ಅಕ್ರಮವಾಗಿ ಶ್ರೀ ಗಂಧ ಮರ ಸಾಗಾಟ;ಇಬ್ಬರ ಬಂಧನ
admincoorgdaily

ಸಿದ್ದಾಪುರ;ನೆಲ್ಲಿಹುದಿಕೇರಿ ಗ್ರಾಮದ ಕೆ.ಎಂ.ಪ್ರಕಾಶ್ ರವರ ತೋಟದಿಂದ ಅಕ್ರಮವಾಗಿ ಮೂರು ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿ ಚೆನ್ನಯ್ಯನಕೋಟೆ ಗ್ರಾಮದ ಜಲಕಟ್ಟೆ ಎಂಬಲ್ಲಿ ಚೇಗನ್ನು ಬೇರ್ಪಡಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನಿತಾ ಚೌಹಾಣ್, ತಿತಿಮತಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ, ತಿತಿಮತಿ ವಲಯ ಅರಣ್ಯ ಅಧಿಕಾರಿ ರಾಕೇಶ್, ಚೆನ್ನಂಗಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ ನೇತೃತ್ವದ ತಂಡ ದಾಳಿ ಮಾಡಿದೆ.
ದಾಳಿಯಲ್ಲಿ ಚೆನ್ನಯ್ಯನಕೋಟೆ ಗ್ರಾಮದ ಕೋಟೆ ಪೈಸಾರಿ ನಿವಾಸಿ ಚಂದ್ರ ಎಂ.ಎಂ ಮತ್ತು ಜಲಕಟ್ಟೆ ನಿವಾಸಿ ಉಮೇಶ್ ಹೆಚ್.ಪಿ ಇವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 20 ಕೆಜಿ ಹಸಿ ಶ್ರೀಗಂಧದ ಕೊರಡು, 15 ಕೆಜಿ ಹಸಿ ಗಂಧದ ತುಂಡುಗಳು ಹಾಗೂ 20 ಕೆಜಿ ಗಂಧದ ಬಿಳಿ ಮರದ ಚಕ್ಕೆಗಳು ಸೇರಿ ಒಟ್ಟು 55 ಕೆಜಿ ಶ್ರೀಗಂಧದ ಮರವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಇನ್ನೂ ಮೂರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಗಸ್ತು ಅರಣ್ಯ ಪಾಲಕ ರಾಜೇಶ್, ಆರ್‌ಆರ್‌ಟಿ ತಂಡದ ರೋಷನ್, ಪ್ರದೀಪ, ಪ್ರವೀಣ, ಮಂಜು, ನಿತಿನ್, ಚಾಲಕರಾದ ಸಂಜು ಮತ್ತು ಪ್ರಮೋದ್ ಭಾಗವಹಿಸಿದ್ದರು.