Kodagu

ಕುಡಿಸಿದ್ರು... ಕೊಂದು ಹೂತುಹಾಕಿದ್ರು;ವೀರಾಜಪೇಟೆಯಲ್ಲಿ ಭೀಕರ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

admincoorgdaily

ಕುಡಿಸಿದ್ರು... ಕೊಂದು ಹೂತುಹಾಕಿದ್ರು;ವೀರಾಜಪೇಟೆಯಲ್ಲಿ ಭೀಕರ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು
ವೀರಾಜಪೇಟೆ: ಸಂಚು ರೂಪಿಸಿ ವ್ಯಕ್ತಿಯನ್ನು ಕೊಲೆ ಮಾಡಿ ಹೂತುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ತೋರೆ ಬಬ್ರಾಡ್ ತೋಟದ ಲೈನ್ ಮನೆಯಲ್ಲಿ ವಾಸವಿರುವ ಸತೀಶ್ ಕೆ.ಜಿ. ಅಲಿಯಾಸ್ ಬೋಪಯ್ಯ, ಕೆದಮುಳ್ಳೂರು ತೋರೆ ಗ್ರಾಮದ ಕೊರ್ತಿಕಾಡ್ ನಿವಾಸಿ ಹೆಚ್.ಬಿ. ರವಿ ಮತ್ತು ಕೆದಮುಳ್ಳೂರು ತೋರೆ ಗ್ರಾಮದ ಕುಪ್ಪಮೊಟ್ಟೆ ನಿವಾಸಿ ಕೆ.ಎಂ. ಪೊನ್ನಪ್ಪ ಅಲಿಯಾಸ್ ಅಪ್ಪಿ ಬಂಧಿತ ಆರೋಪಿಗಳು.

ಕೆದಮುಳ್ಳೂರು ಪಾಲಂಗಾಲ ಗ್ರಾಮದ ನಿವಾಸಿ ಕೆ.ಪಿ. ಪೊನ್ನಪ್ಪ ಅಲಿಯಾಸ್ ವಿನು ಗ್ರಾಮದ ವಿವಿಧ ಕಡೆಗಳಲ್ಲಿ ತೋಟದ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ.

ತಾ. 21-10-2026 ರ ರಾತ್ರಿ ಸೋಮಯ್ಯ ಎಂಬಾತ ವಿನುವಿಗೆ ಕರೆಮಾಡಿ ನಿನ್ನೊಂದಿಗೆ ಮಾತನಾಡಬೇಕು ಬಾ ಎಂದು ತಿಳಿಸುತ್ತಾನೆ. ಸೋಮಯ್ಯ ತನ್ನ ಕಾರಿನಲ್ಲಿ ವಿನುವನ್ನು ಕೂರಿಸಿಕೊಂಡು ಕಡಂಗಕ್ಕೆ ಆಗಮಿಸುತ್ತಾನೆ. ಅಲ್ಲಿ ಸತೀಶ್ ಮತ್ತು ಹೆಚ್.ಬಿ. ರವಿ ಅವರು ಸಂಗಡಿಗರೊಂದಿಗೆ ಕಡಂಗ ಬಾರ್ ವೊಂದರಲ್ಲಿ ವಿಸ್ಕಿ ಸೇವನೆ ಮಾಡುತ್ತಾರೆ.

ಈ ಮೊದಲೇ ಸಂಚು ರೂಪಿಸಿದ್ದಂತೆ ಮದ್ಯದೊಂದಿಗೆ ವಿಷವನ್ನು ಬೆರೆಸಿ ವಿನುವಿಗೆ ನೀಡುತ್ತಾರೆ. ಮದ್ಯ ಸೇವನೆ ಮಾಡಿದ ವಿನು ಅಸ್ವಸ್ಥಗೊಳ್ಳುತ್ತಾನೆ. ಸಂಗಡಿಗರು ವಿನುವಿಗೆ ಮತ್ತೊಮ್ಮೆ ಕುಡಿಸಿ ಆತ ಮೃತನಾದ ಎಂದು ತಿಳಿದಾಗ ಮೃತ ಶರೀರವನ್ನು ಮೂರಿಯೊಂದರಲ್ಲಿರಿಸಿ ತೆರಳುತ್ತಾರೆ.

ಮರುದಿನ ಪೊನ್ನಪ್ಪ ಕೆ.ಎಂ. ಅಲಿಯಾಸ್ ಅಪ್ಪಿ ಸಹಾಯದಿಂದ ಸೋಮಯ್ಯ, ರವಿ ಮತ್ತು ಸತೀಶ್ ನಾಲ್ವರು ಸೇರಿ ಮುದುರೇಮಕ್ಕಿ ಅರಣ್ಯ ಪ್ರದೇಶದಲ್ಲಿ ಶವವನ್ನು ಹೂತುಹಾಕುತ್ತಾರೆ. ತಾ. 21-10-2026 ರ ರಾತ್ರಿ
ತೆರಳಿದ ವಿನು ನಾಪತ್ತೆಯಾಗಿದ್ದಾನೆ ಎಂದು ತಾಯಿ ರೇಣು ಅವರು ತಾ. 26-10-2026 ರಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುತ್ತಾರೆ. ದೂರು ಸ್ವೀಕರಿಸಿದ ಪೊಲೀಸರು ವಿನು ಅವರ ಸಂಗಡಿಗರನ್ನು ಕರೆಹಾಕಿ ತನಿಖೆ ಮುಂದುವರಿಸುತ್ತಾರೆ.

ಈ ಮಧ್ಯೆ ಸೋಮಯ್ಯನಿಗೆ ತನಿಖೆಗೆ ಸಹಕರಿಸಲು ಠಾಣೆಗೆ ಬರಲು ತಿಳಿಸುತ್ತಾರೆ. ಪೊಲೀಸರ ಕರೆಯಿಂದ ಭಯಗೊಂಡ ಸೋಮಯ್ಯ ತಾ. 26 ರಂದು ಮದ್ಯದೊಂದಿಗೆ ವಿಷ ಪ್ರಾಶನ ಮಾಡಿ ಆತ್ಮಹತ್ಯೆಗೆ ಮುಂದಾಗಿ ತಾ. 27 ರಂದು ಮೈಸೂರು ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾನೆ. ಬಳಿಕ ಆತ್ಮಹತ್ಯೆ ಮಾಡಿಕೊಂಡ ಸೋಮಯ್ಯನ ಮೊಬೈಲ್ ಫೋನನ್ನು ತನಿಖೆಗೆ ಒಳಪಡಿಸಿದ ವೇಳೆ ವಿನು ಕೊಲೆಯಾಗಿರುವ ವಿಷಯ ಬೆಳಕಿಗೆ ಬರುತ್ತದೆ.

ತನಿಖೆ ತೀವ್ರಗೊಳಿಸಿದ ಗ್ರಾಮಾಂತರ ಪೊಲೀಸರು ಆರೋಪಿಗಳಾದ ಸತೀಶ್, ರವಿ ಮತ್ತು ಪೊನ್ನಪ್ಪನನ್ನು ಬಂಧಿಸಿ ತನಿಖೆಗೆ ಒಳಪಡಿಸಿದ ವೇಳೆ ವಿನು ಪೊನ್ನಪ್ಪನ ಕೊಲೆಯ ವಿಚಾರ ಬೆಳಕಿಗೆ ಬರುತ್ತದೆ. ಮೃತ ವಿನು ಪೊನ್ನಪ್ಪ ಹಾಗೂ ಆರೋಪಿಗಳ ನಡುವೆ ವಿನು ಪೊನ್ನಪ್ಪಗೆ ಸೇರಿದ ಬಂದೂಕಿಗೆ ಸಂಬಂಧಿಸಿದಂತೆ ಕಲಹವಿತ್ತು. ಇದೇ ವಿಚಾರ ಕೊಲೆಗೆ ಕಾರಣವಾಗಿದೆ. ಬಂಧಿತ ಮೂವರ ವಿರುದ್ಧ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವೀರಾಜಪೇಟೆ ಉಪ ವಿಭಾಗ ಪ್ರಭಾರ ಡಿವೈಎಸ್ಪಿ ಸುರೇಶ್ ಅವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿ.ಎಸ್.ಐ. ಪ್ರಮೋದ್ ಕುಮಾರ್, ಸಿಬ್ಬಂದಿಗಳಾದ ಎ.ಎಸ್.ಐ. ಮೋಹನ್, ಎ.ಎಸ್.ಐ. ರವಿ, ನವೀನ್ ಕುಮಾರ್, ಅಬ್ದುಲ್ ಮಜೀದ್, ಕೆ.ಎ. ಅನೀಶ್, ಎಂ.ಎಸ್. ಬೋಪಣ್ಣ, ಮಹೇಶ್ ಎಸ್. ಪರಮೇಶ್ ಮತ್ತು ತೇಜಸ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 ಟಿ.ಜೆ. ಕಿಶೋರ್ ಕುಮಾರ್ ಶೆಟ್ಟಿ