Kodagu

ರಾಜ್ಯದ ಥರ್ಮಲ್ ವಿದ್ಯುತ್ ಸ್ಥಾವರದಲ್ಲಿ ತಾಂತ್ರಿಕ ದೋಷ: ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಯ

admincoorgdaily

ರಾಜ್ಯದ ಥರ್ಮಲ್ ವಿದ್ಯುತ್ ಸ್ಥಾವರದಲ್ಲಿ ತಾಂತ್ರಿಕ ದೋಷ: ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಯ
ಮಡಿಕೇರಿ: ಈಗ ಉಂಟಾಗಿರುವ ವಿದ್ಯುತ್ ಸಂಪರ್ಕ ಕಡಿತಕ್ಕೂ ವಿರಾಜಪೇಟೆ ಚೆಸ್ಕಾಂ ವಿದ್ಯುತ್ ಬಲವರ್ಧನೆ ಮತ್ತು ಸುಧಾರಣಾ ಕಾಮಗಾರಿಗೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಎಎಸ್ ಪೊನ್ನಣ್ಣ ಅವರ ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ. ಮುತ್ತಣ್ಣ ಸ್ಪಷ್ಟಪಡಿಸಿದ್ದಾರೆ.

ರಾಯಚೂರಿನ ಎರಮಸ್ (RTPS) ಮತ್ತು ಬಳ್ಳಾರಿ ಕಲ್ಲಿದ್ದಲು ವಿದ್ಯುತ್ ಸ್ಥಾವರದಲ್ಲಿ ಏಕಾಏಕಿ ಜನರೇಟರ್‌ಗಳು ಸ್ಥಗಿತಗೊಂಡಿವೆ. ಇದರಿಂದ ಒಂದೇ ಬಾರಿಗೆ ಸುಮಾರು 3000 MW ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡು ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ವಾರಾಹಿ, ಶರಾವತಿ, ನಾಗಝರಿ, ಸುಪಾ ಜಲವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಪಡೆಯುವ ಜಿಲ್ಲೆಗಳಲ್ಲಿ ಅಡಚಣೆ ಇಲ್ಲ.

ಎರಡೂ ಥರ್ಮಲ್ ಕೇಂದ್ರಗಳ ಜನರೇಟರ್‌ಗಳನ್ನು ಮರು ಆರಂಭಿಸಲಾಗುತ್ತಿದ್ದು, ಉಷ್ಣತೆ ಬಂದು ಪೂರ್ಣ ಉತ್ಪಾದನೆ ಆರಂಭವಾಗಲು 2 ರಿಂದ 3 ಗಂಟೆ ಸಮಯ ಬೇಕಾಗುತ್ತದೆ. ರಾಯಚೂರು ಮತ್ತು ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ ಇಂಜಿನಿಯರ್‌ಗಳು ಶತಪ್ರಯತ್ನ ನಡೆಸುತ್ತಿದ್ದಾರೆ.

ಇದು ಕೆಇಬಿ, ಚೆಸ್ಕಾಂ ಅಥವಾ ಕೆಪಿಟಿಸಿಎಲ್ ವ್ಯಾಪ್ತಿಗೆ ಬರುವುದಿಲ್ಲ. ವಿದ್ಯುತ್ ಉತ್ಪಾದನೆ ಕೆಪಿಸಿಎಲ್ (ಕರ್ನಾಟಕ ಪವರ್ ಕಾರ್ಪೊರೇಷನ್) ವ್ಯಾಪ್ತಿಗೆ ಬರುತ್ತದೆ. ಇದರ ಉಸ್ತುವಾರಿ ಲೋಡ್ ಡಿಸ್ಪ್ಯಾಚಿಂಗ್ ಸೆಂಟರ್ (SLDC), ಬೆಂಗಳೂರು ನೋಡಿಕೊಳ್ಳುತ್ತದೆ. ಮೈಸೂರು ಮುಖ್ಯ ಇಂಜಿನಿಯರ್ ಅವರು SLDC ಜೊತೆ ನೇರ ಸಂಪರ್ಕದಲ್ಲಿದ್ದಾರೆ.

ಆದ್ದರಿಂದ ಕೊಡಗಿನ ವಿದ್ಯುತ್ ಗ್ರಾಹಕರು ಅಪಾರ್ಥ ಮಾಡಿಕೊಳ್ಳದೆ ಸಹಕರಿಸಬೇಕು. ಇದು ರಾಜ್ಯ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಆದ ತಾಂತ್ರಿಕ ಅಡಚಣೆಯಿಂದ ಉಂಟಾದ ಪರಿಸ್ಥಿತಿ ಎಂದು ಅವರು ಮನವಿ ಮಾಡಿದ್ದಾರೆ.