Kodagu

ನಾಪೋಕ್ಲುವಿನ ಕೆಪಿಎಸ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

admincoorgdaily

ನಾಪೋಕ್ಲುವಿನ ಕೆಪಿಎಸ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ವರದಿ :ಝಕರಿಯ ನಾಪೋಕ್ಲು 

ನಾಪೋಕ್ಲು : ನಾಪೋಕ್ಲು ವಿನ ಕರ್ನಾಟಕ ಪಬ್ಲಿಕ್ ಶಾಲೆಯ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ವಾರ್ಷಿಕ ಪರೀಕ್ಷೆಯಲ್ಲಿ ಶೇ.100ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸಿದ ಹಿನ್ನೆಲೆಯಲ್ಲಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ  ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ನಡೆಸಲಾಯಿತು.

ಶಾಲೆಯ ಸಭಾಂಗಣದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ  ಎನ್. ಎಸ್.ಉದಯ ಶಂಕರ್ ಅಧ್ಯಕ್ಷತೆಯಲ್ಲಿ ನಡೆದ 
ಕಾರ್ಯಕ್ರಮದಲ್ಲಿ  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ತರಲು ಶ್ರಮಿಸಿದ ಪ್ರೌಢಶಾಲಾ ವಿಭಾಗದ ಶಿಕ್ಷಕರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಜೊತೆಗೆ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಪೂರ್ವ ಪ್ರಾರ್ಥಮಿಕ, ಪ್ರಾರ್ಥಮಿಕ ಶಾಲಾ–ಪದವಿಪೂರ್ವ ಕಾಲೇಜು ವಿಭಾಗದ ಎಲ್ಲಾ ಬೋಧಕ,ಬೋಧಕೇತರ ವರ್ಗದವರಿಗೆ ಮತ್ತು ಉಪನ್ಯಾಸಕರಿಗೆ,ಅಕ್ಷರ ದಾಸೋಹ ಸಿಬ್ಬಂದಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಸಿವಿಲ್ ಕಾಮಗಾರಿ ಉಪ ಸಮಿತಿ ಅಧ್ಯಕ್ಷರಾದ ಕೆ.ಎ. ಹಾರಿಸ್ ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಭಾರತದ ಮಾಜಿ ರಾಷ್ಟ್ರಪತಿ, ಶ್ರೇಷ್ಠ ಶಿಕ್ಷಣತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ನಾವೆಲ್ಲರೂ ಒಂದೆಡೆ ನೆರೆದಿದ್ದೇವೆ. ಈ ಸುದಿನದಂದು ನಮ್ಮ ಸಂಸ್ಥೆಯ ಸಾಧನೆಯನ್ನು ಸಂಭ್ರಮಿಸಲು ನಾವು ವೇದಿಕೆಯನ್ನು ಸಜ್ಜುಗೊಳಿಸಿದ್ದೇವೆ.
2025–26ನೇ ಸಾಲಿನ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ನಮ್ಮ ಪ್ರೌಢಶಾಲಾ ವಿಭಾಗವು ನೂರಕ್ಕೆ ನೂರು (100%) ಫಲಿತಾಂಶ ದಾಖಲಿಸಿ ಐತಿಹಾಸಿಕ ಸಾಧನೆ ಮಾಡಿದೆ. ಒಂದು ಶಾಲೆಯ ನೂರು ಶೇಕಡಾ ಫಲಿತಾಂಶ ಕೇವಲ ಅಂಕಪಟ್ಟಿಗೆ ಸೀಮಿತವಾದುದಲ್ಲ, ಅದರ ಹಿಂದೆ ಮಕ್ಕಳ ಅಪಾರ ಶ್ರಮ, ಪೋಷಕರ ಭರವಸೆ ಹಾಗೂ ಮುಖ್ಯವಾಗಿ ಪ್ರತಿಯೊಬ್ಬ ಶಿಕ್ಷಕರ ಅಪ್ರತಿಮ ಪರಿಶ್ರಮ, ಬದ್ಧತೆ ಮತ್ತು ಮಾರ್ಗದರ್ಶನವಿದೆ. ಶ್ರಮವಹಿಸಿ ವಿದ್ಯಾರ್ಥಿಗಳನ್ನು ತಿದ್ದಿ-ತೀಡಿ ಈ ಅತ್ಯುತ್ತಮ ಸಾಧನೆಗೆ ಕಾರಣರಾದ ನಮ್ಮ ಪ್ರೌಢಶಾಲಾ ವಿಭಾಗದ ಸಮಸ್ತ ಶಿಕ್ಷಕ ವೃಂದಕ್ಕೆ ಎಸ್ ಡಿ ಎಂಸಿ ಪರವಾಗಿ ಅನಂತ ಅಭಿನಂದನೆಗಳು.
ಶಿಕ್ಷಣ ಎನ್ನುವುದು ಪ್ರೌಢಶಾಲಾ ಹಂತದಲ್ಲಷ್ಟೇ ಪೂರ್ಣಗೊಳ್ಳುವ ಕ್ರಿಯೆಯಲ್ಲ. ಪ್ರಾಥಮಿಕ ಹಂತದಲ್ಲಿ ಅಕ್ಷರಾಭ್ಯಾಸ ಮಾಡಿಸಿ ಭದ್ರ ಬುನಾದಿ ಹಾಕುವ ಶಿಕ್ಷಕರಿಂದ ಹಿಡಿದು ಮುಂದಿನ ಉನ್ನತ ಶಿಕ್ಷಣಕ್ಕೆ ದಾರಿ ತೋರುವ ಉಪನ್ಯಾಸಕರವರೆಗೆ ಪ್ರತಿಯೊಬ್ಬರ ಪಾತ್ರವೂ ಅತ್ಯಮೂಲ್ಯ. ಆ ಕಾರಣದಿಂದಲೇ ಕೇವಲ ಹತ್ತನೇ ತರಗತಿಯ ಶಿಕ್ಷಕರಿಗಷ್ಟೇ ಸೀಮಿತವಾಗದೆ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಹಗಲಿರುಳು ದುಡಿಯುತ್ತಿರುವ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿಭಾಗದ ಎಲ್ಲಾ ಗೌರವಾನ್ವಿತ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಗೌರವ ಸಮರ್ಪಣೆ ಸಲ್ಲಿಸಲು ನಮ್ಮ ಎಸ್ ಡಿ ಎಂ ಸಿ ಸಮಿತಿ ಹೃತ್ಪೂರ್ವಕವಾಗಿ ನಿರ್ಧರಿಸಿದೆ.
ಶಿಕ್ಷಕರು ಸಮಾಜದ ಶಿಲ್ಪಿಗಳು. ನಿಮ್ಮ ನಿಸ್ವಾರ್ಥ ಸೇವೆಗೆ ಸನ್ಮಾನ ಒಂದು ಸಣ್ಣ ಕೃತಜ್ಞತೆಯ ಸಂಕೇತವಷ್ಟೇ.ಎಸ್ ಡಿ ಎಂ ಸಿ ಸದಾ ನಿಮ್ಮ ಶೈಕ್ಷಣಿಕ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ನೀಡುತ್ತೇವೆ ಎಂದು ಹೇಳಿ ಸರ್ವರನ್ನು ಸ್ವಾಗತಿಸಿದರು.
 
ಸನ್ಮಾನ ಸ್ವೀಕರಿಸಿದ ಬಳಿಕ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಕೆ. ಬಿ.ಉಷಾರಾಣಿ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಮೇಲುಸ್ತುವಾರಿ ಸಮಿತಿಯವರು ನಮಗೆ ಸನ್ಮಾನ ಮಾಡಿದ್ದು ಸಂತಸ ತಂದಿದೆ. ಇದರಿಂದ ನಮ್ಮ ಜವಾಬ್ದಾರಿಯನ್ನು ಕೂಡ ಹೆಚ್ಚಿಸಿದೆ.ಮೇಲುಸ್ತುವಾರಿ ಸಮಿತಿಯವರು ನಮ್ಮ ಮೇಲೆ ಇಟ್ಟ ವಿಶ್ವಾಸದಂತೆ ಎಲ್ಲಾ ಶಿಕ್ಷಕರು ಇನ್ನು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಮುಂದೆಯೂ ಕೂಡ ಒಳ್ಳೆಯ ಫಲಿತಾಂಶ ತರಬೇಕಾಗಿದೆ.ಆ ನಿಟ್ಟಿನಲ್ಲಿ ಶ್ರಮ ಪಡುತ್ತೇವೆ ಎಂದರು, 

ಈ ಸಂದರ್ಭ ಕಾರ್ಯಕ್ರಮದಲ್ಲಿ ಉಪ ಸಮಿತಿ ಅಧ್ಯಕ್ಷರಾದ  ಕೇಟೋಳಿರ ರಾಜ ಗಣಪತಿ, ಸದಸ್ಯರಾದ ಸಲೀಂ, ಪ್ರಾಂಶುಪಾಲರಾದ ಎ. ಎಂ.ವಿಶಾಲ  ಉಪ ಪ್ರಾಂಶುಪಾಲರಾದ ಎನ್. ಎಸ್.ಶಿವಣ್ಣ  ಮುಖ್ಯೋಪಾಧ್ಯಾಯರಾದ ಚಂದ್ರಕಲಾ, ಸಂಸ್ಥೆ ಎಲ್ಲಾ ವಿಭಾಗದ ಶಿಕ್ಷಕ, ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.