Kodagu

ಪಂಜರಪೇಟೆಯಲ್ಲಿ ದೇವಾಲಯದ ಮಾದರಿಯ ವಿಶಿಷ್ಟ ಗಣಪತಿ ಮಂಟಪ: ಆಕರ್ಷಕ ಕಾರಂಜಿಗೆ ಸಾರ್ವಜನಿಕರ ಮೆಚ್ಚುಗೆ

admincoorgdaily

ಪಂಜರಪೇಟೆಯಲ್ಲಿ ದೇವಾಲಯದ ಮಾದರಿಯ ವಿಶಿಷ್ಟ ಗಣಪತಿ ಮಂಟಪ: ಆಕರ್ಷಕ ಕಾರಂಜಿಗೆ ಸಾರ್ವಜನಿಕರ ಮೆಚ್ಚುಗೆ
ವಿರಾಜಪೇಟೆ:
ಇಲ್ಲಿನ ಐತಿಹಾಸಿಕ ಗಣೇಶೋತ್ಸವದ ಅಂಗವಾಗಿ ಪಂಜರಪೇಟೆಯ 32ನೇ ವರ್ಷದ ಶ್ರೀ ವಿನಾಯಕ ಸೇವಾ ಸಮಿತಿಯ ವತಿಯಿಂದ ನಿರ್ಮಿಸಲಾಗಿರುವ ದೇವಾಲಯದ ಮಾದರಿಯ ವಿಶಿಷ್ಟ ಮಂಟಪ ಹಾಗೂ ಆಕರ್ಷಕ ಕಾರಂಜಿ ಸಜ್ಜಿಕೆ ಸಾರ್ವಜನಿಕರ ವಿಶೇಷ ಗಮನ ಸೆಳೆಯುತ್ತಿದೆ.

ದೇವಾಲಯದ ಸ್ವರೂಪವನ್ನು ಹೋಲುವಂತೆ ಅತ್ಯಂತ ಕಲಾತ್ಮಕವಾಗಿ ಹಾಗೂ ವಿಭಿನ್ನ ವಿನ್ಯಾಸದೊಂದಿಗೆ ಈ ಮಂಟಪವನ್ನು ನಿರ್ಮಿಸಲಾಗಿದ್ದು, ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ. ಮಂಟಪದ ಜೊತೆಗೆ ಸುಂದರವಾಗಿ ಅಲಂಕರಿಸಲಾಗಿರುವ ಕಾರಂಜಿ ವೀಕ್ಷಕರನ್ನು ಸಮ್ಮೋಹನಗೊಳಿಸುತ್ತಿದ್ದು, ನಗರದಲ್ಲಿ ಹಬ್ಬದ ವಾತಾವರಣವನ್ನು ಕಳೆಗಟ್ಟಿಸಿದೆ.

ಸೃಜನಶೀಲ ಪರಿಕಲ್ಪನೆಯೊಂದಿಗೆ ರೂಪುಗೊಂಡಿರುವ ಈ ಮಂಟಪವನ್ನು ವೀಕ್ಷಿಸಲು ಪ್ರತಿದಿನ ನೂರಾರು ಸಾರ್ವಜನಿಕರು ಹಾಗೂ ಭಕ್ತಾದಿಗಳು ಆಗಮಿಸುತ್ತಿದ್ದು, ಕಲಾತ್ಮಕ ವಿನ್ಯಾಸ ಮತ್ತು ನಿರ್ಮಾಣ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಯುವಕರ ಶ್ರಮಕ್ಕೆ ಪ್ರಶಂಸೆ: ಈ ವಿಶಿಷ್ಟ ಮಂಟಪ ಹಾಗೂ ಕಾರಂಜಿ ಸಜ್ಜಿಕೆಯ ಸುಂದರ ನಿರ್ಮಾಣ ಕಾರ್ಯದಲ್ಲಿ ಮುದ್ದಿಯಡ ಕರಣ್ ಕಾವೇರಪ್ಪ, ಅನುಷ್, ಧನು ರೈ, ಶಿಜೋ, ದೀಪಕ್ ಹಾಗೂ ಹೇಮಂತ್ ಅವರು ಪ್ರಮುಖವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕೌಶಲ್ಯ, ಸೃಜನಶೀಲತೆ ಹಾಗೂ ಅಹೋರಾತ್ರಿ ಪರಿಶ್ರಮದ ಮೂಲಕ ಸುಂದರ ಕಲಾಕೃತಿಯನ್ನು ನಾಡಿಗೆ ಸಮರ್ಪಿಸಿರುವ ಈ ಯುವಕರ ತಂಡದ ಕಾರ್ಯಕ್ಕೆ ಸ್ಥಳೀಯರು ಹಾಗೂ ಕಲಾಪ್ರೇಮಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.