ಕೊಡಗಿನಲ್ಲಿ ಪ್ರತಿಭಟನೆ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಲು ಅವಕಾಶ ನೀಡಬಾರದು : ಎಸ್ಐಆರ್ ಪರಿಷ್ಕರಣೆ ವಿರುದ್ಧದ ಪ್ರತಿಭಟನೆಗೆ ಶಾಸಕರ ಬೆಂಬಲದ ಕುರಿತು ಸ್ಪಷ್ಟನೆ ನೀಡಲಿ : ರಾಕೇಶ್ ದೇವಯ್ಯ ಆಗ್ರಹ
admincoorgdaily

ಮಡಿಕೇರಿ ಅ.15 : ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸಿ ಕೊಡಗಿನಲ್ಲಿ ಪ್ರತಿಭಟನೆ ನಡೆಸುವ ಪ್ರಯತ್ನದ ಮೂಲಕ ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆಯಿದೆ. ಆದ್ದರಿಂದ ಪೊಲೀಸ್ ಇಲಾಖೆ ಇಂತಹ ಪ್ರತಿಭಟನೆಗಳಿಗೆ ಅವಕಾಶ ನೀಡುವ ಮೊದಲು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ವಿರಾಜಪೇಟೆ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ಮತದಾರರಾಗಿರದ ಪ್ರಕಾಶ್ ರಾಜ್ ಅವರು ಜಿಲ್ಲೆಯಲ್ಲಿ ಪ್ರತಿಭಟನೆಗೆ ಕರೆ ನೀಡುವ ನೈತಿಕತೆ ಏನು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿರುವ ಅವರು, ಈ ಪ್ರತಿಭಟನೆಯ ಹಿಂದೆ ಜಿಲ್ಲೆಯ ಶಾಂತಿಯನ್ನು ಕದಡುವ ಉದ್ದೇಶವಿದೆಯೇ ಎಂಬುವುದನ್ನು ಪೊಲೀಸ್ ಇಲಾಖೆ ಪರಿಶೀಲಿಸಬೇಕು. ಈ ಪ್ರತಿಭಟನೆಗೆ ಕೊಡಗಿನ ಶಾಸಕರ ಬೆಂಬಲವಿದೆಯೇ ಎಂಬುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಸ್ಐಆರ್ ಹೊಸ ಪ್ರಕ್ರಿಯೆಯಲ್ಲ;
ಎಸ್ಐಆರ್ ಪ್ರಕ್ರಿಯೆ ಇದೇ ಮೊದಲ ಬಾರಿಗೆ ನಡೆಯುತ್ತಿಲ್ಲ. 1952ರಲ್ಲಿ ಆರಂಭವಾದ ಈ ಪ್ರಕ್ರಿಯೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೂ ಹಲವು ಬಾರಿ ನಡೆದಿತ್ತು. ಆದರೆ ಅಂದು ಈ ಪ್ರಕ್ರಿಯೆಯನ್ನು ವಿರೋಧಿಸದ ಕಾಂಗ್ರೆಸ್ ನಾಯಕರು ಇಂದು ಆಕ್ಷೇಪ ವ್ಯಕ್ತಪಡಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಎಸ್ಐಆರ್ ಕುರಿತು ಯಾವುದೇ ಆಧಾರಗಳಿಲ್ಲದೆ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿರುವ ರಾಕೇಶ್ ದೇವಯ್ಯ, ಪ್ರಕ್ರಿಯೆಯಲ್ಲಿ ಸಮಸ್ಯೆಗಳಿದ್ದರೆ ನ್ಯಾಯಾಲಯದ ಮೊರೆ ಹೋಗಿ ನ್ಯಾಯ ಪಡೆದುಕೊಳ್ಳಲಿ ಎಂದು ಹೇಳಿದ್ದಾರೆ.
ನಮೂನೆ 7ರ ಕುರಿತು ಸ್ಪಷ್ಟನೆ ನೀಡಲಿ;
ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ನಮೂನೆ 7 ಸಲ್ಲಿಸುವುದನ್ನು ಕಾಂಗ್ರೆಸ್ ನಾಯಕರು ವಿರೋಧಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು ಈ ನಮೂನೆಗೆ ಬಿಜೆಪಿ ಬೂತ್ ಮಟ್ಟದ ಏಜೆಂಟರು ಮಾತ್ರ ಸಹಿ ಹಾಕುತ್ತಾರೆಯೇ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುವುದಿಲ್ಲವೇ ಎಂಬುವುದನ್ನು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಬೇಕು ಎಂದಿದ್ದಾರೆ.
ಮತದಾರರ ಪಟ್ಟಿಯಲ್ಲಿ ನಮೂನೆ 7 ಸಲ್ಲಿಸಿದ ಮಾತ್ರಕ್ಕೆ ಸಂಬಂಧಪಟ್ಟ ವ್ಯಕ್ತಿಯ ಮತದಾನದ ಹಕ್ಕು ತಕ್ಷಣವೇ ರದ್ದಾಗುವುದಿಲ್ಲ. ಮತದಾರರು ಪಟ್ಟಿಯಲ್ಲಿ ನಮೂದಿಸಿರುವ ವಿಳಾಸದಲ್ಲಿ ವಾಸವಿಲ್ಲದಿರುವುದು ಅಥವಾ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ನೋಂದಣಿ ಹೊಂದಿರುವ ಸಾಧ್ಯತೆಗಳಿದ್ದರೆ ಅವುಗಳನ್ನು ಪರಿಶೀಲಿಸುವುದು ಪರಿಷ್ಕರಣೆಯ ಉದ್ದೇಶವಾಗಿದೆ.
ನಮೂನೆ 7 ಸಲ್ಲಿಕೆಯ ನಂತರವೂ ಸಂಬಂಧಪಟ್ಟ ಮತದಾರರಿಗೆ ತಮ್ಮ ಹೆಸರಿನ ಕುರಿತು ಆಕ್ಷೇಪಣೆ ಸಲ್ಲಿಸಲು ಮತ್ತು ಸೂಕ್ತ ದಾಖಲೆಗಳನ್ನು ಒದಗಿಸಲು ಅವಕಾಶವಿದೆ. ಹೀಗಿರುವಾಗ ನಮೂನೆ 7ರ ಸಲ್ಲಿಕೆಯನ್ನು ಮತದಾನದ ಹಕ್ಕು ಕಸಿದುಕೊಳ್ಳುವ ಕ್ರಮವೆಂದು ಬಿಂಬಿಸುವುದು ಸರಿಯಲ್ಲ ಎಂದು ರಾಕೇಶ್ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸರ ಗೌರವ ಕಾಪಾಡಬೇಕು;
ದೆಹಲಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆಗಳನ್ನು ಉಲ್ಲೇಖಿಸಿರುವ ಅವರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆಯ ಬಗ್ಗೆ ಎಲ್ಲರೂ ಗೌರವ ಹೊಂದಿರಬೇಕು ಎಂದು ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಈಗಿರುವ ಶಾಂತಿಯುತ ವಾತಾವರಣವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಪ್ರತಿಭಟನೆಯ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಯಾರಾದರೂ ಜಿಲ್ಲೆಗೆ ಆಗಮಿಸುತ್ತಿದ್ದಾರೆಯೇ ಎಂಬುವುದನ್ನು ಪೊಲೀಸ್ ಇಲಾಖೆ ಪರಿಶೀಲಿಸಬೇಕು. ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಕೇಶ್ ದೇವಯ್ಯ ಮನವಿ ಮಾಡಿದ್ದಾರೆ.