22ರ ಯುವಕನ ಮಹಾ ತ್ಯಾಗ: ಸಾವಿನಂಚಿನಲ್ಲೂ ಹಲವರಿಗೆ ಜೀವದಾನ
admincoorgdaily

ಮಡಿಕೇರಿ, ನ.10: ವಯಸ್ಸು ಕೇವಲ 22 ವರ್ಷ. ಬದುಕಿನಲ್ಲಿ ಇನ್ನೂ ಸಾಕಷ್ಟು ಕನಸುಗಳನ್ನು ಕಾಣಬೇಕಿದ್ದ ಯುವಕ ಯೋಗೇಶ್ ಇಂದು ವಿಧಿಯ ಕ್ರೂರ ಆಟಕ್ಕೆ ಸಿಲುಕಿರುವುದು ದುರಂತ.
ಶನಿವಾರ ತಡರಾತ್ರಿಯವರೆಗೂ ಮಡಿಕೇರಿಯ ಸಪ್ತಗಿರಿ ಎಂಟರ್ಪ್ರೈಸಸ್ನ ಕಚೇರಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದೀಪಾಲಂಕಾರ ಹಾಗೂ ಪೂಜಾ ಕಾರ್ಯಕ್ರಮದ ಸಿದ್ಧತೆಗಳನ್ನು ಉತ್ಸಾಹದಿಂದ ಪೂರ್ಣಗೊಳಿಸಿ ಮನೆಗೆ ತೆರಳಿದ್ದ ಯೋಗೇಶ್, ಭಾನುವಾರ ಬೆಳಿಗ್ಗೆ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದರು.
ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಯಿತು. ಮಂಗಳೂರಿನಲ್ಲಿ ವೈದ್ಯಕೀಯ ಪರೀಕ್ಷೆಯ ಬಳಿಕ ಯೋಗೇಶ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈಗ ಅವರನ್ನು ಮಡಿಕೇರಿಗೆ ಕರೆತಂದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆಯಾದರೂ, ಅವರು ಇನ್ಯಾವತ್ತೂ ಮರಳಲಾಗದ ಗಂಭೀರ ಸ್ಥಿತಿಗೆ ಹೋಗಿದ್ದಾರೆ.
ಆದರೆ ಮಗನ ಅಗಲಿಕೆಯ ನೋವಿನ ನಡುವೆಯೂ ಯೋಗೇಶ್ ಕುಟುಂಬ ಅಪರೂಪದ ಮಾನವೀಯ ನಿರ್ಧಾರ ಕೈಗೊಂಡಿದೆ. ತಮ್ಮ ಮನೆಯ ಯುವಕನ ಬದುಕು ಉಳಿಯದಿದ್ದರೂ, ಆತನ ಅಂಗಾಂಗಗಳ ಮೂಲಕ ಬೇರೆಯವರ ಬದುಕಿಗೆ ಬೆಳಕಾಗಲಿ ಎಂಬ ಆಶಯದೊಂದಿಗೆ ಅಂಗಾಂಗ ದಾನಕ್ಕೆ ಮುಂದಾಗಿದೆ.
ಇನ್ನೊಂದು ವಿಶೇಷವೆಂದರೆ, ಯೋಗೇಶ್ ಇತ್ತೀಚೆಗೆ ಕೆಮಿಸ್ಟ್ ಅಸೋಸಿಯೇಷನ್ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದರು. ಅಂದು ತನ್ನ ರಕ್ತದ ಮೂಲಕ ಮತ್ತೊಬ್ಬರ ಜೀವ ಉಳಿಸಲು ಮುಂದಾಗಿದ್ದ ಯುವಕ, ಇಂದು ತನ್ನ ಅಂಗಾಂಗಗಳ ಮೂಲಕ ಹಲವರ ಬದುಕಿಗೆ ಆಸರೆಯಾಗುವ ಅವಕಾಶ ಸೃಷ್ಟಿಸಿದ್ದಾನೆ.
ಬದುಕಿನ ಅರ್ಥವೇ ಇತರರಿಗಾಗಿ ಬದುಕುವುದರಲ್ಲಿ ಅಡಗಿದೆ ಎಂಬುದನ್ನು ಯೋಗೇಶ್ ಮತ್ತು ಆತನ ಕುಟುಂಬ ತಮ್ಮ ನಡೆ ಮೂಲಕ ಸಾರಿದ್ದಾರೆ. ಒಂದು ಕುಟುಂಬದ ಕಣ್ಣೀರಿನ ಹಿಂದೆ ಹಲವು ಕುಟುಂಬಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ಮಹಾನ್ ನಿರ್ಧಾರ ಅಡಗಿದೆ.