Kodagu

ಟಿ.ಶೆಟ್ಟಿಗೇರಿಯಲ್ಲಿ ಇಗ್ಗುತ್ತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘದ ಮೂರನೇ ಶಾಖೆ ಆರಂಭ

admincoorgdaily

ಟಿ.ಶೆಟ್ಟಿಗೇರಿಯಲ್ಲಿ ಇಗ್ಗುತ್ತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘದ ಮೂರನೇ ಶಾಖೆ ಆರಂಭ
ಪೊನ್ನಂಪೇಟೆ, ನ.19: ಪೊನ್ನಂಪೇಟೆ ಕೇಂದ್ರ ಕಚೇರಿಯನ್ನು ಹೊಂದಿರುವ ನಂ.562 ಇಗ್ಗುತ್ತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಮೂರನೇ ಶಾಖೆ ಟಿ. ಶೆಟ್ಟಿಗೇರಿಯಲ್ಲಿ ಗುರುವಾರ ಶುಭಾರಂಭಗೊಂಡಿತು.

ಸಂಘದ ನೂತನ ಶಾಖೆಯನ್ನು ಹಿರಿಯ ಸಹಕಾರಿ ಧುರೀಣ ಮಚ್ಚಮಾಡ ಎ. ಸೋಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪೊನ್ನಂಪೇಟೆಯಲ್ಲಿ ಆರಂಭಗೊಂಡ ಸಂಘವು ಗೋಣಿಕೊಪ್ಪಲಿನಲ್ಲಿ ಎರಡನೇ ಶಾಖೆ ತೆರೆದು ಇದೀಗ ಟಿ. ಶೆಟ್ಟಿಗೇರಿಯಲ್ಲಿ ಮೂರನೇ ಶಾಖೆಯನ್ನು ಆರಂಭಿಸಿರುವುದು ಸಂತಸದ ವಿಚಾರವಾಗಿದೆ. ಕೊಡಗಿನ ಜನತೆ ಸಂಘದ ಸದಸ್ಯತ್ವ ಪಡೆದು ಠೇವಣಿ ಇರಿಸುವುದರೊಂದಿಗೆ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು. ಇಗ್ಗುತ್ತಪ್ಪ ದೇವರ ಹೆಸರಿನಲ್ಲಿ ಆರಂಭಗೊಂಡಿರುವ ಈ ಸಹಕಾರಿ ಸಂಘ ಜನರ ವಿಶ್ವಾಸ ಗಳಿಸಿ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಪತಿ ಪೂಜೆ ನೆರವೇರಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಆರಮಣಮಾಡ ಎಸ್. ಬೋಪಯ್ಯ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ನೂತನವಾಗಿ ಪ್ರಾರಂಭಿಸಿದ ಶಾಖೆಯಲ್ಲಿ ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಗ್ಮಿ ಸಾಲ, ವಾಹನ ಸಾಲ ಸೇರಿದಂತೆ ಇತರೆ ಸಾಲಗಳನ್ನು ನೀಡುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಮಾಜಸೇವಕ ಮಚ್ಚಮಾಡ ಡಾಲಿ ಚಂಗಪ್ಪ ಮಾತನಾಡಿ, ಪೊನ್ನಂಪೇಟೆ ಹಾಗೂ ಗೋಣಿಕೊಪ್ಪಲು ಶಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಆರಂಭಗೊಂಡಿರುವ ಟಿ. ಶೆಟ್ಟಿಗೇರಿ ಶಾಖೆಯೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಲಾಭದಾಯಕವಾಗಿ ಬೆಳೆಯಲಿ ಎಂದು ಆಶಿಸಿದರು.

ಈ ಭಾಗದ ಬೆಳೆಗಾರರು ಹಣವನ್ನು ಅನಗತ್ಯವಾಗಿ ವ್ಯಯಿಸುವ ಬದಲು ಸಹಕಾರಿ ಸಂಘದಲ್ಲಿ ಠೇವಣಿ ಇರಿಸಿ, ಸಂಘದ ಮೂಲಕ ಹಣಕಾಸಿನ ವ್ಯವಹಾರ ನಡೆಸಬೇಕು. ಇದರಿಂದ ವೈಯಕ್ತಿಕ ಉಳಿತಾಯದ ಜೊತೆಗೆ ಸಹಕಾರಿ ಸಂಸ್ಥೆಯ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸಂಘದ ಸ್ಥಾಪಕ ಅಧ್ಯಕ್ಷ ಮದ್ರೀರ ಗಿಣಿ ಸೋಮಯ್ಯ ಮಾತನಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬೆಳೆಗಾರ ಮಚ್ಚಾಮಡ ಮನು ಕುಶಾಲಪ್ಪ ಅವರು ಸಂಘದ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 5 ಲಕ್ಷ ರೂ. ನಿರಖು ಠೇವಣಿ ಇರಿಸಿದರು.

ಸಂಘದ ನಿರ್ದೇಶಕಿ ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಪ್ರಾರ್ಥಿಸಿದರು. ಐನಂಡ ಕೆ. ಮಂದಣ್ಣ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಚಿರಿಯಪಂಡ ಕೆ. ಕಾಶಿಯಪ್ಪ, ನಿರ್ದೇಶಕರಾದ ಕೆ.ಜಿ. ಭೀಮಯ್ಯ, ಕೆ.ಎಂ. ಚಿದಂಬರ, ಕೆ.ಜಿ. ಕುಶಾಲಪ್ಪ, ಎಂ.ಪಿ. ಪ್ರಕಾಶ್, ಕಳ್ಳಿಚಂಡ ಡಿ. ಪೂಣಚ್ಚ, ಜಿ.ಜಿ. ಗಂಗಮ್ಮ, ಎಸ್. ಸುರೇಶ್, ಕೆ.ಎನ್. ಕಾವೇರಪ್ಪ, ಎಂ.ಜೆ. ಪಾರ್ವತಿ ಹಾಗೂ ಸಂಘದ ಕಾರ್ಯನಿರ್ವಹಣಾಧಿಕಾರಿ ಗಳಾದ ಎಂ.ಎಸ್. ಗಣಪತಿ, ಅಜ್ಜಿಕುಟ್ಟೀರ ಕಾರ್ಯಪ್ಪ, ಸಿಬ್ಬಂದಿಗಳು,ಹಿರಿಯ ಸಹಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.