Kodagu

ಪುಸ್ತಕ ಓದುವ ಸಂಭ್ರಮ ಅರ್ಥಪೂರ್ಣ, ಹೊಸ ಅನುಭವ: ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಕೃಷ್ಣರಾಜ್

admincoorgdaily

ಪುಸ್ತಕ ಓದುವ ಸಂಭ್ರಮ ಅರ್ಥಪೂರ್ಣ, ಹೊಸ ಅನುಭವ: ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಕೃಷ್ಣರಾಜ್
ಶನಿವಾರಸಂತೆ:ಇಂದಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದ್ದು, ಮತ್ತೆ ಅದನ್ನು ಬೆಳೆಸಲು, ಪುಸ್ತಕದ ಮೇಲೆ ಆಸಕ್ತಿ ಮೂಡಿಸಲು ‘ಪುಸ್ತಕ ಓದುವ ಸಂಭ್ರಮ’ದಂತಹ ಸಾಹಿತ್ಯಿಕ ಕಾರ್ಯಕ್ರಮ ಅರ್ಥಪೂರ್ಣ ಹಾಗೂ ಹೊಸ ಅನುಭವವಾಗಿದೆ ಎಂದು ಶನಿವಾರಸಂತೆ ಠಾಣೆ ವೃತ್ತ ನಿರೀಕ್ಷಕ ಜಿ.ಕೃಷ್ಣರಾಜ್ ಅಭಿಪ್ರಾಯಪಟ್ಟರು.

ಶನಿವಾರಸಂತೆಯ ನಾಟ್ಯ ಸದನ ಸಭಾಂಗಣದಲ್ಲಿ ಜಿಲ್ಲಾ ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ‘ಪುಸ್ತಕ ಓದುವ ಸಂಭ್ರಮ’ ಸಮಾರಂಭದಲ್ಲಿ ಜಿಲ್ಲೆಯ ಖ್ಯಾತ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಅವರ ‘ಕ್ರಮಣ’ ಕಾದಂಬರಿ ಓದುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

"ಪುಸ್ತಕ ಓದುವ ಅಭ್ಯಾಸ ಅಂದರೆ ಕೇವಲ ಹವ್ಯಾಸವಲ್ಲ. ಜ್ಞಾನದ ಕಡೆಗೆ ಕರೆದೊಯ್ಯುತ್ತದೆ ಹಾಗೂ ಮನಸ್ಸನ್ನು ಒಂದೆಡೆ ನಿಲ್ಲಿಸುತ್ತದೆ. ಮೊಬೈಲ್ ಪಕ್ಕಕ್ಕಿಟ್ಟು ಎಲ್ಲರೂ ಓದುವ ಅಭ್ಯಾಸ ಬೆಳೆಸಿಕೊಳ್ಳಿ" ಎಂದು ಕರೆ ನೀಡಿದರು.

ಸಾಹಿತಿ ಶರ್ಮಿಳಾ ರಮೇಶ್* ಅವರ ‘ದಿಟ್ಟೆ’ ಕಥಾ ಸಂಕಲನವನ್ನು ಸಾಹಿತಿ ಶ.ಗ. ನಯನತಾರಾ ಪ್ರಕಾಶ್ ಚಂದ್ರ*l ಹಾಗೂ ‘ಅವ್ವಯ್ಯಜ್ಜಿಯ ಕಥೆಗಳು’ ಸಂಕಲನವನ್ನು ಶಿಕ್ಷಕಿ ಜಿ.ಪಿ. ಕವಿತಾ ಓದಿ ವಿಮರ್ಶಿಸಿದರು.

ಸಾಹಿತಿ ಜಲಾ ಕಾಳಪ್ಪ ಅವರ ‘ಮುದ್ರೆ’ ಕಾದಂಬರಿಯನ್ನು ಸಾಹಿತಿ ಲಾವಣ್ಯ ಮೋಹನ್ ಹಾಗೂ ‘ಇತಿಹಾಸ ಪ್ರಸಿದ್ಧ ಶಾಂತಳ್ಳಿ ವೈಭವ’ ಕೃತಿಯನ್ನು ಶಿಕ್ಷಕಿ ಜ್ಯೋತಿ ನಿರಂಜನ್ ವಿಮರ್ಶಿಸಿದರು.

ಸಾಹಿತಿ ಹೇಮಂತ್ ಪಾರೇರಾ ಅವರ ‘ಬೆಳ್ಳಿ ಗೆಜ್ಜೆ’ ಕವನ ಸಂಕಲನವನ್ನು ಗೃಹಿಣಿ ಹೇಮಾ ಮುಳ್ಳೂರು ಹಾಗೂ ‘ಶಕುನದ ಹಕ್ಕಿ’ ಕಾದಂಬರಿಯನ್ನು ಶಿಕ್ಷಕಿ ಎಲ್.ಎಂ. ಪ್ರೇಮಾ ವಿಮರ್ಶಿಸಿದರು.

ಮುಖ್ಯ ಅತಿಥಿ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಕೃತಿಕಾರರ ಜೊತೆ ಸಂವಾದ ನಡೆಸಿದ ನಂತರ ಮಾತನಾಡಿ, "ಪುಸ್ತಕ ಪರಿಚಯವೇ ಬೇರೆ, ವಿಮರ್ಶೆಯೇ ಬೇರೆ. ಲೇಖಕರನ್ನು, ಪತ್ರಕರ್ತರನ್ನು ಅವರ ಸಮ್ಮುಖದಲ್ಲಿ ಅತಿಯಾಗಿ ಹೊಗಳಬಾರದು. ಒಬ್ಬ ಲೇಖಕನ ಪುಸ್ತಕದಲ್ಲಿ ಇಬ್ಬಂದಿತನವಿರುತ್ತದೆ. ಸರಸ್ವತಿಯನ್ನು ಆರಾಧಿಸಿ ಒಲಿಸಿಕೊಳ್ಳಬೇಕು. ತಪ್ಪುಗಳನ್ನು ಹೇಳಿಕೊಳ್ಳುವ ಪ್ರಾಮಾಣಿಕತೆ ಲೇಖಕರಲ್ಲಿ ಇರಬೇಕು. ವಿಮರ್ಶಕರಲ್ಲಿ ಗಟ್ಟಿತನ ಇರಬೇಕು" ಎಂದರು.

ವೃತ್ತ ನಿರೀಕ್ಷಕ ಜಿ.ಕೃಷ್ಣರಾಜ್ ಮೂವರು ಕೃತಿಕಾರರನ್ನು ಸನ್ಮಾನಿಸಿದರು. ಕೃತಿಕಾರರು ಆರು ಮಂದಿ ವಿಮರ್ಶಕರಿಗೆ ಹಾಗೂ ಕಲಾವಿದೆ/ಸಾಹಿತಿ ಮಿಲನ ಕೆ. ಭರತ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಅತಿಥಿ ಗಣ್ಯರನ್ನು ಹಾಗೂ ಕಾರ್ಯಕ್ರಮ ಆಯೋಜಕಿ ಹೇಮಾ ಮುಳ್ಳೂರು ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ನಾಟ್ಯ ಮಿಲನ ನೃತ್ಯ ಶಾಲೆಯ ಮಕ್ಕಳಾದ ಪುಣ್ಯ, ಪ್ರಾಂಜಲಿ ನೃತ್ಯ ಪ್ರದರ್ಶಿಸಿದರು ಹಾಗೂ ಶಿಕ್ಷಕಿ ತೇಜಾವತಿ ಭಾವಗೀತೆ ಹಾಡಿ ರಂಜಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಸಂಚಾಲಕ ಪರಿಚನ ಸತೀಶ್ ಮಾತನಾಡಿ, "ಸಾಹಿತ್ಯ ರಚನೆಗೆ ಮೊದಲು ಲೇಖಕರು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವಿಕೆ ವಾಸ್ತವ ಜ್ಞಾನದ ಜೊತೆಗೆ ಉತ್ತಮ ಆಲೋಚನೆಯನ್ನು ಮೂಡಿಸುತ್ತದೆ" ಎಂದರು.

ಕಲಾವಿದೆ ಮಿಲನಾ ಕೆ. ಭರತ್ ಪ್ರಾಸ್ತಾವಿಕ ನುಡಿಯಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ಎಸ್.ಎಂ. ಆಶಾ, ತೇಜಾವತಿ ಹಾಗೂ ಜಿತೇಂದ್ರ ಕೃತಿಕಾರರನ್ನು ಪರಿಚಯಿಸಿದರು. ಟ್ರಸ್ಟ್ ಅಧ್ಯಕ್ಷ ಕುದುಕುಳಿ ಭರತ್, ನಿರ್ದೇಶಕರಾದ ಇಂದಿರಾವತಿ ಭರತ್, ಜಿತೇಂದ್ರ, ಹೇಮಂತ್, ಸಿ. ಪ್ರಕಾಶ್ ಚಂದ್ರ, ಹೇಮಂತ್ ಪಾರೇರಾ* ಹಾಜರಿದ್ದರು.