ಬದುಕಿನ ಕೊನೆಯ ಪಯಣವಾಯಿತು ಆಸ್ಪತ್ರೆಯ ದಾರಿ!
admincoorgdaily

ಗುಡ್ಡೆಹೊಸೂರು: ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೊರಟಿದ್ದ ವ್ಯಕ್ತಿ ಮಾರ್ಗಮಧ್ಯೆಯೇ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿರುವ ದಾರುಣ ಘಟನೆ ಗುಡ್ಡೆಹೊಸೂರಿನಲ್ಲಿ ನಡೆದಿದೆ.
ಮೃತಪಟ್ಟವರು ಮಾದಾಪುರ ಸಮೀಪದ ಗರಗಂದೂರು ನಿವಾಸಿ ಹರ್ಷಿತ್.
ಹರ್ಷಿತ್ ಅವರು ಆರೋಗ್ಯ ತಪಾಸಣೆಗಾಗಿ ಶುಕ್ರವಾರ ಬೆಳಗ್ಗೆ ತಮ್ಮ ಕಿಯಾ ಕಾರಿನಲ್ಲಿ ಕುಶಾಲನಗರದ ಖಾಸಗಿ ಆಸ್ಪತ್ರೆಗೆ ಪ್ರಯಾಣ ಬೆಳೆಸಿದ್ದರು. ಬಸವನಹಳ್ಳಿ ಸಮೀಪ ಬರುತ್ತಿದ್ದಂತೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಆದರೂ ಆಸ್ಪತ್ರೆ ತಲುಪುವ ಧಾವಂತದಲ್ಲಿ ಅವರು ಪ್ರಯಾಣ ಮುಂದುವರಿಸಿದ್ದರು.
ಆದರೆ, ಗುಡ್ಡೆಹೊಸೂರಿನ ಆಟೋ ನಿಲ್ದಾಣದ ಸಮೀಪ ತಲುಪುತ್ತಿದ್ದಂತೆ ಹೃದಯಾಘಾತ ತೀವ್ರಗೊಂಡಿದೆ. ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ರಸ್ತೆ ಬದಿಯಲ್ಲಿದ್ದ ಥಾರ್ ಜೀಪ್ ಹಾಗೂ ಆಟೋ ನಡುವೆ ಕಾರು ನಿಂತಿದೆ.
ಈ ಸಂದರ್ಭದಲ್ಲಿ ಮಾನವೀಯತೆ ಮೆರೆದ ಆಟೋ ಚಾಲಕರು ತಕ್ಷಣ ಕಾರ್ಯಪ್ರವೃತ್ತರಾದರು. ಆಟೋ ಮಾಲೀಕ ಚಂದ್ರ ಸೇರಿದಂತೆ ಕೆಲವರು ಕಾರಿನಿಂದ ಹರ್ಷಿತ್ ಅವರನ್ನು ಹೊರತೆಗೆದು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆ ತಲುಪುತ್ತಿದ್ದಂತೆ ವೈದ್ಯರು ಹೃದಯಾಘಾತಕ್ಕೆ ಸಂಬಂಧಿಸಿದ ತುರ್ತು ಚಿಕಿತ್ಸೆಯನ್ನು ಆರಂಭಿಸಿದರು. ಸುಮಾರು ಅರ್ಧ ಗಂಟೆ ಕಾಲ ವೈದ್ಯರು ಸತತ ಪ್ರಯತ್ನ ನಡೆಸಿದರೂ ಹರ್ಷಿತ್ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಹರ್ಷಿತ್ ಅವರ ಪತ್ನಿ ನೀಡಿದ ಮಾಹಿತಿಯಂತೆ, ಬೆಳಗಿನಿಂದಲೇ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಲು ಮುಂದಕ್ಕೆ ನಿರ್ಧರಿಸಿದ್ದರು. ಈ ವೇಳೆ ದುರಂತ ಸಂಭವಿಸಿದೆ.