ನಾಪೋಕ್ಲುವಿನಲ್ಲಿ ವಿಜೃಂಭಣೆಯ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೋತ್ಸವ: ಅಲಂಕೃತ ಮಂಟಪಗಳ ಆಕರ್ಷಣೆ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ಗೌರಿ ಗಣೇಶೋತ್ಸವದ ಅಂಗವಾಗಿ ನಾಪೋಕ್ಲುವಿನ ವಿವಿಧ ಗಣೇಶೋತ್ಸವ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಶೋಭಯಾತ್ರೆ ಶುಕ್ರವಾರ ಸಂಜೆ ನಾಪೋಕ್ಲುವಿನಲ್ಲಿ ವಿಜೃಂಭಣೆಯಿಂದ ನಡೆಯಿತು.
ನಾಪೋಕ್ಲುವಿನ ವಿವೇಕಾನಂದ ಸೇವಾ ಸಮಿತಿ ವತಿಯಿಂದ ಇಂದಿರಾನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ, ಶ್ರೀ ರಾಮ ಟ್ರಸ್ಟ್ ವತಿಯಿಂದ ಪಟ್ಟಣದ ಗುರುಪೊನ್ನಪ್ಪಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ, ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ವಿನಾಯಕ ಸೇವಾ ಸಮಿತಿ ವತಿಯಿಂದ ಹಳೇತಾಲೂಕಿನ ಶ್ರೀಪೊನ್ನು ಮುತ್ತಪ್ಪ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ, ನಾಪೋಕ್ಲುನಾಡು ಗೌರಿಗಣೇಶ ಸಮಿತಿ ವತಿಯಿಂದ ಹಳೇ ತಾಲೂಕಿನ ಶ್ರೀ ಭಗವತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ಹಾಗೂ ಕಕ್ಕುಂದ ಕಾಡು ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ನಾಪೋಕ್ಲು ಪಟ್ಟಣದ ಮುಖ್ಯಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಕೊಂಡೊಯ್ದು ಪವಿತ್ರ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಐದು ಮಂಟಪಗಳು ದೀಪಾಲಂಕಾರದಿಂದ ಅಲಂಕೃತಗೊಂಡು ಒಂದಕ್ಕೊಂದು ಪೈಪೋಟಿ ನೀಡುವ ಮೂಲಕ ನೋಡುಗರನ್ನು ರಂಜಿಸಿತು.
ಮೆರವಣಿಗೆಯಲ್ಲಿ ಸಾಂಪ್ರದಾಯಿಕ ವಾಲಗ, ವಿವಿಧ ಕಲಾ ತಂಡಗಳ ಪ್ರದರ್ಶನ ಹಾಗೂ ಡಿಜೆ ಮನರಂಜನೆಗೆ ಯುವ ಸಮೂಹ ಕುಣಿದು ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಹಳೇ ತಾಲೂಕಿನ ಶ್ರೀ ಪೊನ್ನು ಮುತ್ತಪ್ಪ ವಿನಾಯಕ ಸೇವಾ ಸಮಿತಿ ಹಾಗೂ ಇಂದಿರಾನಗರದ ವಿವೇಕಾನಂದ ಗಣೇಶೋತ್ಸವ ಸೇವಾ ಸಮಿತಿಯಿಂದ ಆಯೋಜಿಸಲಾದ ಕಥಾ ಸಾರಾಂಶ ಪ್ರದರ್ಶನ ನೋಡುಗರ ಗಮನಸೆಳೆಯಿತು.
ಗಣೇಶ ಮೂರ್ತಿಗಳ ಶೋಭೆಯಾತ್ರೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ನಾಪೋಕ್ಲುವಿನ ಮುಸಲ್ಮಾನ ಬಾಂಧವರು ತಂಪು ಪಾನಿಯ ಹಾಗೂ ಸಿಹಿ ವಿತರಿಸಿ ಸೌಹಾರ್ದತೆಗೆ ಸಾಕ್ಷಿಯಾದರು.
ಈ ಸಂದರ್ಭ ನಾಪೋಕ್ಲುವಿನ ಆಯಾ ಗಣೇಶೋತ್ಸ ಸೇವಾ ಸಮಿತಿಯ ಅಧ್ಯಕ್ಷರು, ಆಡಳಿತ ಮಂಡಳಿ ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.