Kodagu

ದಂಗೆ ಮೂಲಕ ಅರಾಜಕತೆ ಸೃಷ್ಟಿಸಿ ಅಧಿಕಾರ ಹಿಡಿಯುವ ಸಂಚು ನಡೆಯುತ್ತಿದೆ: ದೇಶವಿರೋಧಿ ಶಕ್ತಿಗಳ ವಿರುದ್ಧ ಜಾಗೃತರಾಗೋಣ - ಎಡಿಕೇರಿ ಪ್ರಸನ್ನ

admincoorgdaily

ದಂಗೆ ಮೂಲಕ ಅರಾಜಕತೆ ಸೃಷ್ಟಿಸಿ ಅಧಿಕಾರ ಹಿಡಿಯುವ ಸಂಚು ನಡೆಯುತ್ತಿದೆ: ದೇಶವಿರೋಧಿ ಶಕ್ತಿಗಳ ವಿರುದ್ಧ ಜಾಗೃತರಾಗೋಣ - ಎಡಿಕೇರಿ ಪ್ರಸನ್ನ
ಮಡಿಕೇರಿ: ದೇಶದಲ್ಲಿ ದಂಗೆ ಮೂಲಕ ಅರಾಜಕತೆ ಸೃಷ್ಟಿಸಿ ಅಧಿಕಾರ ಪಡೆಯುವ ಸಂಚು ನಡೆಯುತ್ತಿದೆ. ದೇಶ ವಿರೋಧಿ ಸಂಚಿನ ವಿರುದ್ಧ ಜಾಗೃತರಾಗಬೇಕಿದೆ ಎಂದು ಕೊಡಗಿನ ಸಾಮಾಜಿಕ ಕಾರ್ಯಕರ್ತ ಎಡಿಕೇರಿ ಪ್ರಸನ್ನ ಅವರು ಕರೆ ನೀಡಿದ್ದಾರೆ.

ವಿಶ್ವದ ನಾಲ್ಕು ದೇಶಗಳಾದ ಫ್ರಾನ್ಸ್, ಬೆಲ್ಜಿಯಂ, ಸ್ಪೇನ್ ಮತ್ತು ಚಿಲಿ ಕಳೆದೊಂದು ವಾರದಿಂದ ತನ್ನೊಳಗಿನ ಆಂತರಿಕ ದಂಗೆಯಿಂದ ನಲುಗಿಹೋಗಿವೆ. ಇರಾನ್ ವಿಷಯದಲ್ಲಿ ಫ್ರಾನ್ಸ್ ಅಮೆರಿಕದ ಪರವಾಗಿ ನಿಲ್ಲಲಿಲ್ಲ ಮತ್ತು ಅಮೆರಿಕದ ದಾಳಿಯನ್ನು ವಿರೋಧಿಸಿತು, ತದನಂತರ ಅಲ್ಲಿ "ಶಾಲೆಗಳನ್ನು ಸರಿಪಡಿಸುವ" ನೆಪದಲ್ಲಿ ಒಂದು ಚಳುವಳಿ ಆರಂಭವಾಯಿತು ಮತ್ತು ಇಂದು ಇಡೀ ಫ್ರಾನ್ಸ್ ಅಶಾಂತಿಯ ಬೆಂಕಿಯಲ್ಲಿ ಉರಿಯುತ್ತಿದೆ. ಬೆಲ್ಜಿಯಂ ಕೂಡ ಇರಾನ್ ಯುದ್ಧದ ವಿಷಯದಲ್ಲಿ ಅಮೆರಿಕವನ್ನು ವಿರೋಧಿಸಿತು, ಅಲ್ಲಿಯೂ ಶಿಕ್ಷಣ ವ್ಯವಸ್ಥೆಯ ಹೆಸರಿನಲ್ಲಿ ಚಳುವಳಿ ಆರಂಭವಾಗಿ ಇಂದು ಇಡೀ ಬೆಲ್ಜಿಯಂ ಉರಿಯುತ್ತಿದೆ. ವೆನೆಜುವೆಲಾದಲ್ಲಿನ ದಂಗೆಯ ವಿಷಯದಲ್ಲಿ ಚಿಲಿ ಅಮೆರಿಕವನ್ನು ವಿರೋಧಿಸಿತು, ಇಲ್ಲೂ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ನೆಪದಲ್ಲಿ ಚಳುವಳಿ ಆರಂಭವಾಗಿ ಇಂದು ಚಿಲಿಯಾದ್ಯಂತ ಅರಾಜಕತೆ ಹರಡಿದೆ. ಸ್ಪೇನ್ ಕೂಡ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕವನ್ನು ಬೆಂಬಲಿಸಲು ನಿರಾಕರಿಸಿತು, ಇದರ ಪರಿಣಾಮವಾಗಿ ಯುವಜನರ ನೇತೃತ್ವದಲ್ಲಿ ವಸತಿ ಮತ್ತು ಹಾಸ್ಟೆಲ್‌ಗಳ ಬಾಡಿಗೆಯನ್ನು ಕಡಿಮೆ ಮಾಡುವಂತೆ ಒತ್ತಾಯಿಸುವ ಚಳುವಳಿ ಹುಟ್ಟಿಕೊಂಡು ಈಗ ಇಡೀ ಸ್ಪೇನ್ ಈ ಅಶಾಂತಿಯ ಜ್ವಾಲೆಯಲ್ಲಿ ಉರಿಯುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಭಾರತವನ್ನು ಗುರಿಯಾಗಿಸಲಾಗುತ್ತಿದೆ:

ಭಾರತದ ವಿಷಯಕ್ಕೆ ಬಂದರೆ, ಅಮೆರಿಕದ ಷರತ್ತುಗಳ ಮೇರೆಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ, ರಷ್ಯಾದಿಂದ ತೈಲ ಖರೀದಿ ಮೇಲಿನ ನಿಷೇಧವನ್ನು ತಿರಸ್ಕರಿಸಿದೆ, ಅಮೆರಿಕ ಹೇರಿದ ಸುಂಕಗಳು ಯಾವುದೇ ಪರಿಣಾಮ ಬೀರಿಲ್ಲ, ಅಮೆರಿಕದ ಯಾವುದೇ ಒತ್ತಡಕ್ಕೆ ಮಣಿಯಲು ನಿರಾಕರಿಸಿದೆ. ಇದರ ಪರಿಣಾಮವಾಗಿ ಭಾರತದಲ್ಲೂ ಇದೇ ರೀತಿಯ ಬೆಂಕಿಯನ್ನು ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ದಂಗೆ ಮೂಲಕ ಅರಾಜಕತೆ ಸೃಷ್ಟಿಸಿ ಸರ್ಕಾರವನ್ನು ಉರುಳಿಸಲು ಶತಪ್ರಯತ್ನಗಳು ನಡೆಯುತ್ತಿವೆ. ಮೊದಲು ಇದು NEET ಹೆಸರಿನಲ್ಲಿ ನಡೆಯಿತು, ಆದರೆ ಸರ್ಕಾರ ಈ ವಿಷಯವನ್ನು ವಿವೇಚನೆಯಿಂದ ನಿಭಾಯಿಸಿತು. ಈಗ ಬಲವಂತವಾಗಿ ಮತಗಳನ್ನು ಕದಿಯಲಾಗುತ್ತಿದೆ ಎಂದು ಆರೋಪಿಸುವ ಮೂಲಕ ದೇಶವನ್ನು ಅಶಾಂತಿಯ ಬೆಂಕಿಯಲ್ಲಿ ತಳ್ಳಲು ಪ್ರಯತ್ನಗಳು ನಡೆಯುತ್ತಿವೆ. ಇದರ ಹಿಂದಿನ ಮೂಲ ಉದ್ದೇಶ ಒಂದೇ - ಹೇಗಾದರೂ ಮಾಡಿ ಭಾರತವನ್ನು ತಲೆಬಾಗುವಂತೆ ಮಾಡುವುದು ಮತ್ತು ಅದರ ಪ್ರಗತಿಯನ್ನು ತಡೆಯುವುದು ಎಂದು ಅವರು ಹೇಳಿದ್ದಾರೆ.

ದೇಶದೆಲ್ಲೆಡೆ ಅರಾಜಕತೆ ಸೃಷ್ಟಿಸಿ ಜನರನ್ನು ದಂಗೆ ಏಬ್ಬಿಸಿ ಮೋದಿ ಸರ್ಕಾರವನ್ನು ಉರುಳಿಸುವುದೇ ಇವರ ವನ್ ಪಾಯಿಂಟ್ ಪ್ರೋಗ್ರಾಂ ಆಗಿದೆ. ಅದಕ್ಕಾಗಿ ಭಾರತ ವಿರೋಧಿ ದೇಶಗಳು ಮತ್ತು ಭಾರತ ವಿರೋಧಿ ಶಕ್ತಿಗಳು ಭಾರತದ ಅಧಃಪತನಕ್ಕಾಗಿ ಎಲ್ಲ ರೀತಿಯ ಸಹಕಾರವನ್ನು ಹೊರಗಿನಿಂದ ನೀಡುತ್ತಿವೆ. ಯುವಜನರು, ವಿದ್ಯಾರ್ಥಿಗಳ ತಲೆಗೆ ಸುಳ್ಳು ಸುದ್ದಿಗಳನ್ನು ತುಂಬಿ ಪ್ರಚೋದಿಸುವುದು, ಆದಿವಾಸಿಗಳು, ಅನಕ್ಷರಸ್ಥರು, ದೀನದಲಿತರು, ಹಿಂದೂ ವಿರೋಧಿಗಳನ್ನು ಭಾವನಾತ್ಮಕವಾಗಿ ಸೆಳೆದು ಈ ದಂಗೆಗೆ ಪ್ರೇರೇಪಿಸಲಾಗುತ್ತಿದೆ. ಕಮ್ಯುನಿಸ್ಟ್, ಆಪ್ ಹಾಗೂ ಕಾಂಗ್ರೆಸ್ ಮುಂತಾದ ಇಂಡಿ ಮುಖವಾಡಗಳು ಈ ದಂಗೆ ಸಂಚಿನ ಹಿಂದಿನ ನೈಜ ದುಷ್ಟಶಕ್ತಿಗಳಾಗಿವೆ ಎಂದು ಅವರು ಆರೋಪಿಸಿದ್ದಾರೆ.

1975ರಲ್ಲಿ ಅಧಿಕಾರಕ್ಕಾಗಿ ಅಂದಿನ ಪ್ರಧಾನಿ ಬಾಬಾ ಸಾಹೇಬರ ಸಂವಿಧಾನವನ್ನೇ ಧಿಕ್ಕರಿಸಿ ತನಗೆ ಬೇಕಾದ ಹಾಗೆ ಸಂವಿಧಾನ ಬದಲಿಸಿಕೊಂಡು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಕರಾಳ ಇತಿಹಾಸವನ್ನು ನಾವು ಮತ್ತೆ ಮತ್ತೆ ನೆನಪಿಸುವಂತಾಗಿದೆ. ಇಡೀ ವಿಶ್ವದಲ್ಲಿ ಭಾರತವು ಬಲಿಷ್ಠವಾಗುತ್ತಿರುವುದನ್ನು ಸಹಿಸಲಾಗದ ವಿದೇಶಿ ಶಕ್ತಿಗಳು ಹಾಗೂ ಭಾರತದಲ್ಲಿ ಅಧಿಕಾರಕ್ಕೇರುವ ಕನಸಿನ ವಿರೋಧಪಕ್ಷಗಳ ಒಕ್ಕೂಟಗಳು ವಾಮಮಾರ್ಗದ ಮೂಲಕ ಅಧಿಕಾರಕ್ಕೇರಲು ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳಗಳಲ್ಲಿ ದಂಗೆ ನಡೆಸಿ ಅಲ್ಲಿನ ಸರ್ಕಾರಗಳನ್ನು ಉರುಳಿಸಲು ಯಶಸ್ವಿಯಾದಂತೆ ಭಾರತದಲ್ಲೂ ಅದೇ ಪ್ರಯತ್ನಕ್ಕೆ ಕೈಹಾಕಿವೆ. ಈ ಪ್ರಯತ್ನಗಳು ಇನ್ನು ಬಹಳ ಸಮಯದವರೆಗೆ ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

ಇಂತಹ ಷಡ್ಯಂತ್ರಗಳಿಂದ ದೇಶವನ್ನು ರಕ್ಷಿಸಬೇಕಾದ ಜವಾಬ್ದಾರಿ ಈಗ ನಮ್ಮ ನಿಮ್ಮೆಲ್ಲರ ಮೇಲಿದೆ. ದೇಶದ್ರೋಹಿ, ಧರ್ಮದ್ರೋಹಿ, ಸಮಾಜದ್ರೋಹಿಗಳ ಷಡ್ಯಂತ್ರದ ವಿರುದ್ಧ ನಾವು ತೀವ್ರ ತರಹದ ಹೋರಾಟಕ್ಕಿಳಿಯಲೇಬೇಕಾದ ಅನಿವಾರ್ಯತೆ ಇದೆ. ಜಗತ್ತಿನ ಮುಂದೆ ಭಾರತವನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯುತ್ತಿರುವ ಈ ದೇಶದ ಸರ್ವಶ್ರೇಷ್ಠ ನಾಯಕನ ಜೊತೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕಿದೆ ಎಂದು ಎಡಿಕೇರಿ ಪ್ರಸನ್ನ ಅವರು ತಿಳಿಸಿದ್ದಾರೆ.