ಚೆಯ್ಯಂಡಾಣೆ ಹಸುವಿನ ಮೇಲೆ ಹುಲಿ ದಾಳಿ ಪ್ರಕರಣ;ಡಿ.2ರಂದು ಚೆಯ್ಯಂಡಾಣೆಯಲ್ಲಿ ಕುಂದುಕೊರತೆ ಸಭೆಗೆ ನಿರ್ಧಾರ
admincoorgdaily

ನಾಪೋಕ್ಲು :ನರಿಯಂದಡ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಗ್ರಾಮಸ್ಥರು, ಹುಲಿದಾಳಿಯಿಂದ ಮೃತಪಟ್ಟ ಹಸುವಿನ ಕಳೆಬರವನ್ನು ವಿರಾಜಪೇಟೆಯ ಅರಣ್ಯ ಇಲಾಖೆಯ ಕಚೇರಿಗೆ ಸಾಗಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.
ನ.15ರ ಬೆಳಗ್ಗಿನಿಂದಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ರಾತ್ರಿ ಕಳೆದರೂ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನಲೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯ ನಿರ್ಧಾರವನ್ನು ಕೈಬಿಟ್ಟರು.
:ಆರ್‌ಎಫ್‌ಒ ಹಾಗೂ ಎಸಿಎಫ್ ಭೇಟಿ
ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯ ಆರ್‌ಎಫ್‌ಒ ಶಿವರಾಂ ಹಾಗೂ ಎಸಿಎಫ್ ತಹಸಿನ್ ಭಾನು ಅವರು ಹುಲಿ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಡಿಎಫ್‌ಒ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು.
ಗ್ರಾಮಸ್ಥರಾದ ಪೊಕ್ಕುಳಂಡ್ರ ದನೋಜ್ (ದಿವ್ಯ), ತೊಟಂಬೈಲು ಅನಂತ್ ಕುಮಾರ್ ಹಾಗೂ ಮಕ್ಕಿಮನೆ ಸುಧೀರ್ ಮಾತನಾಡಿ, ಸ್ಥಳದಲ್ಲಿಯೇ ಪರಿಹಾರ ನೀಡಬೇಕು, ಡಿಎಫ್‌ಒ ಸ್ಥಳಕ್ಕೆ ಭೇಟಿ ನೀಡಬೇಕು ಹಾಗೂ ಉಡಾಫೆಯ ಉತ್ತರ ನೀಡಿದ ಅಧಿಕಾರಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ನಂತರ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ, ಹಸುವಿನ ಮಾಲೀಕರಿಂದ ಅಗತ್ಯ ದಾಖಲೆಗಳನ್ನು ಸ್ಥಳದಲ್ಲಿಯೇ ಪಡೆದುಕೊಂಡರು. 15 ದಿನಗಳೊಳಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
:ಡಿಸೆಂಬರ್ 2ರಂದು ಕುಂದುಕೊರತೆ ಸಭೆ
ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಡಿ.2ರಂದು ಚೆಯ್ಯಂಡಾಣೆಯಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಕುಂದುಕೊರತೆ ಸಭೆ ನಡೆಸಲು ತೀರ್ಮಾನಿಸಲಾಯಿತು.
ಅಲ್ಲದೆ, ಹುಲಿಯ ಚಲನವಲನ ಪತ್ತೆಹಚ್ಚಲು ದಾಳಿ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ವಹಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸಂದರ್ಭ ಡಿಆರ್ ಎಫ್ ಓ ಶ್ರೀನಿವಾಸ್,
ಇಟಿಎಫ್ ಡಿಆರ್ ಎಫ್ಒ ಪ್ರಶಾಂತ್,ಗಾರ್ಡ್ ನಂದೀಶ್, ಕ್ಯಾಂಪ್ ಸಿಬ್ಬಂದಿಗಳು,ಆರ್ ಆರ್ ಟಿ ಸಿಬ್ಬಂದಿಗಳು ಇಟಿ ಎಫ್ ಸಿಬ್ಬಂದಿಗಳು ಹಾಗೂ
ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು. ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.
ವರದಿ :ಝಕರಿಯ ನಾಪೋಕ್ಲು