Kodagu

ತೋಕ್ ಸಂಸ್ಕೃತಿ ನಮ್ಮ ಹೆಮ್ಮೆಯ ಪ್ರತೀಕ: ಶಾಸಕ ಎ.ಎಸ್.ಪೊನ್ನಣ್ಣ

admincoorgdaily

ತೋಕ್ ಸಂಸ್ಕೃತಿ ನಮ್ಮ ಹೆಮ್ಮೆಯ ಪ್ರತೀಕ: ಶಾಸಕ ಎ.ಎಸ್.ಪೊನ್ನಣ್ಣ
ಪೊನ್ನಂಪೇಟೆ:ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಇಂದು ಪೊನ್ನಂಪೇಟೆ ಭಾಗಕ್ಕೆ ಭೇಟಿ ನೀಡಿದರು.

ಪೊನ್ನಂಪೇಟೆಯ ಕೆಪಿಎಸ್ ಶಾಲಾ ಮೈದಾನದಲ್ಲಿ ಆಲೆಮಾಡ ಕುಟುಂಬದವರು ಆಯೋಜಿಸಿದ್ದ ತೋಕ್ ನಮ್ಮೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊಡಗಿನ ಜನತೆ ಅದರಲ್ಲೂ ವಿಶೇಷವಾಗಿ ಕೊಡವ ಜನಾಂಗದವರು ಬಂದೂಕಿನೊಂದಿಗೆ ಪುರಾತನ ಕಾಲದಿಂದಲೂ ಅನ್ನೋನ್ಯ ಸಂಬಂಧ ಇರಿಸಿಕೊಂಡು ಬಂದಿದ್ದಾರೆ. ಇದು ನಮ್ಮ ಜೀವನದ ಅವಿಭಾಜ್ಯ ಅಂಗ. ತೋಕ್ ಸಂಸ್ಕೃತಿ ನಮ್ಮ ಹೆಮ್ಮೆಯ ಪ್ರತೀಕ. ಇಂತಹ ಗೌರವದ ಸಂಗತಿಯನ್ನು ಹಬ್ಬದ ರೀತಿಯಲ್ಲಿ ಆಚರಿಸಿ, ನಮ್ಮ ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರೊಂದಿಗೆ ತೋಕ್ ಬಳಸುವುದರ ಮಹತ್ವವನ್ನು ಸಾರುವುದು ಮುಖ್ಯ. ಈ ಪಂದ್ಯಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭವಾಗಲಿ ಎಂದರು.

ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ನೆನಪಿಸಿದರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಆಲೆಮಾಡ ಎಸ್.ಪೂವಯ್ಯ, ತೋಕ್ ನಮ್ಮೆ ಅಧ್ಯಕ್ಷ ಆಲೆಮಾಡ ಸೋಮಣ್ಣ, ಕುಟುಂಬದ ಅಧ್ಯಕ್ಷ ದೇವಯ್ಯ, ಉಪಾಧ್ಯಕ್ಷ ಸುಧೀರ್, ಕಾರ್ಯದರ್ಶಿ ಬೋಪಣ್ಣ, ಖಜಾಂಚಿ ತಿಮ್ಮಯ್ಯ ಹಾಗೂ ಆಲೆಮಾಡ ಕುಟುಂಬದ ಸರ್ವ ಸದಸ್ಯರು ಉಪಸ್ಥಿತರಿದ್ದರು.