Kodagu

ಚೆತ್ ಕಲ್ಲು ಪೂರೈಕೆಯಲ್ಲಿ ದಲ್ಲಾಳಿಗಳ ಹಾವಳಿ ಮುಂದುವರಿಕೆ : ಬಿಜೆಪಿ ಎಸ್‌ಟಿ ಮೋರ್ಚಾ ಆರೋಪ

admincoorgdaily

ಚೆತ್ ಕಲ್ಲು ಪೂರೈಕೆಯಲ್ಲಿ ದಲ್ಲಾಳಿಗಳ ಹಾವಳಿ ಮುಂದುವರಿಕೆ : ಬಿಜೆಪಿ ಎಸ್‌ಟಿ ಮೋರ್ಚಾ ಆರೋಪ
ವಿರಾಜಪೇಟೆ: ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಸುಲಭವಾಗಿ ಚೆತ್ ಕಲ್ಲು ಪೂರೈಸುವುದಾಗಿ ಶಾಸಕರು ನೀಡಿದ್ದ ಭರವಸೆ ಸಂಪೂರ್ಣವಾಗಿ ಹುಸಿಯಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎ. ಪರಮೇಶ್ವರ ಅವರು ಆರೋಪಿಸಿದ್ದಾರೆ.

 ಕೇರಳದಿಂದ ಕೊಡಗಿಗೆ ಚೆತ್ತುಕಲ್ಲು ಸಾಗಾಟದ ವೇಳೆ ಉಂಟಾಗುತ್ತಿರುವ ಬೆಲೆ ಹಾಗೂ ದಂದೆಯ ವಿಚಾರವಾಗಿ ಪತ್ರಿಕಾ ಹೇಳಿಕೆ ನೀಡಿದ ಪರಮೇಶ್ವರ ಅವರು, ಕಳೆದ ಹಲವು ತಿಂಗಳಿನಿಂದ ನಡೆಯುತ್ತಿದ್ದ ದಂದೆ ಮತ್ತು ದಲ್ಲಾಳಿಗಳ ಹಾವಳಿಯನ್ನು ತಡೆದು, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದಾಗಿ ವಿರಾಜಪೇಟೆ ಶಾಸಕರು ಭರವಸೆ ನೀಡಿದ್ದರು. ಆದರೆ, ಈ ಹಿಂದೆ 45 ರಿಂದ 48 ರೂಪಾಯಿಗೆ ಸಿಗುತ್ತಿದ್ದ ಚೆತ್ತ್ಕಲ್ಲಿಗೆ ಪ್ರಸ್ತುತ ಯಾವುದೇ ಡೀಸೆಲ್ ದರ ಏರಿಕೆಯಾಗಲಿ, ತೆರಿಗೆ ಅಥವಾ ಜಿಎಸ್‌ಟಿ ಹೆಚ್ಚಳವಾಗಲಿ ಆಗದೇ ಇದ್ದರೂ ಏಕಾಏಕಿ 60 ರಿಂದ 65 ರೂಪಾಯಿವರೆಗೆ ಬೆಲೆ ಹೆಚ್ಚಿಸಲಾಗಿದೆ. ಅಲ್ಲದೆ ಕೊಡಗಿಗೆ ಕೇವಲ ದ್ವಿತೀಯ ದರ್ಜೆಯ (ಸೆಕೆಂಡ್ ಕ್ವಾಲಿಟಿ) ಚೆಕ್‌ನಲ್ಲೂ ಮಾತ್ರ ಸರಬರಾಜಾಗುತ್ತಿದ್ದು, ಮೊದಲ ದರ್ಜೆಯ ಸಾಮಗ್ರಿ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ. 

   ದಲ್ಲಾಳಿಗಳ ದಂದೆಯಿಂದ ಮುಕ್ತಿ ಸಿಗಲಿದೆ ಎಂದು ಭಾವಿಸಿದ್ದ ಸಾರ್ವಜನಿಕರಿಗೆ ಈಗ ತೀವ್ರ ನಿರಾಶೆಯಾಗಿದೆ. ಜನಪ್ರತಿನಿಧಿಗಳ ಹಾಗೂ ಶಾಸಕರ ಘನತೆಗೆ ಕುಂದು ತರುವ ರೀತಿಯಲ್ಲಿ ಹಿಂಬಾಗಿಲ ದಂದೆ ಮುಂದುವರಿದಿದೆ. ಇನ್ನಾದರೂ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ದಲ್ಲಾಳಿಗಳ ಹಾವಳಿಯನ್ನು ತಡೆದು ಸಾರ್ವಜನಿಕರಿಗೆ ನ್ಯಾಯಯುತ ದರದಲ್ಲಿ ಸುಲಭವಾಗಿ ಚೆತ್ತುಕಲ್ಲು ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಎಂ.ಎ. ಪರಮೇಶ್ವರ ಅವರು ಒತ್ತಾಯಿಸಿದ್ದಾರೆ.