ಸೋಮವಾರಪೇಟೆಯಲ್ಲಿ ಕಳ್ಳರ ರಾಜ್ಯಭಾರ: ಎಟಿಎಂಗೂ ಕನ್ನ, ಮನೆಗೂ ಕನ್ನ!
admincoorgdaily

ಸೋಮವಾರಪೇಟೆ; ಸೋಮವಾರಪೇಟೆಯಲ್ಲಿ ಸರಣಿ ಕಳ್ಳತನ ನಡೆಸಿರುವ ಖದೀಮರ ಪತ್ತೆಗೆ ಪೊಲೀಸರು ಸಿಸಿ ಕ್ಯಾಮೆರಾ ಮೊರೆ ಹೋಗಿದ್ದಾರೆ. ಆದ್ರೆ ಕಳ್ಳರು ಮುಸುಕುಧಾರಿಗಳಾಗಿರುವುದೇ ತನಿಖೆಗೆ ದೊಡ್ಡ ಹಿನ್ನಡೆಯಾಗಿದೆ.
ಪಟ್ಟಣದ ಎಂ.ಜಿ. ರಸ್ತೆಯ ಎಸ್‌ಬಿಐ ಎಟಿಎಂನಲ್ಲಿ ತಾ. 4ರ ರಾತ್ರಿ 2.05ಕ್ಕೆ ನಡೆದ ದರೋಡೆ ಯತ್ನದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಬಂದು, ಕಬ್ಬಿಣದ ಸಲಾಕೆಯಿಂದ ಎಟಿಎಂ ಒಡೆಯುವ ದೃಶ್ಯ ಕಂಡುಬಂದರೂ, ಇಬ್ಬರೂ ಮುಖಕ್ಕೆ ಮುಸುಕು ಹಾಕಿಕೊಂಡಿದ್ದರಿಂದ ಗುರುತು ಪತ್ತೆ ಸಾಧ್ಯವಾಗಿಲ್ಲ.
ಇದೇ ರೀತಿ ಬಾಣಾವರ ರಸ್ತೆಯಲ್ಲಿ ನಡೆದ ಮನೆ ಕಳ್ಳತನದಲ್ಲೂ ಕಳ್ಳರು ಬಹಳ ಚಾಣಾಕ್ಷತನ ತೋರಿದ್ದಾರೆ. ಯತೀಶ್ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ನುಗ್ಗಿರುವ ಗ್ಯಾಂಗ್, ಕೇವಲ ಚಿನ್ನ, ಬೆಳ್ಳಿಗೆ ಕೈ ಹಾಕದೆ, ದೇವರ ಬೆಳ್ಳಿ ವಿಗ್ರಹಗಳು (ಗಣಪತಿ, ಸರಸ್ವತಿ, ಲಕ್ಷ್ಮಿ - ತಲಾ 50 ಗ್ರಾಂ), ಬೆಳ್ಳಿ ದೀಪ, ಕಾಲು ಚೈನ್, 20 ಸಾವಿರ ನಗದು ಜೊತೆಗೆ ಅಡುಗೆ ಮನೆಯ ಗ್ಯಾಸ್ ಸಿಲಿಂಡರ್‌ವನ್ನೂ ಬಿಟ್ಟಿಲ್ಲ. ಒಟ್ಟು 65 ಸಾವಿರ ರೂ. ಮೌಲ್ಯದ ವಸ್ತು ಕಳವಾಗಿದೆ.
ಒಂದೇ ಗ್ಯಾಂಗ್‌ನ ಕೈವಾಡ?
ಎರಡೂ ಕಡೆ ಕಳ್ಳತನ ಮಾಡಿರುವುದು ಒಂದೇ ಸಂಘಟಿತ ಗ್ಯಾಂಗ್ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಅಪರಾಧ ಪ್ರಕರಣ ಭೇದಿಸಿದ್ದ ಚಾಣಾಕ್ಷ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ.
ಸದ್ಯ ಪಟ್ಟಣದಾದ್ಯಂತ ಇರುವ ಎಲ್ಲಾ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಕಳ್ಳರು ಬಳಸಿದ ಕಾರಿನ ನಂಬರ್ ಪತ್ತೆಗಾಗಿ ಬಲೆ ಬೀಸಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.