Kodagu

ಸೆ.20ರಂದು ಸೋಮವಾರಪೇಟೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

admincoorgdaily

ಸೆ.20ರಂದು ಸೋಮವಾರಪೇಟೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಸೋಮವಾರಪೇಟೆ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 20ರ ಭಾನುವಾರ ಪೂರ್ವಾಹ್ನ 10 ಗಂಟೆಗೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ  ಜಿ.ಬಿ. ಸೋಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಜನಸೇವೆಯಲ್ಲಿ ಸಾರ್ಥಕ 106 ವರ್ಷಗಳನ್ನು ಪೂರೈಸಿದ್ದು, 2026ರ ಮಾರ್ಚ್ 31ಕ್ಕೆ 531 ಕೋಟಿ ರೂ.ಗಳ ವ್ಯವಹಾರ ನಡೆಸಿ ಲಾಭದತ್ತ ಸಾಗಿದೆ ಎಂದು ಮಾಹಿತಿ ನೀಡಿದರು.

ಸಂಘವು ಅಬ್ಬೂರುಕಟ್ಟೆ ಹಾಗೂ ಬಳಗುಂದ ಶಾಖೆಗಳನ್ನು ಹೊಂದಿದ್ದು, ಗ್ರಾಮೀಣ ಭಾಗದ ರೈತರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಜಾಮೀನು ಸಾಲ ವಿಮಾ ಯೋಜನೆ, ಪಿಗ್ಮಿ ಓವರ್‌ಡ್ರಾಫ್ಟ್ ಸಾಲದ ವಿಮಾ ಯೋಜನೆ ಜಾರಿಯಲ್ಲಿದ್ದು, ಯಶಸ್ವಿನಿ ರೈತರ ವಿಮಾ ಯೋಜನೆಗೆ 2084 ಸದಸ್ಯರು ನೋಂದಾವಣೆ ಮಾಡಿಸಿದ್ದಾರೆ ಎಂದರು.

2025-26ನೇ ಸಾಲಿನಲ್ಲಿ 7ನೇ ತರಗತಿ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳು ಮತ್ತು ಸಂಘದ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯೇತರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಜೊತೆಗೆ ಸಂಘದ ಶತಮಾನೋತ್ಸವ ವಿದ್ಯಾನಿಧಿಯಿಂದ ತಾಲೂಕಿನ ವಸತಿ ರಹಿತ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ನಿರ್ದೇಶಕರಾದ ಕೆ.ಟಿ. ಸುಭಾಶ್, ರೂಪ ಸತೀಶ್, ಪಿ.ಕೆ. ರವಿ, ಬಿ.ಎಂ. ಸುರೇಶ್, ದೇವರಾಜ್, ಉದಯ ಕುಮಾರ್, ಕಿರಣ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಚ್.ಪಿ. ರವೀಂದ್ರ ಇದ್ದರು.