Kodagu

ತರಕಾರಿ ತರಲು ಹೋದ ಮಹಿಳೆ ದುರಂತ ಅಂತ್ಯ;ಬೈಕ್ ಡಿಕ್ಕಿ‌ ಮಹಿಳೆ ಸಾವು

admincoorgdaily

ತರಕಾರಿ ತರಲು ಹೋದ ಮಹಿಳೆ ದುರಂತ ಅಂತ್ಯ;ಬೈಕ್ ಡಿಕ್ಕಿ‌ ಮಹಿಳೆ ಸಾವು
ಕುಶಾಲನಗರ:ತರಕಾರಿ ಖರೀದಿಸಲು ಮನೆಯಿಂದ ಪಟ್ಟಣಕ್ಕೆ ಬರುತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುವಾಗ ಬೈಕ್ ಡಿಕ್ಕಿಯಾಗಿ ತೀವ್ರ ಗಾಯಗೊಂಡು ಮೃತಪಟ್ಟ ದುರಂತ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.

ಮೃತಪಟ್ಟ ದುರ್ದೈವಿ ಕುಶಾಲನಗರ ಇಂದಿರಾ ಬಡಾವಣೆಯ ಮಹಿಳೆ ತಾಜ್ (58) ಎಂದು ಗುರುತಿಸಲಾಗಿದೆ.

ಕುಶಾಲನಗರ ಮಡಿಕೇರಿ ರಸ್ತೆಯ ಬೈಚನಹಳ್ಳಿ ಬಳಿ ಘಟನೆ ನಡೆದಿದೆ. ತರಕಾರಿ ಖರೀದಿಸಲು ಮನೆಯಿಂದ ಪಟ್ಟಣಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿಯಾಗಿದೆ.

ಕುಶಾಲನಗರದಿಂದ ಗುಡ್ಡೆ ಹೊಸೂರು ಕಡೆಗೆ ತೆರಳುತ್ತಿದ್ದ ಬೈಕ್ (KA 12Y6535) ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿಯಾದ ಕಾರಣ ರಸ್ತೆಗೆ ಬಿದ್ದ ಮಹಿಳೆಯ ತಲೆಗೆ ತೀವ್ರ ಗಾಯವಾಗಿದೆ.

ತಕ್ಷಣ ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿಗೆ ಸಾಗಿಸುತ್ತಿದ್ದ ವೇಳೆ ಪಿರಿಯಾಪಟ್ಟಣ ಮಾರ್ಗ ಮಧ್ಯೆ ಮಹಿಳೆ ಮೃತಪಟ್ಟಿರುವುದಾಗಿ ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಗೀತಾ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬೈಕ್ ಸವಾರ ಗುಡ್ಡೆಹೊಸೂರು ಶ್ರೀಕಾಂತ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ ಮೊಕದ್ದಮೆ ದಾಖಲಿಸಿದ್ದಾರೆ. ಮೃತ ಮಹಿಳೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.