ತೊರೆನೂರು ಭಾಗದಲ್ಲಿ ಹುಲಿ ಶಂಕೆ: ರೈತರು ಭೀತಿ: ಅರಣ್ಯ ಇಲಾಖೆ ವತಿಯಿಂದ ಕಾರ್ಯಾಚರಣೆ
admincoorgdaily

ಕುಶಾಲನಗರ, ಅ.9: ಉತ್ತರ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದ ಹಾರಂಗಿ ನೀರಾವರಿ ಪ್ರದೇಶದ ಚಿಕ್ಕನಾಯಕನಹೊಸಳ್ಳಿ ಭಾಗದ ರೈತರ ಜಮೀನಿಗೆ ಅರಣ್ಯದಿಂದ ತಪ್ಪಿಸಿಕೊಂಡು ಬಂದಿದೆ ಎನ್ನಲಾದ ಗಂಡು ಹುಲಿಯೊಂದು
ಆಗಮಿಸಿದ್ದು, ಕೃಷಿಹೊಲದಲ್ಲಿ ಬೀಡುಬಿಟ್ಟಿದೆ ಎಂಬ ಶಂಕೆಯಿದೆ ಎಂದು ರೈತರು ತಿಳಿಸಿದ್ದಾರೆ.
ಹುಲಿಯು ರೈತರ ಹೊಲದಲ್ಲಿ ಇದೆ ಎಂಬ ಆತಂಕದಿಂದ ಚಿಕ್ಕನಾಯಕನ ಹೊಸಳ್ಳಿ ಭಾಗದ ರೈತರು ಭೀತಿಗೊಂಡಿದ್ದಾರೆ.
ತೊರೆನೂರು ಕಂದಾಯ ಗ್ರಾಮದ ತೊರೆನೂರು ವಿರಕ್ತ ಮಠ, ಸರ್ಕಾರಿ ಪ್ರೌಢಶಾಲೆಯ ಸಮೀಪದ ಬನ, ಕೊಲ್ಲಿ ಪ್ರದೇಶ ಹಾಗೂ ಚಿಕ್ಕನಾಯಕನಹೊಸಳ್ಳಿ ವ್ಯಾಪ್ತಿಯ ರೈತರ ಜಮೀನಿಗೆ ಅಂದಾಜು 15 ವರ್ಷ ಪ್ರಾಯದ
ಗಂಡು ಹುಲಿಯು ದಾಳಿಯಿಟ್ಟಿದ್ದು, ಹುಲಿ ಹೆಜ್ಜೆ ಗುರುತುಗಳು ಇದನ್ನು ದೃಢಪಡಿಸಿವೆ.
ಕಳೆದ 5-6 ದಿನಗಳಿಂದ ಈ ಪ್ರದೇಶದಲ್ಲಿ
ಹುಲಿ ಸಂಚರಿಸಿರುವುದಾಗಿ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಅರಣ್ಯ ಇಲಾಖೆಯ ಸೋಮವಾರಪೇಟೆ ವಲಯದ ಆರ್.ಎಫ್.ಓ. ಮಲ್ಲೇಶ್ , ಹುಲಿಯ ಕಾರ್ಯಚರಣೆಗೆ
ತಮ್ಮ ಇಲಾಖೆಯ ರ್ಯಾಪಿಡ್ ತಂಡವನ್ನು ಸ್ಥಳಕ್ಕೆ ಕಳಿಸಿದ್ದು, ಈ ಡಿಆರ್ ಎಫ್ ಓ ರೇಣುಕುಮಾರ್
ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ಈ ಭಾಗದಲ್ಲಿ ಹುಲಿ ಸಂಚರಿಸಿದೆ ಎನ್ನಲಾದ ಹಿನ್ನೆಲೆಯಲ್ಲಿ ಹುಲಿ ಪತ್ತೆಗೆ ಅರಣ್ಯ ಇಲಾಖೆಯು ಗಸ್ತು ನಡೆಸಲಾಗುತ್ತಿದೆ ಎಂದು ಮಡಿಕೇರಿ ವಿಭಾಗದ ಡಿಸಿಎಫ್ ಅಭಿಷೇಕ್ ತಿಳಿಸಿದ್ದಾರೆ.
ಈ ಭಾಗದಲ್ಲಿ ರೈತರು ಭತ್ತದ ಕೃಷಿ ಜತೆಗೆ ಶುಂಠಿ, ಕೆಸವಿನ ಗೆಡ್ಡೆ, ಅಡಿಕೆ, ಬಾಳೆ, ಮೆಕ್ಕೆಜೋಳ ಇತ್ಯಾದಿ ಬೆಳೆ ಕೈಗೊಂಡಿದ್ದು, ಹುಲಿಯ ಭಯದಿಂದ ರೈತರು ತಮ್ಮ ಜಮೀನಿಗೆ ನೀರು ಹಾಯಿಸಲು ಮತ್ತು ಕೃಷಿಕಾರ್ಯಕ್ಕೆ ತೆರಳಲು ಭೀತಿಗೊಂಡಿದ್ದಾರೆ ಎಂದು ತೊರೆನೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಕೆ.ವಸಂತ ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಇಲಾಖೆಯ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ರಾತ್ರಿ ವೇಳೆ ಕೂಡ ಗಸ್ತು ನಡೆಸಲಾಗುತ್ತಿದೆ. ಆದರೆ, ಹುಲಿ ಮಾತ್ರ ಈತನಕ ಪ್ರತ್ಯಕ್ಷವಾಗಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಗುರುವಾರ ಸಂಜೆ ಚಿಕ್ಕನಾಯಕನಹೊಸಹಳ್ಳಿ ಬಳಿ
ಹುಲಿ ಸಂಚಾರ ಪತ್ತೆಹಚ್ಚಲು 4 ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ನಾಗರಹೊಳೆ ಅಭಯಾರಣ್ಯದಿಂದ ತಪ್ಪಿಸಿಕೊಂಡು ಬಂದಿರಬಹುದು ಎಂದು ಶಂಕಿಸಲಾಗಿರುವ ಈ ಒಂಟಿ ಗಂಡು ಹುಲಿಯು ರೈತರ ಕೃಷಿತೋಟದೊಳಗೆ ಅಥವಾ ಹುಲುಸಾಗಿ ಬೆಳೆದಿರುವ ಕೃಷಿಫಸಲಿನ ಹೊಲದಲ್ಲಿ ಅಡಗಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಒಂದು ವೇಳೆ ಹುಲಿಯು ಈ ಸ್ಥಳದಿಂದ ಬೇರೆಕಡೆಗೆ ಸ್ಥಳಾಂತರಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯ ಅರಣ್ಯ ಸೇರಿದಂತೆ, ಹೆಬ್ಬಾಲೆ, ಹಳೇಕೋಟೆ, ಚಿನ್ನೇನಹಳ್ಳಿ, ತೊರೆನೂರು ಹಾಗೂ ಚಿಕ್ಕನಾಯಕನಹೊಸಳ್ಳಿ ಪ್ರದೇಶ ಹಾಗೂ ನೆರೆಯ ಅರಕಲಗೂಡು ತಾಲ್ಲೂಕಿನ ಅರಗಲ್ಲು ಎಂಬ ಪ್ರದೇಶದ ಕೃಷಿ ಪ್ರದೇಶ ಅಥವಾ ಸಣ್ಣ ಕುರಚಲು ಕಾಡಿನಲ್ಲಿ ಈ ಹುಲಿಯು ಅಡಗಿರಬಹುದು ಇಲ್ಲವೇ ಈ ಪ್ರದೇಶದಿಂದ ತನ್ನ ಆವಾಸ ಸ್ಥಾನದ ಕಡೆ ತೆರಳಿರಬಹುದು ಎಂದು ಹೇಳಿದ್ದರೂ, ಈ ಬಗ್ಗೆ ಯಾರೂ ಖಚಿತಪಡಿಸಿರುವುದಿಲ್ಲ.
ರೈತರ ಜಮೀನಿನಲ್ಲಿ ಒಂದು ವೇಳೆ ಹುಲಿ ಅಡಗಿದ್ದರೆ ತಕ್ಷಣದಲ್ಲಿ ಅದನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಬೇಕು ಎಂದು ಚಿಕ್ಕನಾಯಕನಹೊಸಳ್ಳಿಯ ರೈತರಾದ ಶೇಷಾಚಲ ಮತ್ತು ಟಿ.ಎಂ.ಸುರೇಶ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.