Kodagu

ಕೆದಮುಳ್ಳೂರು-ತೋರ ರಸ್ತೆಯಲ್ಲಿ ಸಂಚಾರಕ್ಕೆ ಪರದಾಟ; ಪಿಡಿಒ ನೋಟಿಸ್‌ಗೂ ಕ್ಯಾರೇ ಅನ್ನದ ಒತ್ತುವರಿದಾರರು

admincoorgdaily

ಕೆದಮುಳ್ಳೂರು-ತೋರ ರಸ್ತೆಯಲ್ಲಿ ಸಂಚಾರಕ್ಕೆ ಪರದಾಟ; ಪಿಡಿಒ ನೋಟಿಸ್‌ಗೂ ಕ್ಯಾರೇ ಅನ್ನದ ಒತ್ತುವರಿದಾರರು
ವಿರಾಜಪೇಟೆ: ಕೆದಮುಳ್ಳುರು, ತೋರ, ಪಾಲಂಗಾಲ ಕಡೆಗೆ ಸಾಗುವ ಪ್ರಮುಖ ರಸ್ತೆಯು ಒತ್ತುವರಿ, ಕಳೆ ಗಿಡಗಳ ಕಾಡು ಹಾಗೂ ಅಧಿಕಾರಿಗಳ ಮೌನದಿಂದಾಗಿ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ನರಕಯಾತನೆಯಾಗಿ ಪರಿಣಮಿಸಿದೆ. ಈ ಕುರಿತು ಸಂಬಂಧಪಟ್ಟ ಇಲಾಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿ ಧೋರಣೆಯನ್ನು ಖಂಡಿಸಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಈ ಕುರಿತು ಮಾತನಾಡಿದ ಎಂ.ಎ ಪರಮೇಶ್ವರ ಹಿಂದೆಲ್ಲಾ ವರ್ಷಕ್ಕೆ ಎರಡು ಬಾರಿ ರಸ್ತೆಯಂಚಿನ ಕಾಡು ಕಡಿದು, ಚರಂಡಿ ಸ್ವಚ್ಛಗೊಳಿಸಿ ರಸ್ತೆಯನ್ನು ಸುಸ್ಥಿತಿಯಲ್ಲಿಡಲಾಗುತ್ತಿತ್ತು. ಆದರೆ ಕಳೆದ ಎರಡು-ಮೂರು ವರ್ಷಗಳಿಂದ ವರ್ಷಕ್ಕೊಮ್ಮೆ ಕೂಡ ಕಾಡು ಕಡಿಯುವ ಕೆಲಸ ಮಾಡುತ್ತಿಲ್ಲ. ಪರಿಣಾಮವಾಗಿ ರಸ್ತೆಯಂಚಿನ ಮಣ್ಣು ಮತ್ತು ಪೊದೆಗಳು ರಸ್ತೆಯನ್ನೇ ಆಕ್ರಮಿಸಿಕೊಂಡಿವೆ. ಕಿರಿದಾದ ಈ ರಸ್ತೆಯಲ್ಲಿ ದೊಡ್ಡ ವಾಹನಗಳು ಎದುರಿಗೆ ಬಂದಾಗ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಸೈಡ್ ಕೊಡಲು ಜಾಗವಿಲ್ಲದೆ ಪರದಾಡುವಂತಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಬೂಬು ಹೇಳುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಅಮಾಯಕ ಜೀವಗಳು ಬಲಿಯಾಗುವ ಆತಂಕ ಎದುರಾಗಿದೆ ಎಂದಿದ್ದಾರೆ.

ಪಿಡಬ್ಲ್ಯುಡಿ ರಸ್ತೆ ಒತ್ತುವರಿ ಹಾಗೂ ಪಿ.ಡಿ.ಒ ನೋಟಿಸ್‌ಗೂ ಕ್ಯಾರೆ ಅನ್ನದ ಒತ್ತುವರಿದಾರರು:
   ರಸ್ತೆಯ ಬದಿಯಲ್ಲಿರುವ ಕೆಲ ತೋಟದ ಮಾಲೀಕರು ಸಾರ್ವಜನಿಕ ಪಿಡಬ್ಲ್ಯುಡಿ ರಸ್ತೆಯನ್ನು ಮನಬಂದಂತೆ ಒತ್ತುವರಿ ಮಾಡಿಕೊಂಡು ಹೊಸ ಬೇಲಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ರಸ್ತೆ ಮತ್ತಷ್ಟು ಕಿರಿದಾಗಿದ್ದು, ಮುಂದಿನ ದಿನಗಳಲ್ಲಿ ಈ ರಸ್ತೆಗಳು ಯಾವ ರೀತಿ ಅಭಿವೃದ್ಧಿಯಾಗಬಹುದು ಎಂಬುದು ಗಂಭೀರ ಪ್ರಶ್ನೆಯಾಗಿದೆ. ಈ ಒತ್ತುವರಿ ತೆರವಿಗೆ ಸ್ಥಳೀಯ ಪಿ.ಡಿ. (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಅವರು ಈಗಾಗಲೇ ಎರಡು-ಮೂರು ಬಾರಿ ಸಂಬಂಧಪಟ್ಟ ಮಾಲೀಕರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿದ್ದರೂ, ಒತ್ತುವರಿದಾರರು ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.

   ರಸ್ತೆ ಬದಿ ಕಾಡು ಕಡಿಯುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದರೂ, "ಟೆಂಡರ್ ಆಗ್ತಾ ಇದೆ, ಆದ ಕೂಡಲೇ ಕಡಿಸುತ್ತೇವೆ" ಎಂದು ಕೇವಲ ನಾಟಕವಾಡುತ್ತಾ ಕಾಲಹರಣ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

  ಇಲಾಖೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದಿದ್ದರೆ ಅದನ್ನು ಅಧಿಕಾರಿಗಳು ಬಹಿರಂಗವಾಗಿ ಘೋಷಿಸಲಿ. "ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಜನಸಾಮಾನ್ಯರ ಪ್ರಾಣದ ಬೆಲೆ ಇಲ್ಲದಿರಬಹುದು; ಆದರೆ ನಮ್ಮ ಗ್ರಾಮದ ಅಮಾಯಕ ಜೀವಗಳ ಬೆಲೆ ನಮಗೆ ಗೊತ್ತಿದೆ. ಇಲಾಖೆಯಲ್ಲಿ ಹಣವಿಲ್ಲ ಎಂದು ಬಹಿರಂಗವಾಗಿ ಹೇಳಲಿ, ನಾವೇ ಗ್ರಾಮಸ್ಥರೆಲ್ಲಾ ಸೇರಿಕೊಂಡು ಐದು-ಹತ್ತು ರೂಪಾಯಿ ಚಂದಾ ಕಲೆಕ್ಷನ್ ಮಾಡಿಕೊಂಡಾದರೂ ನಾವೇ ಸ್ವತಃ ಕಾಡು ಕಡಿಸುತ್ತೇವೆ" ಎಂದು ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಕೂಡಲೇ ಸಂಬಂಧಪಟ್ಟ ಉನ್ನತಾಧಿಕಾರಿಗಳು ಮಧ್ಯಪ್ರವೇಶಿಸಿ, ಅಕ್ರಮ ಒತ್ತುವರಿಯನ್ನು ತೆರವುಗೊಳಿಸಬೇಕು, ಪಿ.ಡಿ.ಓ ನೋಟಿಸ್‌ಗೆ ಬೆಲೆ ನೀಡದವರ ಮೇಲೆ ಕಟುವಾದ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆಯಂಚಿನ ಕಾಡುಗಳನ್ನು ಕಡಿಸಿ ಸುಗಮ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರ ಪರವಾಗಿ ಪರಮೇಶ್ವರ ಆಗ್ರಹಿಸಿದ್ದಾರೆ.