Kodagu

ಬೆಳ್ಳೂರಿನಲ್ಲಿ ಹುಲಿ ದಾಳಿ: ಇಟ್ಟೀರ ಪೊನ್ನಣ್ಣ ಅವರ 13ನೇ ಹಸು ಬಲಿ

admincoorgdaily

ಬೆಳ್ಳೂರಿನಲ್ಲಿ ಹುಲಿ ದಾಳಿ: ಇಟ್ಟೀರ ಪೊನ್ನಣ್ಣ ಅವರ 13ನೇ ಹಸು ಬಲಿ
ಪೊನ್ನಂಪೇಟೆ, ಅ.23: ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ಇಟ್ಟೀರ ಪೊನ್ನಣ್ಣ ಅವರಿಗೆ ಸೇರಿದ ಹಸುವಿನ ಮೇಲೆ ಗುರುವಾರ ಹುಲಿ ದಾಳಿ ನಡೆಸಿ ಕೊಂದು ಹಾಕಿದ್ದು, ಹಸುವಿನ ಅರ್ಧಭಾಗವನ್ನು ತಿಂದು ಹಾಕಿದೆ. ಇದು ಹುಲಿ ದಾಳಿಗೆ ಬಲಿಯಾದ ಪೊನ್ನಣ್ಣ ಅವರ ಸತತ 13ನೇ ಹಸುವಾಗಿದ್ದು, ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಗ್ರಾಮದಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಯುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ರೈತರು ಹಾಗೂ ಜಾನುವಾರು ಸಾಕಣೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುಲಿ ದಾಳಿಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ರೈತ ಸಂಘದ ಪದಾಧಿಕಾರಿಗಳು ಹಸುವಿನ ಕಳೇಬರವನ್ನು ಜೀಪಿನಲ್ಲಿ ಇರಿಸಿ ಬೆಳ್ಳೂರಿನ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು.

ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಭೇಟಿ ನೀಡಿ, ಹುಲಿಯ ಉಪಟಳಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಹುಲಿಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಡಿಎಫ್‌ಒ ವಿನುತಾ ಚೌವ್ಹಾಣ್ ಅವರ ವರ್ತನೆ ಹಾಗೂ ಪ್ರತಿಭಟನಾಕಾರರೊಂದಿಗೆ ನಡೆದುಕೊಂಡ ರೀತಿಯಿಂದ ಅಸಮಾಧಾನಗೊಂಡ ರೈತರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಿಎಫ್‌ಒ ಅವರ ವಾಹನವನ್ನು ತಡೆದು ಪ್ರತಿಭಟನೆ ನಡೆಸಲಾಯಿತು. ರೈತ ಸಂಘದ ಮುಖಂಡರು ಹಾಗೂ ಪ್ರತಿಭಟನಾಕಾರರೊಂದಿಗೆ ಅಧಿಕಾರಿ ಉಡಾಫೆಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅರಣ್ಯ ಇಲಾಖೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರು, ರೈತ ಸಂಘದ ಮುಖಂಡರು ಸೇರಿದಂತೆ ಸ್ಥಳೀಯರು ಪಾಲ್ಗೊಂಡಿದ್ದರು.ಈ ಸಂದರ್ಭ ಡಿಎಫ್ಒ ವಿನುತಾ ಚೌವ್ಹಾಣ್, ಎಸಿಎಫ್ ಅಭಿಲಾಷ್ ಸಿಬ್ಬಂದಿಗಳು ಇದ್ದರು.