ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಗೌರಿ ಗಣೇಶ ಮೂರ್ತಿಯ ವಿಸರ್ಜನೆೋತ್ಸವ
admincoorgdaily

ವಿರಾಜಪೇಟೆ:ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 44 ನೇ ವರ್ಷದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ಒಟ್ಟು ಏಳು ದಿವಸಗಳ ಕಾಲ ಪ್ರತಿಷ್ಠಾಪನೆಯನ್ನು ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ವಿಸರ್ಜನೋತ್ಸವದಂದು ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಭಕ್ತಾದಿಗಳು ಆಗಮಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಪೂಜೆ ಹಾಗೂ ಗಣಪತಿ ಪೂಜೆಯನ್ನು ಮಾಡಿಸಿದರು.
ಅರ್ಚಕರು ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾ ಗಣಪತಿ ಸ್ವಾಮಿ, ಶ್ರೀ ಅಯ್ಯಪ್ಪ ಸ್ವಾಮಿ ,ಶ್ರೀ ವನದುರ್ಗ ಹಾಗೂ ಶ್ರೀ ನಾಗ ದೇವರುಗಳಿಗೆ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಿದರು. ವಿವಿಧ ಧಾರ್ಮಿಕ ಸೇವೆಗಳನ್ನು ನೆರವೇರಿಸಿದಂತಹ ಅರ್ಚಕರು ಶ್ರೀ ಮಹಾಗಣಪತಿ ಸ್ವಾಮಿಗೆ ಹಾಗೂ ಗೌರಿ ದೇವರಿಗೆ ಮಹಾ ಮಂಗಳಾರತಿಯನ್ನು ಸಲ್ಲಿಸುವುದರ ಮೂಲಕ ವಿಶೇಷ ಪೂಜೆಯನ್ನು ನೆರವೇರಿಸಿದರು. ತದನಂತರ ಪ್ರಸಾದ ವಿತರಣೆ ಹಾಗೂ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಸೇವೆಯು ಜರುಗಿತು. ಮಧ್ಯಾಹ್ನದ ಬಳಿಕ ವಿದ್ಯುತ್ ಹಾಗೂ ಹೂವಿನ ಅಲಂಕೃತ ತೇರಿನ ಮಂಟಪದಲ್ಲಿ ಶ್ರೀ ಗಣಪತಿ ಗೌರಿ ದೇವರುಗಳನ್ನು ಪೂಜಿಸಿ ಪ್ರತಿಷ್ಠಾಪನೆಯನ್ನು ಮಾಡಲಾಯಿತು.
ದೇವಸ್ಥಾನದ ಎದುರುಗಡೆಯಿಂದ ಆರಂಭಗೊಂಡ ಶೋಭಾ ಯಾತ್ರೆಯು ಬೇಟೋಳಿ ಮೂಲೆ ಅಂಗಡಿಯ ಹೊಳೆಯವರೆಗೂ ಸಾಗಿತು. ತದನಂತರ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜೆಯನ್ನು ಸಲ್ಲಿಸಿದ ಬಳಿಕ ಶ್ರೀ ಗಣಪತಿ ಹಾಗೂ ಗೌರಿ ದೇವರುಗಳ ಮೂರ್ತಿಗಳನ್ನು ಮೂಲೆ ಅಂಗಡಿ ಹೊಳೆಯಲ್ಲಿ ವಿಸರ್ಜನೆಯನ್ನು ನೆರವೇರಿಸಲಾಯಿತು. ಶೋಭಾ ಯಾತ್ರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕುಣಿತ ಭಜನೆ ತಂಡ ಹಾಗೂ ಸಮೀಪದ ರಾಮನಗರದ ಮಕ್ಕಳ ಕುಣಿತ ಭಜನೆ ತಂಡವು ಮೆರುಗನ್ನು ನೀಡಿತು. ದಾರಿದಕ್ಕೂ ದೇವರ ಹಾಡಿಗೆ ನೃತ್ಯವನ್ನು ಮಾಡುವುದರ ಮೂಲಕ ಈ ತಂಡವು ಶೋಭಾ ಯಾತ್ರೆಯಲ್ಲಿ ಸಾಗಿತು. ರುದ್ರಂ ಚಂಡೆ ಬಳಗದವರಿಂದ ಚಂಡೆ ಸೇವೆ, ದೇವಸ್ಥಾನದ ಮಹಿಳಾ ಭಜನಾ ಮಂಡಳಿಯಿಂದ ಭಜನೆ ಸೇವೆ, ಬೊಂಬೆ ಕುಣಿತ, ಮುಂತಾದ ಧಾರ್ಮಿಕ ಸೇವೆಗಳನ್ನು ನಡೆಸಲಾಯಿತು.
ವಿಸರ್ಜನೋತ್ಸವದ ಬಳಿಕ ದೇವಸ್ಥಾನಕ್ಕೆ ಆಗಮಿಸಿ ಅರ್ಚಕರು ಪೂಜೆಯನ್ನು ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ರವರು ನೆರವೇರಿಸಿದರು. ಶೋಭಾ ಯಾತ್ರೆ ಯುದ್ದಕ್ಕೂ ಬೇಟೋಳಿ ಗ್ರಾಮದ, ಸುತ್ತಮುತ್ತಲಿನ ಗ್ರಾಮಗಳ, ವಿರಾಜಪೇಟೆ ನಗರದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಂತೋಷ್ ಬಿ ಪಿ, ಉಪಾಧ್ಯಕ್ಷರಾದ ನಂದ ಬಿ ಜಿ, ಶೈಲೇಶ್ ಬಿ ಎಂ ,ಕಾರ್ಯದರ್ಶಿ ಬಿ ಎನ್ ಶಾಂತಿಭೂಷಣ್, ಖಜಾಂಚಿ ಜ್ಯೋತಿ, ದೇವಸ್ಥಾನದ ಆಡಳಿತ ಮಂಡಳಿಯ ಸರ್ವ ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.