Kodagu

ಸುಳುಗೋಡು ಗ್ರಾಮದಲ್ಲಿ ಹುಲಿ ದಾಳಿ: ಕರು ಬಲಿ

admincoorgdaily

ಸುಳುಗೋಡು ಗ್ರಾಮದಲ್ಲಿ  ಹುಲಿ ದಾಳಿ: ಕರು ಬಲಿ
ಪೊನ್ನಂಪೇಟೆ, : ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರೆದಿದ್ದು, ಪೊನ್ನಂಪೇಟೆ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ರೈತರೊಬ್ಬರ ಕರು ಹುಲಿ ದಾಳಿಗೆ ಬಲಿಯಾಗಿದೆ.
ಸುಳುಗೋಡು ಗ್ರಾಮದ ನಿರ್ಮಲ ಮಧು ಎಂಬುವರಿಗೆ ಸೇರಿದ ಕರುವನ್ನು  ಹುಲಿ ಕೊಂದು ಹಾಕಿದೆ.

ತಾ .5ರಂದು ಸಂಜೆ ಸುಮಾರು 4 ಗಂಟೆ ವೇಳೆ ಸುಳುಗೋಡು ಕಾಡಂಚಿನ ಟ್ರೆಂಚ್‌ನ ಸಮೀಪದ ಗದ್ದೆಯಲ್ಲಿ ಮೇಯುತ್ತಿದ್ದ ಕರುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ನಂತರ ಕರುವನ್ನು ಎಳೆದುಕೊಂಡು ಕಾಡಿಗೆ ತೆರಳಲು ಟ್ರೆಂಚ್ ದಾಟುವಾಗ ಕರು ಟ್ರೆಂಚ್‌ಗೆ ಬಿದ್ದಿದೆ. ಆ ಸಂದರ್ಭದಲ್ಲಿ ಸ್ಥಳದಲ್ಲಿ ಜನರ ಗದ್ದಲ ಕೇಳಿಬಂದ ಹಿನ್ನೆಲೆಯಲ್ಲಿ ಹುಲಿಯು ಟ್ರೆಂಚ್ ದಾಟಿ ಕಾಡಂಚಿನ ಪೊದೆಯ ಬಳಿ ಸ್ವಲ್ಪ ಹೊತ್ತು ಕುಳಿತು ಕಾದು ನಂತರ ಕಾಡಿಗೆ ತೆರಳಿದೆ ಎನ್ನಲಾಗಿದೆ.
ಹುಲಿ ಪೊದೆಯಲ್ಲಿ ಕುಳಿತಿದ್ದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಈ ಬಗ್ಗೆ ಮಾತನಾಡಿದ ಆರ್‌ಎಫ್‌ಒ ಗಂಗಾಧರ್ ಅವರು, ಸದ್ಯ ಹುಲಿ ಕಾಡಿಗೆ ತೆರಳಿದ್ದು, ಹುಲಿಯ ಚಲನವಲನ ಪತ್ತೆಗಾಗಿ ಘಟನಾ ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಹುಲಿಯ ಗುರುತು ಪತ್ತೆಯಾದ ನಂತರ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹುಲಿ ದಾಳಿಯಿಂದ ಕರು ಕಳೆದುಕೊಂಡ ರೈತರಿಗೆ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಈ ಘಟನೆಯಿಂದ ಸುಳುಗೋಡು ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆಮಾಡಿದ್ದು, ಹುಲಿಯನ್ನು ಸೆರೆ ಹಿಡಿದು ಆತಂಕ ನಿವಾರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಆರ್‌ಎಫ್‌ಒಗಳಾದ ರಕ್ಷಿತ್, ಸೋಮೇಂದ್ರ, ಬೀಟ್ ಗಾರ್ಡ್ ದಿನೇಶ್, ಎಸ್‌ಟಿಪಿಎಫ್ ಗಾರ್ಡ್ ಹನುಮಂತಪ್ಪ, ಸುಳುಗೋಡು ಕ್ಯಾಂಪ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.