ಲಿ ಉತ್ತರ ನೀಡುವ ಸಾಮಥ್ರ್ಯ ಹೊಂದಿದೆ.  ಆದರೆ ಸರಿಯಾದ ಪ್ರಶ್ನೆಯನ್ನು ಹೇಗೆ ಕೇಳಬೇಕು ಎಂಬುದನ್ನು ಕಲಿಸುವವರು ಶಿಕ್ಷಕರು. ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನಾ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವವರೂ ಶಿಕ್ಷಕರೇ ಆಗಿದ್ದಾರೆ. ಹೀಗಾಗಿ ಎಐ ಯುಗದಲ್ಲಿಯೂ ಶಿಕ್ಷಕರ ಮಹತ್ವ ಕಡಿಮೆಯಾಗುವುದಿಲ್ಲ. ಬದಲಾಗಿ ತಂತ್ರಜ್ಞಾನದ ಸವಾಲುಗಳ ನಡುವೆ ವಿದ್ಯಾರ್ಥಿಗಳಿಗೆ ಸರಿಯಾದ ದಿಕ್ಕು ತೋರಿಸುವ ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ವ ಪಡೆಯುತ್ತದೆ. ಈ ಜವಾಬ್ದಾರಿಯನ್ನು ಅರಿತು ಶಿಕ್ಷಕರು ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕು ಎಂದು ಸಚಿವರು ವಿವರಿಸಿದರು.   

ಭಾರತದ ಎರಡನೇ ಉಪ ರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾಗಿದ್ದ ಮಹಾನ್ ತತ್ವಜ್ಞಾನಿ, ಶಿಕ್ಷಣತಜ್ಞ ಮತ್ತು ಆದರ್ಶ ಶಿಕ್ಷಕರಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜ್ಞಾನವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಚಿಂತನಾ ಶಕ್ತಿ, ಮಾನವೀಯ ಮೌಲ್ಯ ಮತ್ತು ಬದುಕಿನ ಸಮಗ್ರ ದೃಷ್ಟಿಕೋನವನ್ನು ಬೆಳೆಸುವುದು ಶಿಕ್ಷಕರ ನಿಜವಾದ ಕರ್ತವ್ಯ ಎಂಬ ಸಂದೇಶವನ್ನು ಡಾ. ರಾಧಾಕೃಷ್ಣನ್ ಅವರ ಜೀವನ ಸಾರುತ್ತದೆ. ಸುಮಾರು 40 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅಪರೂಪದ ವ್ಯಕ್ತಿತ್ವವಾಗಿದ್ದರು. ಅವರ ಅರ್ಹತೆ ಮತ್ತು ವ್ಯಕ್ತಿತ್ವವನ್ನು ಮೆಚ್ಚಿದ್ದ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಅವರನ್ನು ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಬಣ್ಣಿಸಿದ್ದರು.

ರಾಷ್ಟ್ರದ ಮಕ್ಕಳನ್ನು ನಾಳಿನ ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುವುದೇ ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು ಎಂದು ಡಾ. ರಾಧಾಕೃಷ್ಣನ್ ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಕರ ದಿನಾಚರಣೆ ಕೇವಲ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಇಂದಿನ ಶಿಕ್ಷಣ ವ್ಯವಸ್ಥೆ, ಶಿಕ್ಷಕರ ಜವಾಬ್ದಾರಿ ಹಾಗೂ ವಿದ್ಯಾರ್ಥಿಗಳ ಮನೋಸ್ಥಿತಿಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭವಾಗಬೇಕಿದೆ ಎಂದು ಹೇಳಿದರು.

ಹೋಂವರ್ಕ್ ಮಾಡಿದರೆ ಮಾತ್ರ ಮಗುವಿನ ಕಲಿಕೆ ಪರಿಪೂರ್ಣವಾಗುತ್ತದೆ ಎಂಬ ಕಲ್ಪನೆಯಿಂದ ಹೊರಬರಬೇಕಿದೆ. ಮಕ್ಕಳಲ್ಲಿ ಶಾಲೆಯ ಪಠ್ಯ ಕಲಿಕೆಯ ಹೊರತಾಗಿಯೂ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಸಹಜ ಕುತೂಹಲ ಇರುತ್ತದೆ. ಆ ಕುತೂಹಲವನ್ನು ಗೌರವಿಸಿ, ಪ್ರಶ್ನಿಸುವ ಮತ್ತು ಸ್ವತಂತ್ರವಾಗಿ ಚಿಂತಿಸುವ ಸಾಮಥ್ರ್ಯವನ್ನು ಬೆಳೆಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಸಚಿವರು ನುಡಿದರು.

ಎಲ್ಲ ಮಹಾನ್ ವ್ಯಕ್ತಿಗಳ ಯಶಸ್ಸಿನ ಹಿಂದೆ ಒಬ್ಬ ಉತ್ತಮ ಶಿಕ್ಷಕರ ಪ್ರೇರಣೆ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಶಿಕ್ಷಕರೊಬ್ಬರು ದಟ್ಟ ಪ್ರಭಾವ ಬೀರಿರುತ್ತಾರೆ. ಹೀಗಾಗಿ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಕೊಡಗು ಜಿಲ್ಲೆಯಲ್ಲಿ ಒಟ್ಟು 699 ಶಾಲೆಗಳಿದ್ದು, 64,096 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 3,756 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಶಿಕ್ಷಕರ ಹುದ್ದೆಗಳು ಖಾಲಿ ಇರುವ ಕಡೆಗಳಲ್ಲಿ ಸುಮಾರು 350 ಅತಿಥಿ ಶಿಕ್ಷಕರ ಸೇವೆಯನ್ನು ಪಡೆಯಲಾಗುತ್ತಿದೆ ಎಂದರು. 

ಶಿಕ್ಷಣ ಇಲಾಖೆಯಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 64,096 ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಸರ್ಕಾರಿ ಶಾಲೆಗಳ 16,696 ವಿದ್ಯಾರ್ಥಿಗಳಿಗೆ ಎರಡು ಸೆಟ್ ಸಮವಸ್ತ್ರ, ಶೂ ಮತ್ತು ಸಾಕ್ಸ್‍ಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಸಮಗ್ರ ಶಿಕ್ಷಣ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 7 ಪಿಎಂಶ್ರೀ ಶಾಲೆಗಳು, 3 ಎಡಿಬಿಕೆಪಿಎಸ್ ಶಾಲೆಗಳು, 8 ಕೆಪಿಎಸ್ ಶಾಲೆಗಳು, 83 ದ್ವಿಭಾಷೆ ಮಾಧ್ಯಮ ಶಾಲೆಗಳು ಹಾಗೂ 40 ಎಲ್‍ಕೆಜಿ/ಯುಕೆಜಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.
ಕಳೆದ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ಶೇಕಡ 96.54 ಫಲಿತಾಂಶ ದಾಖಲಿಸಿರುವುದು ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯ ಒಟ್ಟು 168 ಶಾಲೆಗಳ ಪೈಕಿ 102 ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿವೆ. ಈ ಎಲ್ಲಾ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಗಿದೆ ಎಂದರು. 

ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಶಾಸಕರಾದ ಎ.ಎಸ್.ಪೆÇನ್ನಣ್ಣ ಅವರು ಮಾತನಾಡಿ, ಸಮಾಜ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಅನೇಕ ಬದಲಾವಣೆಗಳಿಗೆ ಹೊಂದಿಕೊಂಡು ಶಿಕ್ಷಣ ವ್ಯವಸ್ಥೆಯನ್ನು ಮುನ್ನಡೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲದೆ, ಸಮಾಜದ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಹೊತ್ತವರಾಗಿದ್ದಾರೆ. ಶಿಕ್ಷಕರಿಗೆ ಸಮಾಜದಲ್ಲಿ ವಿಶೇಷ ಗೌರವವಿದ್ದು, ಆ ಗೌರವಕ್ಕೆ ತಕ್ಕಂತೆ ಮುಂದಿನ ಪೀಳಿಗೆಯನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಕಾರ್ಯವನ್ನು ಶಿಕ್ಷಕರು ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಇಂದಿನ ಮಕ್ಕಳು ಬುದ್ಧಿವಂತರು ಹಾಗೂ ಪ್ರಜ್ಞಾವಂತರಾಗಿದ್ದು, ಅವರ ಬುದ್ಧಿ ಮತ್ತು ಪ್ರಜ್ಞೆಗೆ ಉತ್ತಮ ಶಿಕ್ಷಣದ ಮಾರ್ಗದರ್ಶನ ದೊರೆತಾಗ ಸಮಾಜಕ್ಕೆ ಹಾಗೂ ದೇಶಕ್ಕೆ ಮಹತ್ತರ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಪ್ರಾಥಮಿಕ, ಪ್ರೌಢಶಾಲೆ ಸೇರಿದಂತೆ ವಿವಿಧ ಹಂತಗಳಲ್ಲಿ ಶಿಕ್ಷಕರು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದು, ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶವು ಕಳೆದ ವರ್ಷಕ್ಕಿಂತ ಉತ್ತಮವಾಗಿ ದಾಖಲಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಸಾಧನೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಮುಂದಿನ ದಿನಗಳಲ್ಲಿಯೂ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ರಾಜ್ಯ ಹಾಗೂ ದೇಶದ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ನಾಗರಿಕರಾಗಿ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಇನ್ನಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು, ಶಿಕ್ಷಕರು ಕೇವಲ ಪಾಠ ಬೋಧಿಸುವ ಕೆಲಸಕ್ಕೆ ಸೀಮಿತರಾಗದೆ, ಮಕ್ಕಳ ಇಡೀ ಬದುಕಿನ ಮೇಲೆ ಪರಿಣಾಮ ಬೀರುವ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಯೂ ತಾನು ಪಡೆದ ಜ್ಞಾನ ಮತ್ತು ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಜ್ಞಾನವನ್ನು ತನ್ನಲ್ಲೇ ಇಟ್ಟುಕೊಳ್ಳುವ ಬದಲು ಮುಂದಿನ ಪೀಳಿಗೆಗೆ ಹಂಚುವುದರಿಂದ ಸಮಾಜದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ಶಿಕ್ಷಕರು ಒಂದು ಅವಧಿಯಲ್ಲಿ ಕೆಲವೇ ನಿಮಿಷ ಅಥವಾ ಒಂದು ಗಂಟೆ ಪಾಠ ಮಾಡಿದ್ದರೂ, ಆ ಬೋಧನೆಯ ಪ್ರಭಾವ ಮಗುವಿನ ಇಡೀ ಜೀವನದ ಮೇಲೆ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದರು
ಮಕ್ಕಳಿಗೆ ಕೇವಲ ಪಠ್ಯಪುಸ್ತಕದ ಜ್ಞಾನ, ಅಂಕ ಮತ್ತು ಪರೀಕ್ಷೆಯ ಫಲಿತಾಂಶ ಮಾತ್ರ ಮುಖ್ಯವಲ್ಲ. ಶಿಕ್ಷಕರು ಹಾಗೂ ಪೋಷಕರು ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಅವರ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಹಲವು ಸವಾಲುಗಳಿದ್ದು, ಮೂಲಸೌಕರ್ಯ ಕೊರತೆ, ಕಟ್ಟಡ ಸಮಸ್ಯೆ ಸೇರಿದಂತೆ ಅನೇಕ ತೊಂದರೆಗಳಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಬಜೆಟ್ ಮೀಸಲಿಡಬೇಕು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು. ಮಕ್ಕಳ ಭವಿಷ್ಯದ ಭದ್ರ ಬುನಾದಿ ನಿರ್ಮಾಣಕ್ಕೆ ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚಿನ ಹೂಡಿಕೆ ಅಗತ್ಯ ಎಂದು ಡಾ.ಮಂತರ್ ಗೌಡ ಅವರು ಹೇಳಿದರು.

ಅನುದಾನಿತ, ಅನುದಾನರಹಿತ ಹಾಗೂ ಸರ್ಕಾರಿ ಶಾಲೆಗಳ ಶಿಕ್ಷಕರು ಒಗ್ಗಟ್ಟಿನಿಂದ ಶಿಕ್ಷಣ ಕ್ಷೇತ್ರದ ಗುಣಮಟ್ಟ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳಬೇಕು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ತಾವೂ ಒಬ್ಬ ಶಿಕ್ಷಕರ ಮಗನಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೇ ರೀತಿಯ ವಿಷಯದಲ್ಲಿ ಆಸಕ್ತಿ ಇರುವುದಿಲ್ಲ. ಮಕ್ಕಳ ಆಸಕ್ತಿ ಮತ್ತು ಸಾಮಥ್ರ್ಯವನ್ನು ಗುರುತಿಸಿ, ಅವರಿಗೆ ಸಮಯ ನೀಡಿ, ತಾಳ್ಮೆಯಿಂದ ಮಾರ್ಗದರ್ಶನ ಮಾಡುವುದು ಶಿಕ್ಷಕರು ಮತ್ತು ಪೋಷಕರ ಕರ್ತವ್ಯ ಎಂದರು.

ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕರಾದ ಬಿ.ಜಿ.ಅನಂತ ಶಯನ ಅವರು ಮಾತನಾಡಿ, ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಎಷ್ಟೇ ಮುನ್ನಡೆ ಸಾಧಿಸಿದರೂ, ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಭೌತಿಕ ಉಪಸ್ಥಿತಿ ಮತ್ತು ಅವರ ಮಾರ್ಗದರ್ಶನಕ್ಕೆ ಯಾವುದೇ ಪರ್ಯಾಯವಿಲ್ಲ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಗೂಗಲ್, ಚಾಟ್ ಜಿಪಿಟಿ, ಕ್ಯಾಲ್ಕುಲೇಟರ್ ಹಾಗೂ ಕೃತಕ ಬುದ್ಧಿಮತ್ತೆ ಯಾವುದೇ ಪ್ರಶ್ನೆಗೆ ತಕ್ಷಣವೇ ಉತ್ತರ ನೀಡಬಲ್ಲವು. ಆದರೆ, ಮಗು ಪರೀಕ್ಷೆಯಲ್ಲಿ ವಿಫಲವಾದಾಗ ಅಥವಾ ತಪ್ಪು ಮಾಡಿದಾಗ, ಅದರ ಹೆಗಲ ಮೇಲೆ ಕೈಹಾಕಿ 'ನಾನಿದ್ದೇನೆ, ಧೈರ್ಯಗೆಡಬೇಡ, ಮುಂದೆ ಸರಿಪಡಿಸಿಕೊ' ಎಂದು ಆತ್ಮವಿಶ್ವಾಸ ತುಂಬುವ ಗುಣ ತಂತ್ರಜ್ಞಾನಕ್ಕಿಲ್ಲ. ಮಗುವಿಗೆ ಧೈರ್ಯ ತುಂಬಲು ಮತ್ತು ಶಿಕ್ಷಣ ನೀಡಲು ಶಿಕ್ಷಕರ ಪ್ರತ್ಯಕ್ಷ ಉಪಸ್ಥಿತಿ ಅತ್ಯಗತ್ಯ ಎಂದರು.

ಇಂದಿನ ಪೀಳಿಗೆಯ ಮಕ್ಕಳು ಅತ್ಯಂತ ತೀಕ್ಷ್ಣ ಬುದ್ಧಿವಂತಿಕೆ ಹೊಂದಿದ್ದು, ಕಠಿಣ ಪ್ರಶ್ನೆ ಕೇಳುತ್ತಾರೆ. ಇಂತಹ ತೀಕ್ಷ್ಣ ಬುದ್ಧಿಯ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರು ಸಹ ಪ್ರತಿದಿನ ಪೂರ್ವತಯಾರಿ ಹಾಗೂ ಹೋಂವರ್ಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಕೇವಲ ಪಠ್ಯಪುಸ್ತಕದ ಚೌಕಟ್ಟಿಗೆ ಸೀಮಿತವಾಗದೆ, ಮಕ್ಕಳ ಬೌದ್ಧಿಕ ಮಟ್ಟಕ್ಕೆ ತಕ್ಕಂತೆ ಬೋಧನೆ ಮಾಡಬೇಕಾದ ಸವಾಲು ಇಂದು ಅಧ್ಯಾಪಕರ ಮೇಲಿದೆ ಎಂದು ಹೇಳಿದರು.

ಸಮಾಜದಲ್ಲಿ ಶಿಕ್ಷಕ ಎಂಬ ಸ್ಥಾನವೇ ಇಲ್ಲದಿದ್ದರೆ ಕಲ್ಲೋಲ ಸೃಷ್ಟಿಯಾಗುತ್ತದೆ. ಪುರಾಣ ಕಾಲದ ದೇವಾಧಿ ದೇವತೆಗಳಿಂದ ಹಿಡಿದು ಇಂದಿನ ವಿಜ್ಞಾನಿಗಳವರೆಗೆ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಒಬ್ಬ ಗುರುವಿನ ಪಾತ್ರವಿದೆ. ತಂದೆ-ತಾಯಿ ಸಂಸ್ಕಾರ ನೀಡಿದರೆ, ಶಿಕ್ಷಕರು ಉತ್ತಮ ವಿದ್ಯೆ ನೀಡುತ್ತಾರೆ. ದೇಶದ ಭದ್ರತೆ, ತಂತ್ರಜ್ಞಾನ ಮತ್ತು ವಿಜ್ಞಾನಿಗಳ ಸಾಧನೆಯ ಹಿಂದೆ ಕಣ್ಣಿಗೆ ಕಾಣದ ಶಿಕ್ಷಕರ ಶ್ರಮ ಹಾಗೂ ಕರ್ತವ್ಯವಿದೆ ಎಂದು ಬಣ್ಣಿಸಿದರು.

ಪೋಷಕರ ಪ್ರೀತಿಯ ಮಾತುಗಳು ಅಥವಾ ಸ್ನೇಹಿತರ ಸಲಹೆಗಳಿಗಿಂತ ಶಿಕ್ಷಕರ ಕಟ್ಟುನಿಟ್ಟಿನ ಬೋಧನೆ ವಿದ್ಯಾರ್ಥಿಯನ್ನು ಉತ್ತಮ ದಾರಿಯಲ್ಲಿ ನಡೆಸುತ್ತದೆ. ಅಧ್ಯಾಪಕರು ತಮ್ಮ ವೈಯಕ್ತಿಕ ನೋವುಗಳನ್ನು ಬದಿಗೊತ್ತಿ, ಸ್ವಾರ್ಥವಿಲ್ಲದೆ ವಿದ್ಯಾರ್ಥಿಯ ಒಳಿತಿಗಾಗಿ ಶ್ರಮಿಸುತ್ತಾರೆ. ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಮಹತ್ತರವಾದ ಬದಲಾವಣೆಯನ್ನು ತರಲು ಸಾಧ್ಯ ಎಂದರು. 

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಚೇತನ್ ಅವರು ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಮತ್ತು ಆರ್ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂಬ ಮಾತುಗಳಿದ್ದವು. ಆದರೆ, ಚಂದ್ರಶೇಖರ್ ನುಗ್ಲಿ ಅವರ ಅಧ್ಯಕ್ಷತೆಯಲ್ಲಿ ಸಂಘವು ನಡೆಸಿದ ನಿರಂತರ ಪ್ರಯತ್ನದ ಫಲವಾಗಿ, ಇಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಮತ್ತು ಆರ್ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಲಾಗಿದೆ ಎಂದು ಹೇಳಿದರು.

ಕೆಸಿಎಸ್‍ಆರ್ ನಿಯಮಾವಳಿಗಳಿಗೆ ಒಳಪಟ್ಟು ಸೇವೆ ಸಲ್ಲಿಸುವ ಸರ್ಕಾರಿ ನೌಕರರು, ತಮ್ಮ ಜೀವ ಮಾನವಿಡೀ ನಿರಂತರ ಹಾಜರಾತಿ, ಗಣತಿ ಹಾಗೂ ಶಿಕ್ಷಣ ಸೇವೆಯಲ್ಲಿ ತೊಡಗಿರುತ್ತಾರೆ. 60 ವರ್ಷಗಳ ಸೇವೆಯ ನಂತರ ವಿಶ್ರಾಂತ ಜೀವನ ನಡೆಸಬೇಕಾದ ಸಮಯದಲ್ಲಿ 'ಪಿಂಚಣಿ ಇಲ್ಲ' ಎಂಬ ಪರಿಸ್ಥಿತಿ ಎದುರಾಗಿರುವುದು ದುರಂತ ಸಂಗತಿ. ಈ ಪಿಂಚಣಿ ರಹಿತ ವ್ಯವಸ್ಥೆಯು ಶಿಕ್ಷಕರ ಹಾಗೂ ನೌಕರರ ಸಂಧ್ಯಾಕಾಲದ ಬದುಕಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಸ್ತುತ ಸರ್ಕಾರದ ಎರಡು ವರ್ಷಗಳ ಅವಧಿಯಲ್ಲಿ ಎನ್‍ಪಿಎಸ್ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಬದ್ಧತೆಯಿಂದ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು. 

ಮಡಿಕೇರಿ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಾತನಾಡಿ, ಸರಿಯಾದ ದಾರಿ ತೋರಿಸುವ ಶಿಕ್ಷಕರ ತ್ಯಾಗ, ಪರಿಶ್ರಮ ಮತ್ತು ಪ್ರೀತಿಗೆ ನಾವೆಲ್ಲರೂ ಗೌರವ ಸಲ್ಲಿಸಬೇಕಾಗಿದೆ ಎಂದರು.
ಮಕ್ಕಳು ಹೆತ್ತವರಿಗಿಂತ ಶಿಕ್ಷಕರ ಬಳಿಯೇ ಹೆಚ್ಚು ಸಮಯ ಕಳೆಯುತ್ತಾರೆ ಮತ್ತು ಬೆಳೆಯುತ್ತಾರೆ. ಪೋಷಕರು ಹೇಳುವುದಕ್ಕಿಂತಲೂ ಶಿಕ್ಷಕರು ಹೇಳುವ ಬುದ್ಧಿಮಾತುಗಳನ್ನು ಮಕ್ಕಳು ಹೆಚ್ಚು ಶ್ರದ್ಧೆಯಿಂದ ಕೇಳುತ್ತಾರೆ. ಪ್ರೀತಿಯಿಂದ ಅವರಿಗೆ ಮಾರ್ಗದರ್ಶನ ನೀಡಿ, ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುತ್ತಾರೆ ಎಂದರು. 

ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಹಂಡ್ರಂಗಿ ನಾಗರಾಜ, ಕೊಡಗು ಜಿಲ್ಲಾ ಪ್ರೌಢಶಾಲಾ ಉಪ ಪ್ರಾಂಶುಪಾಲರ ಮತ್ತು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಹ್ಯಾರಿ ಮೋರಸ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್.ಜಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹೇಂದ್ರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಎಸ್.ಪ್ರಸನ್ನ ಕುಮಾರ್, ಪ್ರಮುಖರಾದ ಹೆಚ್.ಕೆ.ಕುಮಾರ್, ಪಿ.ಎ.ಪ್ರವೀಣ್, ಎ.ಪಿ.ಸೋಮಯ್ಯ, ಕೋಟ್ರಂಗಡ ತಿಮ್ಮಯ್ಯ, ಜಿ.ಸಿ.ಶರತ್ ಕುಮಾರ್, ಕೆ.ಸ್ವರ್ಣಲತಾ, ಮೋಹನ್ ಪೆರಾಜೆ, ಬಿ.ಎನ್.ಜಯಂತಿ, ಕೆ.ಎಂ.ಶರತ್, ವಿವಿಧ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು. 

ಶಿಕ್ಷಕರ ಲಹರಿ ತಂಡದವರು ವಂದೇ ಮಾತರಂ, ನಾಡಗೀತೆ ಮತ್ತು ರೈತ ಗೀತೆ ಹಾಡಿದರು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ್ ಆರ್.ಪಿ. ಸ್ವಾಗತಿಸಿದರು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಎಸ್.ಪ್ರಸನ್ನ ಕುಮಾರ್ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ 2023-24ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಅಭಿನಂದಿಸಲಾಯಿತು. ನಿವೃತ್ತ ಹಿರಿಯ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಲಾಯಿತು.