Kodagu

ತೊರೆನೂರು : ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು, ಯುವಜನರು ಪಾಲ್ಗೊಳ್ಳುವಿಕೆ ವಿಚಾರ ಸಂಕಿರಣ

admincoorgdaily

ತೊರೆನೂರು : ಸಹಕಾರ ಸಪ್ತಾಹದ ಅಂಗವಾಗಿ  ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು, ಯುವಜನರು ಪಾಲ್ಗೊಳ್ಳುವಿಕೆ ವಿಚಾರ ಸಂಕಿರಣ
ಕುಶಾಲನಗರ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು,ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಸಹಕಾರ ಇಲಾಖೆ ಹಾಗೂ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ತೊರೆನೂರು ರೈತ ಸಮುದಾಯ ಭವನದಲ್ಲಿ ಗುರುವಾರ  73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಮಹಿಳೆಯರು, ಯುವಜನರು ಮತ್ತು ಸಮಾಜದ ಅಬಲ ವರ್ಗಗಳು ಸಹಕಾರ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿಕೆ ದಿನಾಚರಣೆಯನ್ನು ಅರ್ಥಪೂರ್ಣ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಮಾತನಾಡಿ,

ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು, ಯುವಜನರು ಮತ್ತು ಸಮಾಜದ ಅಬಲ ವರ್ಗಗಳು ಪಾಲ್ಗೊಳ್ಳಬೇಕು.ಸಹಕಾರಿ ಚಳವಳಿಯಲ್ಲಿ ಮಹಿಳೆಯರು ಮತ್ತು ಯುವಜನಾಂಗದ ಭಾಗವಹಿಸುವಿಕೆಯು ಅವರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ನಾಂದಿಯಾಗಿದೆ ಎಂದರು.

ಸಹಕಾರಿ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುವುದರಿಂದ, ಅವರಲ್ಲಿ ನಾಯಕತ್ವ ಬೆಳವಣಿಗೆ ಜತೆಗೆ ಅವರ ಧ್ವನಿಗೆ ಮಹತ್ವ ದೊರೆತಿದೆ.ಹಾಗೆಯೇ, ಯುವಜನರ ಹೊಸ ಆಲೋಚನೆಗಳು ಮತ್ತು ತಂತ್ರಜ್ಞಾನದ ಜ್ಞಾನವು ಸಹಕಾರ ಕ್ಷೇತ್ರಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಎಂದು ಹೇಳಿದರು.

ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ,
ಕೃಷಿ ಸಾಲ, ಸ್ವಸಹಾಯ ಗುಂಪುಗಳ ಸಬಲೀಕರಣ ಮತ್ತು ಗ್ರಾಮೀಣ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.

ಸಹಕಾರ ಕ್ಷೇತ್ರದ ಸಾಧನೆ, ಪ್ರಗತಿ, ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಸಾರ್ವಜನಿಕರು, ಸಹಕಾರಿಗಳು ಹಾಗೂ ಸರ್ಕಾರಕ್ಕೆ ಅರಿವು ಮೂಡಿಸುವುದು ಸಹಕಾರ ಸಪ್ತಾಹದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಮಡಿಕೇರಿ ಕೆಐಸಿಎಂ ನಿವೃತ್ತ ಪ್ರಾಂಶುಪಾಲೆ ಎಂ.ಎಂ.ಶ್ಯಾಮಲ ,ಸಹಕಾರ ಸಪ್ತಾಹ ಹಾಗೂ ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು, ಯುವಜನರು ಮತ್ತು ಸಮಾಜದ ಅಬಲ ವರ್ಗಗಳು ಪಾಲ್ಗೊಳ್ಳುವಿಕೆ ಕುರಿತು ಮಾತನಾಡಿ,ಇಂದು ಸಹಕಾರ ಕ್ಷೇತ್ರವು ವಿಶಾಲ ಬೆಳೆದಿದೆ.ಇದು ಜನರ ಜನಜೀವನದಲ್ಲಿ ಹಾಸುಹೊಕ್ಕಾಗಿದ್ದು, ಜನರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ. ಸಹಕಾರ ಕ್ಷೇತ್ರದಲ್ಲಿ ದುಡಿಯುವವರಿಗೆ ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿ ಕುರಿತು ಜಾಗೃತಿ ಮೂಡಿಸಲು ಸಹಕಾರಿ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಹಕಾರ ಕ್ಷೇತ್ರಕ್ಕೆ ಹೆಚ್ಚು ಜನರು
ಬಂದು ದೇಶದ ಸಹಕಾರಿ ಕ್ಷೇತ್ರವನ್ನು ಸಬಲೀಕರಣಗೊಳಿಸಲು ಶ್ರಮಿಸಬೇಕು ಎಂದರು.

ನಮ್ಮ ದೇಶದ ಸಹಕಾರ ಚಳವಳಿಯು ಬೃಹತ್ತಾಗಿ ಬೆಳೆದಿದ್ದು, ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗಿದೆ ಎಂದು ಬಣ್ಣಿಸಿದರು.

ಈ ಸಂದರ್ಭ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಉಪಾಧ್ಯಕ್ಷ ಹೆಚ್.ಕೆ.ಮಾದಪ್ಪ,ನಿರ್ದೇಶಕರಾದ ಕೆ.ಟಿ.ಪರಮೇಶ್,ವಿ.ಸಿ.ಅಮೃತ್,ಎಸ್.ಆರ್.ಸುನೀಲ್ ರಾವ್,ಎಂ.ಟಿ.ಸುಬ್ಬಯ್ಯ,ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕಿ ಜಲಜಾಶೇಖರ್,ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ರವಿ,ತೊರೆನೂರು ಹಾಲು ಉತ್ಪಾದಕರ ಸಂಘದ ಟಿ.ಟಿ.ಪ್ರಕಾಶ್,ನೀರು ಬಳಕೆದಾರರ ಸಂಘದ ಅಧ್ಯಕ್ಷ ಟಿ.ಕೆ.ಪಾಂಡುರಂಗ,ಸಿದ್ದಲಿಂಗಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಎಂ.ಸಿ.ಲಲಿತಾ,ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಗೌರಮಣಿ,ನಿರ್ದೇಶಕರಾದ ಹೆಚ್.ಬಿ.ಚಂದ್ರಪ್ಪ,ಸಿ.ಕೆ.ಉದಯಕುಮಾರ್, ಹೆಚ್.ಟಿ.ಕುಶಾಲಪ್ಪ,ಕೆ.ಎಸ್.ಕೃಷ್ಣೇಗೌಡ,ಕೆ.ಬಿ.ದೇವರಾಜ್, ಹೆಚ್.ಸಿ.ಮೂರ್ತಿ,ಟಿ.ಜೆ.ರವಿಕುಮಾರ್, ಟಿ.ಎ.ರವಿಚಂದ್ರ,ಟಿ.ಎಸ್.ಹರೀಶ್, ಹೇಮಾ,ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್,ಹೆಬ್ಬಾಲೆ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಎಮ್.ಭರತ್ ಕುಮಾರ್,ಶನಿವಾರಸಂತೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ತುಂಗರಾಜ್,ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪ್ರೀತು ಮತ್ತಿತರರು ಪಾಲ್ಗೊಂಡಿದ್ದರು.

 ಇದೇ ಸಂದರ್ಭ ಸಹಕಾರ ಕ್ಷೇತ್ರ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ,ಉಪಾಧ್ಯಕ್ಷ ಮಾದಪ್ಪ ಹಾಗೂ ನಿರ್ದೇಶಕರು, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್ ಅವರನ್ನು ಸನ್ಮಾನಿಸಿ ಗೌರವಿಸಿದರು.