Kodagu

ಪೊನ್ನಂಪೇಟೆ ಕೆಪಿಎಸ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

admincoorgdaily

ಪೊನ್ನಂಪೇಟೆ ಕೆಪಿಎಸ್ ಶಾಲೆಯಲ್ಲಿ  ಶಿಕ್ಷಕರ ದಿನಾಚರಣೆ
ಪೊನ್ನಂಪೇಟೆ,ಸೆ 08: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಪ್ರಾಥಮಿಕ ವಿಭಾಗದಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್‌ಕೆಜಿಯಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
 ವಿದ್ಯಾರ್ಥಿಗಳಿಂದ ಭಾಷಣ, ಛದ್ಮವೇಷ, ನೃತ್ಯ ಹಾಗೂ ಕಿರುನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು. 
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ನಾಗವೇಣಿ ಮಾತನಾಡಿ, ಶಿಕ್ಷಕರ ಕರ್ತವ್ಯ ಹಾಗೂ ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡಬೇಕಾದ ಗೌರವದ ಕುರಿತು ತಿಳಿಸಿದರು.

ಮುಖ್ಯ ಶಿಕ್ಷಕ ಬಿ.ಎಂ ವಿಜಯ್ ಮಾತನಾಡಿ,ಈ ಹಿಂದೆ ಶಾಲಾ ಮಟ್ಟದಲ್ಲಿ ಶಿಕ್ಷಕರ ದಿನಾಚರಣೆಗೆ ಅವಕಾಶವಿಲ್ಲದೆ ತಾಲೂಕು ಮಟ್ಟದಲ್ಲಿ ಎಲ್ಲ ಶಾಲೆಗಳ ಶಿಕ್ಷಕರು ಒಟ್ಟಾಗಿ ಕಾರ್ಯಕ್ರಮ ಆಚರಿಸುತ್ತಿದ್ದರು. ಶಾಲಾ ಮಟ್ಟದಲ್ಲಿಯೇ ಶಿಕ್ಷಕರ ದಿನಾಚರಣೆ ನಡೆಸಿರುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಹಾಗೂ ಎಸ್‌ಡಿಎಂಸಿ ಸದಸ್ಯರು ಮತ್ತು ಪೋಷಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತಮ ಅವಕಾಶ ದೊರೆತಂತಾಯಿತು ಎಂದು ಹೇಳಿದರು.
ಶಿಕ್ಷಕಿ ಮಂಜುಳಾ ಆರ್ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಮುಖ್ಯ ಶಿಕ್ಷಕ ಬಿ ಎಂ ವಿಜಯ್ ಸ್ವಾಗತಿಸಿದರು.

ಶಿಕ್ಷಕಿ ರೇಖಾ ನಿರೂಪಿಸಿದರು. ಗಂಗಾಮಣಿ ವಂದಿಸಿದರು. ಸಹ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಈ ಸಂದರ್ಭ ಸಾಲ ಅಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.