ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರದಲ್ಲಿ ಪಾಲಿಲ್ಲ: ಸುನ್ನಿ ಮಹಲ್‌ಗಳ ಒಕ್ಕೂಟ ಬೇಸರ
admincoorgdaily

ಮಡಿಕೇರಿ: ನಾವು ಕಾಂಗ್ರೆಸ್ ಪಕ್ಷಕ್ಕಾಗಿ ವರ್ಷಗಟ್ಟಲೆ ದುಡಿದಿದ್ದೇವೆ. ಸ್ವಂತ ಖರ್ಚಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಪ್ರಚಾರ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಕಡೆ ಯಾರೂ ತಿರುಗಿ ನೋಡಿಲ್ಲ ಎಂದು ಸುನ್ನಿ ಮಹಲ್‌ಗಳ ಒಕ್ಕೂಟದ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಸಿ.ಎಂ.ಹಮೀದ್ ಮೌಲವಿ ಬೇಸರ ವ್ಯಕ್ತಪಡಿಸಿದ್ದಾರೆ.
೪೦ ವರ್ಷದಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಕೆ.ಎ.ಯಾಕುಬ್ ಅವರಿಗೆ ಇವತ್ತಿಗೂ ಸ್ವಂತ ಮನೆಯಿಲ್ಲ, ನಿವೇಶನವಿಲ್ಲ, ರಾಜ್ಯಮಟ್ಟದ ಸ್ಥಾನಮಾನವೂ ಇಲ್ಲ. ಇದು ನಮಗೆಲ್ಲರಿಗೂ ನೋವು ತಂದಿದೆ. ಚುನಾವಣೆಗೂ ಮುನ್ನ ನಮಗೆ ಎಲ್ಲಾ ಸ್ಥಾನಮಾನ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಈಗ ಅಡುಗೆ ಮಾಡಲು, ಬಡಿಸಲು ನಾವು ಬೇಕು, ಆದರೆ ಊಟಕ್ಕೆ ನಾವು ಬೇಡ ಎಂಬಂತಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಗೆಲ್ಲುವ ಜಿ.ಪಂ ಕ್ಷೇತ್ರಗಳಲ್ಲೂ ನಮಗೆ ಅವಕಾಶ ತಪ್ಪಿಸಲಾಗಿದೆ. ನಾವು ಇನ್ನೂ ಕೇಳುವುದು ಒಂದೇ-ನಮ್ಮ ಸಂವಿಧಾನಬದ್ಧ ಹಕ್ಕು, ಜಿ.ಪಂನ ಆರು ಕ್ಷೇತ್ರ ಸೇರಿ ಪಂಚಾಯಿತಿಗಳಲ್ಲಿ ಸೂಕ್ತ ಪಾಲು ಕೊಡಿ. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ನೋಟಾಗೆ ಮತ ಹಾಕಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸುನ್ನಿ ಮಹಲ್‌ಗಳ ಒಕ್ಕೂಟದ ಉಪಾಧ್ಯಕ್ಷ ಉಮ್ಮರ್ ಫೈಜ್ಹಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ.ಅಬ್ದುಲ್ ಕರೀಂ, ಪ್ರಮುಖರಾದ ರಫೀಕ್, ಶಮೀರ್ ಇದ್ದರು.