ನಿವೃತ್ತ ಅಂಗನವಾಡಿ ಶಿಕ್ಷಕಿ ನಳಿನಿ ಅವರಿಗೆ ಸನ್ಮಾನ
admincoorgdaily

ಮಡಿಕೇರಿ: ಕಾಟಕೇರಿಯ ಕೂರನಬಾಣೆಯ ಶ್ರೀ ಲಕ್ಷ್ಮೀ ಶ್ರೀ ಶಕ್ತಿ ಸಂಘದ 26ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ 36 ವರ್ಷಗಳ ಕಾಲ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಳಿನಿ ರಮೇಶ್ ಅವರನ್ನು ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಸನ್ಮಾನಿಸಿ ಗೌರವಪೂರ್ವಕವಾಗಿ ಬೀಳ್ಕೊಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಳಿನಿ ರಮೇಶ್ ಅವರು, ತಮ್ಮ 36 ವರ್ಷಗಳ ಸೇವಾವಧಿಯಲ್ಲಿ ಗ್ರಾಮಸ್ಥರು ನೀಡಿದ ಸಹಕಾರ ಅತ್ಯಮೂಲ್ಯವಾದುದು. ಗ್ರಾಮಸ್ಥರ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶೀಲಾ ಅಶೋಕ್ ಅವರು ಮಾತನಾಡಿ, ಇಲಾಖೆಯ ವತಿಯಿಂದ ದೊರೆಯುವ ವಿವಿಧ ಸೌಲಭ್ಯಗಳು ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶೀಲಾ ಅಶೋಕ್ ಹಾಗೂ ನೂತನ ವಾಗಿ ಆಯ್ಕೆಯಾದ ಅಂಗನವಾಡಿ ಶಿಕ್ಷಕಿ ನಳಿನಿ. ಪಿ. ಅವರನ್ನೂ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ವತಿಯಿಂದ ಅಂಗನವಾಡಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮದೆ ಗ್ರಾಮ ಪಂಚಾಯಿತಿ ಆರೋಗ್ಯ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಚೈತ್ರ, ಕಾಟಕೇರಿ ಅಂಗನವಾಡಿ ಕಾರ್ಯಕರ್ತೆ ರಮ್ಯಾ ಹಾಗೂ ಶ್ರೀ ಲಕ್ಷ್ಮೀ ಶ್ರೀ ಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.