Kodagu

ತಲಕಾವೇರಿಯಲ್ಲಿ ನಾಳೆ ತೀರ್ಥೋದ್ಭವ - ಕೊಡಗು ಪೊಲೀಸರಿಂದ ಬಿಗಿ ಬಂದೋಬಸ್ತ್

admincoorgdaily

ಸಾಂದರ್ಭಿಕ ಚಿತ್ರ
ಮಡಿಕೇರಿ: 17-10-2026 ರಂದು ಸಂಜೆ 07:50 ಗಂಟೆಗೆ  ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವಾಗಲಿದ್ದು, ಪೂಜಾ ಸಮಾರಂಭಕ್ಕೆ ಗಣ್ಯ ವ್ಯಕ್ತಿಗಳು ಹಾಗೂ ಜಿಲ್ಲೆ/ಹೊರ ಜಿಲ್ಲೆ/ಹೊರ ರಾಜ್ಯದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು, ಈ ಸಂಬಂಧ ಈ ಕೆಳಕಂಡಂತೆ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿದೆ.

ಒಟ್ಟು 3 ಸೆಕ್ಟರ್‌ಗಳಾಗಿ ವಿಂಗಡಿಸಿ ಸೆಕ್ಟರ್ ವಾರು (Dy.SP-4, PI/CPI-11, PSI-16, ASI-38, HC/PC-283, KSRP-2 DAR-2) ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ.

ಮುಖ್ಯ ಬಂದೋಬಸ್ತ್ ವಿವರಗಳು:

- ಭಕ್ತಾದಿಗಳ ನಿಯಂತ್ರಣಕ್ಕೆ ಕುಂಡಿಕೆಯ ಮುಂಭಾಗದಲ್ಲಿ ತಾತ್ಕಾಲಿಕ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
- ತಲಕಾವೇರಿ ತೀರ್ಥೋದ್ಭವಕ್ಕೆ ಆಗಮಿಸುವ ಭಕ್ತಾದಿಗಳ ವಾಹನ ನಿಲುಗಡೆಗೆ ತಲಕಾವೇರಿಯಲ್ಲಿ ಒಟ್ಟು 4 ಕಡೆ ವ್ಯವಸ್ಥೆ ಕಲ್ಪಿಸಲಾಗಿದೆ. 1). ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ, ತಲಕಾವೇರಿ (ದ್ವಿಚಕ್ರ ವಾಹನ), 2). ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಮೇಲ್ಬಾಗ ಲಘು ವಾಹನಗಳ ನಿಲುಗಡೆ, 3). ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಮುಂಭಾಗದ ಮೈದಾನದಲ್ಲಿ ಟಿ.ಟಿ.ವಾಹನಗಳ ನಿಲುಗಡೆ, 4). ನಾರಾಯಣಾಚಾರ್ ಮನೆಗೆ ಹೋಗುವ ಮೈದಾನ.
- ತಲಕಾವೇರಿಯಲ್ಲಿ ಪಾರ್ಕಿಂಗ್ ಸ್ಥಳಗಳು ಭರ್ತಿ ಆದ ನಂತರ ಭಾಗಮಂಡಲದ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಮಾರುಕಟ್ಟೆ ಜಂಕ್ಷನ್ ನಿಂದ ಬಸ್ಸಿನಲ್ಲಿ ತಲಕಾವೇರಿಗೆ ತೆರಳುವುದು.
- ತಲಕಾವೇರಿ ತೀರ್ಥೋದ್ಭವಕ್ಕೆ ಆಗಮಿಸುವ ಭಕ್ತಾದಿಗಳ ವಾಹನ ನಿಲುಗಡೆಗೆ ಭಾಗಮಂಡಲದ ಚಾಮುಂಡಿಕಳದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದ್ದು ಅಲ್ಲಿ ವಾಹನ ಪಾರ್ಕಿಂಗ್ ಮಾಡಿ ಬಸ್ಸಿನಲ್ಲಿ ತಲಕಾವೇರಿಗೆ ತೆರಳುವ ವ್ಯವಸ್ಥೆ ಮಾಡಲಾಗಿದೆ.
- ಭಾಗಮಂಡಲದಲ್ಲಿ ವಾಹನ ನಿಲುಗಡೆ ಭರ್ತಿ ಆದ ನಂತರ ತಾವೂರು ಕಾವೇರಿ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
- ತುರ್ತು ಚಿಕಿತ್ಸೆಗಾಗಿ ತಲಕಾವೇರಿ ಉಪ ಖಜಾನೆ ಬಳಿ ಹಾಗೂ ಭಾಗಮಂಡಲದ ಸಂಗಮದ ಬಳಿ ತಲಾ ಒಂದೊಂದು ಆಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಲಾಗಿದೆ.
- ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಒಟ್ಟು 61 ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ.
- ಸಾರ್ವಜನಿಕರ ಅನುಕೂಲತೆಯ ದೃಷ್ಟಿಯಿಂದ ತಲಕಾವೇರಿ ಪ್ರಸಾದ ಕೌಂಟರ್ ಬಳಿ, ತಲಕಾವೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ, ಹನಿ ಡ್ಯೂ ಸ್ಟೇಷನ್ ಬಳಿ, ಹಾಗೂ ಭಾಗಮಂಡಲದ ಸಂಗಮದಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.
- ತಲಕಾವೇರಿಗೆ ತೆರಳುವ ರಸ್ತೆ ಮಾರ್ಗದಲ್ಲಿ ಭಕ್ತಾದಿಗಳ ಅನುಕೂಲಕ್ಕೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
- ಪಾದಯಾತ್ರೆ ತೆರಳುವ ಭಕ್ತಾದಿಗಳ ಬಂದೋಬಸ್ತ್ ಕರ್ತವ್ಯಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ.