Kodagu

ವಿರಾಜಪೇಟೆಯಲ್ಲಿ ಕೇರಳ ಕಲೆಗಳ ವೈಭವ: ಸಡಗರದ ಓಣಂ ಆಚರಣೆ, ಕೃಷ್ಣ ವೇಷಧಾರಿ ಮಕ್ಕಳ ಕಲರವ

admincoorgdaily

ವಿರಾಜಪೇಟೆಯಲ್ಲಿ ಕೇರಳ ಕಲೆಗಳ ವೈಭವ: ಸಡಗರದ ಓಣಂ ಆಚರಣೆ, ಕೃಷ್ಣ ವೇಷಧಾರಿ ಮಕ್ಕಳ ಕಲರವ
ವಿರಾಜಪೇಟೆ: ಕೇರಳದ ಸಾಂಪ್ರದಾಯಿಕ ಶೈಲಿಯ ಚಂಡೆ ವಾದನ, ಬ್ಯಾಂಡ್ ಸೆಟ್ ಹಾಗೂ ಕಣ್ಮನ ಸೆಳೆಯುವ ನವಿಲು ನರ್ತನದೊಂದಿಗೆ ಇಲ್ಲಿನ ಮೀನುಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ  18ನೇ ವರ್ಷದ ಓಣಂ ಆಚರಣೆಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ 08:30ಕ್ಕೆ ಶ್ರೀ ಮುತ್ತಪ್ಪ ಸನ್ನಿಧಿಯಲ್ಲಿ ಮಹಾಬಲಿಯನ್ನು ಭಕ್ತಿಯಿಂದ ಬರಮಾಡಿಕೊಂಡು, ದೀಪ ಬೆಳಗಿಸುವುದರೊಂದಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.

ಬಾಲ ಕೃಷ್ಣರ ಕಲರವ - ಆಕರ್ಷಕ ಮೆರವಣಿಗೆ: ಬೆಳಿಗ್ಗೆ 09:30ಕ್ಕೆ ಶ್ರೀ ಮುತ್ತಪ್ಪ ದೇವಾಲಯದಿಂದ ಆರಂಭವಾದ ಮಹಾಬಲಿ (ಮಾವೇಲಿ) ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ]ಮೆರವಣಿಗೆಯಲ್ಲಿ ಪುಟಾಣಿ ಮಕ್ಕಳು ಶ್ರೀಕೃಷ್ಣನ ವೇಷ ಧರಿಸಿ ಸಾರ್ವಜನಿಕರ ಕಣ್ಮನ ಸೆಳೆದರು. ಕೈಯಲ್ಲಿ ಕೊಳಲು ಹಿಡಿದು, ಮಯೂರ ಪಿಂಛ ಮುಡಿದು ಬಂದ ಮುದ್ದು ಕೃಷ್ಣರ ನಗು ಹಬ್ಬದ ಕಳೆಯನ್ನು ಇಮ್ಮಡಿಗೊಳಿಸಿತು.
 ಮೆರವಣಿಗೆಯಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಗಡಿಯಾರ ಕಂಬದ ಬಳಿ ಉಚಿತ ಕೂಪನ್‌ಗಳನ್ನು ವಿತರಿಸಲಾಯಿತು.

ಕೇರಳ ಸಂಸ್ಕೃತಿಯ ಅನಾವರಣ:

 ಮೆರವಣಿಗೆಯುದ್ದಕ್ಕೂ ಮೊಳಗಿದ ಸಾಂಪ್ರದಾಯಿಕ ಚಂಡೆ ವಾದನ ಮತ್ತು ಬ್ಯಾಂಡ್ ಸೆಟ್ ಧ್ವನಿಗೆ ಸಾರ್ವಜನಿಕರು ಹೆಜ್ಜೆ ಹಾಕಿದರು. ಇದರೊಂದಿಗೆ ಅತ್ಯಾಕರ್ಷಕ ನವಿಲು ನರ್ತನ ವೇಷಧಾರಿಗಳ ನೃತ್ಯ ಮೆರವಣಿಗೆಗೆ ಭವ್ಯ ಮೆರುಗು ನೀಡಿತು. ಸಾಂಪ್ರದಾಯಿಕ ಬಿಳಿ ಪಂಚೆ ಧರಿಸಿದ ಪುರುಷರು ಹಾಗೂ ಸೆಟ್ ಸೀರೆ ಉಟ್ಟ ಮಹಿಳೆಯರು ಕೇರಳದ ಶ್ರೀಮಂತ ಸಂಸ್ಕೃತಿಯನ್ನು ವಿರಾಜಪೇಟೆಯ ಬೀದಿಗಳಲ್ಲಿ ಅನಾವರಣಗೊಳಿಸಿದರು.

ಪುಕ್ಕಳಂ ಸ್ಪರ್ಧೆ ಮತ್ತು ಓಣಂ ಸದ್ಯ: ಹಬ್ಬದ ಅಂಗವಾಗಿ ಬೆಳಿಗ್ಗೆ 09:00 ರಿಂದ 11:00 ರವರೆಗೆ ಸಾರ್ವಜನಿಕರಿಗಾಗಿ ಹೂವಿನ ರಂಗೋಲಿ (ಪುಕ್ಕಳಂ) ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿವಿಧ ಹೂವುಗಳನ್ನು ಬಳಸಿ ಆಕರ್ಷಕ ವಿನ್ಯಾಸಗಳನ್ನು ಬಿಡಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿದರು
ಮಧ್ಯಾಹ್ನ 12:00 ಗಂಟೆಗೆ ಹಬ್ಬಕ್ಕೆ ಆಗಮಿಸಿದ ಸಮಾಜದ ಬಾಂಧವರಿಗೆ ಹಾಗೂ ನೂರಾರು ಭಕ್ತಾದಿಗಳಿಗೆ ಸಾಂಪ್ರದಾಯಿಕ ಶೈಲಿಯ ಭರ್ಜರಿ ಓಣಂ ಸದ್ಯ (ಸಮೂಹ ಭೋಜನ) ಉಣಬಡಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ. ಜಿ ಸುಮೇಶ್, ಕಾರ್ಯದರ್ಶಿ ಬಾಬು, ಸಜೀವನ್, ಪದ್ಮನಾಭ, ಸೇರಿದಂತೆ ಸಮಾಜದ ಉಪಾಧ್ಯಕ್ಷರು, ಆಡಳಿತ ಮಂಡಳಿ ಪದಾಧಿಕಾರಿಗಳು ಸೇರಿದಂತೆ, ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಮಲಯಾಳಿ ಸಮಾಜದ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.