Kodagu

ಹಿಂದುತ್ವ ಪರಂಪರೆ ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವುದೇ ನಿಜವಾದ ದೇಶಭಕ್ತಿ: ಕಿಲನ್ ಗಣಪತಿ

admincoorgdaily

ಹಿಂದುತ್ವ ಪರಂಪರೆ ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವುದೇ ನಿಜವಾದ ದೇಶಭಕ್ತಿ: ಕಿಲನ್ ಗಣಪತಿ
ಗೋಣಿಕೊಪ್ಪ: ಭಾರತದ ಹಿಂದುತ್ವದ ಪರಂಪರೆ, ಸಂಸ್ಕೃತಿ ಮತ್ತು ಆಚಾರ–ವಿಚಾರಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವುದೇ ನಿಜವಾದ ದೇಶಭಕ್ತಿಯ ಭಾಗವಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಲನ್ ಗಣಪತಿ ಅಭಿಪ್ರಾಯಪಟ್ಟರು.

ಗೋಣಿಕೊಪ್ಪದ ಉಮಾಮಹೇಶ್ವರಿ ಬಡಾವಣೆಯ ಪ್ರಸನ್ನ ಗಣಪತಿ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ 15ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಮೂರನೇ ದಿನದಲ್ಲಿ ನಡೆದ  ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಕ್ಕೆ ಡೋಲಕ್ ಬಾರಿಸುವ ಮೂಲಕ ಚಾಲನೆ ನೀಡಿ  ಮಾತನಾಡಿದರು.
ಗಣೇಶೋತ್ಸವವು ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ರೂಪುಗೊಂಡ ಪ್ರಮುಖ ಆಚರಣೆಯಾಗಿದೆ. ಇದರ ಹಿಂದಿರುವ ಇತಿಹಾಸ, ಉದ್ದೇಶ ಮತ್ತು ಮಹತ್ವವನ್ನು ಯುವ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಹಿರಿಯರ ಮೇಲಿದೆ. ಮಕ್ಕಳಲ್ಲಿ ಭಕ್ತಿ, ದಯೆ, ಮಾನವೀಯತೆ ಹಾಗೂ ದೇಶಪ್ರೇಮದ ಭಾವನೆಗಳನ್ನು ಬೆಳೆಸುವ ಕೆಲಸ ಕುಟುಂಬದಿಂದಲೇ ಆರಂಭವಾಗಬೇಕು ಎಂದು ಹೇಳಿದರು.

ಮಹಿಳೆಯರು ಕುಟುಂಬ ಮತ್ತು ಸಮಾಜದ ಪ್ರಮುಖ ಶಕ್ತಿಯಾಗಿದ್ದಾರೆ. ಅವರ ತಾಳ್ಮೆ, ಕೌಟುಂಬಿಕ ನಿರ್ವಹಣೆ, ಜವಾಬ್ದಾರಿತನ ಹಾಗೂ ಸಾಮಾಜಿಕ ಕಾಳಜಿಯೇ ಸಮಾಜವನ್ನು ಶಾಂತಿಯುತವಾಗಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಾಯಿ ನಗುಮುಖದಿಂದ ಇದ್ದಾಗ ಮಾತ್ರ ಕುಟುಂಬದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ ಎಂದರು.

ಗೋಣಿಕೊಪ್ಪ ರೋಟರಿ ಸಂಸ್ಥೆ ಅಧ್ಯಕ್ಷ ಪ್ರಮೋದ್‌ಕಾಮತ್ ಮಾತನಾಡಿ, ಹಿರಿಯರು ಮತ್ತು ಯುವಕರನ್ನು ಒಂದೇ ವೇದಿಕೆಗೆ ಕರೆತಂದು ಭೇದಭಾವ ಮರೆಸಿ ಪರಸ್ಪರ ಪ್ರೀತಿ, ಸೌಹಾರ್ದ ಮತ್ತು ಒಗ್ಗಟ್ಟನ್ನು ಬೆಳೆಸುವ ಕಾರ್ಯಕ್ರಮವೇ ಗಣೇಶೋತ್ಸವವಾಗಿದೆ. ಇದರ ಮಹತ್ವವನ್ನು ಪ್ರತಿಯೊಬ್ಬರೂ ಅರಿತು ಆಚರಿಸಿದಾಗ ಮಾತ್ರ ಉತ್ಸವಕ್ಕೆ ನಿಜವಾದ ಅರ್ಥ ದೊರೆಯುತ್ತದೆ ಎಂದರು.

ಗೋಣಿಕೊಪ್ಪ ಅಪರಾಧ ವಿಭಾಗದ ಠಾಣಾಧಿಕಾರಿ ವೆಂಕಟೇಶ್ ಮಾತನಾಡಿ, ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನಮಾನವಿದೆ. ಕುಟುಂಬದ ಶಕ್ತಿಯಾಗಿರುವ ಮಹಿಳೆಯರು ಮಕ್ಕಳಿಗೆ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ಆಚರಣೆಗಳ ಕುರಿತು ತಿಳಿವಳಿಕೆ ನೀಡಿದಾಗ ಮಾತ್ರ ನಮ್ಮ ಸಂಪ್ರದಾಯಗಳು ಮುಂದಿನ ಪೀಳಿಗೆಗೂ ಜೀವಂತವಾಗಿ ಸಾಗಲು ಸಾಧ್ಯ ಎಂದರು.

ಪತ್ರಕರ್ತ ಹಾಗೂ ಗಾಯಕ ಚೆನ್ನನಾಯಕ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ದೇಶದ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಚಾರಗಳ ಅರಿವು ಮೂಡಿಸಬೇಕು. ಭಾರತೀಯ ಸಂಸ್ಕೃತಿ, ಆಚಾರ–ವಿಚಾರ ಮತ್ತು ಪರಂಪರೆಯನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಕುಟುಂಬದ ಜವಾಬ್ದಾರಿಯೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸಮಾಜವನ್ನು ಮತ್ತಷ್ಟು ಸದೃಢಗೊಳಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಗೀತಾ ನಾಗರಾಜ್, ಪ್ರಸನ್ನ ಯುವಕ ಸಂಘದ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಸ್ವಚ್ಛತಾ ಸಮಿತಿ ಸಂಚಾಲಕ ರಾಘವೇಂದ್ರ ಆರ್., ವೇದಿಕೆ ಸಮಿತಿ ಸಂಚಾಲಕ ಮುಕೇಶ್ ಉಪಸ್ಥಿತರಿದ್ದರು.

ಚೆನ್ನನಾಯಕ ಮತ್ತು ಮುಸ್ತಫಾ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಿತು. ಸ್ಥಳೀಯ ಮಹಿಳೆಯರು ಹಾಗೂ ಮಕ್ಕಳು ವಿವಿಧ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಎಸ್‌ಐ ವೆಂಕಟೇಶ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಎನ್. ಪ್ರಕಾಶ್ 90ರ ದಶಕದ ಜನಪ್ರಿಯ ಹಾಡುಗಳನ್ನು ಹಾಡಿ ಮನರಂಜಿಸಿದರು.
ಸAಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕೋಶಾಧಿಕಾರಿ ಅನ್ವಿತಾ, ಉಪಾಧ್ಯಕ್ಷರುಗಳಾದ  ಅನಿಲ್, ದಿಲೀಪ್, ಸದಸ್ಯರುಗಳಾದ  ಮುರುಳಿ, ಭರತ್, ಕೌಶಿಕ್, ಆಶಾ, ಚಂದ್ರಕಲಾ, ಲೀನಾ ರಾಘವೇಂದ್ರ, ಪ್ರಜ್ವಲ್, ಪುನೀತ್, ಅಜಿತಾ, ಸೌಜನ್ಯ ಸೇರಿದಂತೆ ಹಲವರು ಇದ್ದರು.