Kodagu

ಕರ್ತವ್ಯಕ್ಕೆ ಬಂಕ್ ಹೊಡೆದ VA: ಕೊನೆಗೂ ಸೇವೆಯಿಂದ ವಜಾ!

admincoorgdaily

ಕರ್ತವ್ಯಕ್ಕೆ ಬಂಕ್ ಹೊಡೆದ VA: ಕೊನೆಗೂ ಸೇವೆಯಿಂದ ವಜಾ!
ಮಡಿಕೇರಿ;ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿ, ಕೇಂದ್ರ ಸ್ಥಾನದಲ್ಲಿ ವಾಸಿಸದೇ ಕರ್ತವ್ಯಲೋಪ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಯೊಬ್ಬರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.

ವಜಾಗೊಂಡ ಅಧಿಕಾರಿ ಶ್ರೀಮಂಗಲ ಹೋಬಳಿಯ ಟಿ. ಶೆಟ್ಟಿಗೇರಿಯ ಗ್ರಾಮ ಆಡಳಿತ ಅಧಿಕಾರಿ ಜಟ್ಟಪ್ಪ ರಾಮಣ್ಣ ಕಟಬರ. ಇವರು ಈ ಹಿಂದೆ ಕರಿಕೆ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ 02.06.2025 ರಿಂದ ಕಚೇರಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದರು.

ಇದಲ್ಲದೆ, ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನದಲ್ಲಿ ವಾಸವಿರದೇ, ಸಾರ್ವಜನಿಕ ಹಾಗೂ ಕಚೇರಿ ಕೆಲಸವನ್ನು ಸರಿಯಾಗಿ ನಿರ್ವಹಿಸದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ತಹಶೀಲ್ದಾರರು ವರದಿ ನೀಡಿದ್ದರು. ಈ ವರದಿ ಆಧರಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಅಮಾನತು ಬಳಿಕ ಆರೋಪಗಳ ಬಗ್ಗೆ ಲಿಖಿತ ವಿವರಣೆ/ಸ್ಪಷ್ಟೀಕರಣ ಸಲ್ಲಿಸುವಂತೆ 10 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ನೌಕರ ದೋಷಾರೋಪಣ ಪಟ್ಟಿಯಲ್ಲಿನ ಅಂಶಗಳಿಗೆ ನಿಗದಿತ ಕಾಲಾವಧಿ ಕಳೆದರೂ ಲಿಖಿತ ಹೇಳಿಕೆ ಸಲ್ಲಿಸಿರಲಿಲ್ಲ.

ಹೀಗಾಗಿ ನೌಕರರ ಮೇಲೆ ಹೊರಿಸಿರುವ ಆರೋಪಗಳ ಸತ್ಯಾಸತ್ಯತೆಯನ್ನು ತಿಳಿಯಲು ಇಲಾಖಾ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು, ಉಪವಿಭಾಗಾಧಿಕಾರಿ ಅವರನ್ನು ವಿಚಾರಣಾಧಿಕಾರಿಯನ್ನಾಗಿ ಹಾಗೂ ವಿಚಾರಣಾಧಿಕಾರಿಯ ಮುಂದೆ ಶಿಸ್ತು ಪ್ರಾಧಿಕಾರದ ಪರವಾಗಿ ವಾದ ಮಂಡಿಸಲು ಶಿರಸ್ತೇದಾರ್ ಮಹೇಶ್.ಆರ್. ಅವರನ್ನು ಮಂಡನಾಧಿಕಾರಿಯನ್ನಾಗಿ ನೇಮಿಸಿ ವಿವಿಧ ದಿನಾಂಕಗಳಂದು ವಿಚಾರಣೆ ನಡೆಸಲಾಗಿತ್ತು.

ಈ ವಿಚಾರಣಾ ವರದಿಯಲ್ಲಿ ಜಟ್ಟಪ್ಪ ರಾಮಣ್ಣ ಕಟಬರ ಅವರ ಮೇಲಿನ ಆರೋಪ ಸಾಬೀತಾಗಿರುವುದರಿಂದ ಅವರನ್ನು ಸರ್ಕಾರಿ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.