Kodagu

ಮನುಷ್ಯನ ಅಂತರಂಗದ ಶುದ್ದಿಗೆ ವಚನ ಸಾಹಿತ್ಯ ದಿವ್ಯ ಔಷಧಿ; ವಚನಗಳಲ್ಲಿ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ಡಾ.ಜಮೀರ್ ಅಹಮದ್ ಅಭಿಮತ

admincoorgdaily

ಮನುಷ್ಯನ ಅಂತರಂಗದ ಶುದ್ದಿಗೆ ವಚನ ಸಾಹಿತ್ಯ  ದಿವ್ಯ ಔಷಧಿ;  ವಚನಗಳಲ್ಲಿ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ಡಾ.ಜಮೀರ್ ಅಹಮದ್ ಅಭಿಮತ
ಶನಿವಾರಸಂತೆ : ಮನುಷ್ಯನ ಅಂತರಂಗದ ಶುದ್ದೀಕರಣಕ್ಕೆ ವಚನ ಸಾಹಿತ್ಯದ ಅರಿವು  ದಿವ್ಯ ಔಷಧಿ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಕರೆಕೊಟ್ಟರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಲೆಗಳಿಗೆ ತೆರಳಿ ಅಕ್ಷರಗಳನ್ನು ಕಲಿಯದ  ಹನ್ನೆರಡನೇ ಶತಮಾನದ ಬಸವಾದಿ  ಶರಣರು ಅಂದಿನ ಕಾಲಘಟ್ಟ ದಲ್ಲಿ ಸಮಾಜದಲ್ಲಿ ತಲೆದೋರಿದ್ದ ಸಾಮಾಜಿಕ ಅಸಮಾನತೆ, ವರ್ಗ - ವರ್ಣ ಬೇಧಗಳು ಮೊದಲಾದ ಸಾಮಾಜಿಕ ಪಿಡುಗುಗಳ ಕುರಿತು ತಮಗೆ ತೋಚಿದ್ದು ಗೀಚಿದ ವಚನ ಸಾಹಿತ್ಯ ಇಂದು ವಿಶ್ವದ ಮೇರು ಸಾಹಿತ್ಯ ವಾಗಿದೆ.
ಕನ್ನಡ ಸಾಹಿತ್ಯಕ್ಕೆ ಶರಣ ಸಾಹಿತ್ಯ ತಾಯಿ ಬೇರು.
ಭವಿಷ್ಯದ ಸತ್ಪ್ರಜೆಗಳಾದ ಇಂದಿನ ಮಕ್ಕಳಲ್ಲಿ ವಿಶ್ವಮಾನವತೆ ಹಾಗೂ ಸಾಮಾಜಿಕ ಬದ್ಧತೆಯ ಅರಿವು ಮೂಡಿಸಲು ವಚನ ಸಾಹಿತ್ಯ ಅತ್ಯಗತ್ಯವಾಗಿದೆ.
 ಸತ್ಯ ಶುದ್ಧವಾದ  ಕಾಯಕ ಹಾಗೂ 
 ದಾಸೋಹದ ಮೂಲಕ ಸಮ ಸಮಾಜದ ನಿರ್ಮಾಣ ಹಾಗೂ ಮಹಿಳಾ ಸಮಾನತೆಯನ್ನು ಬೋಧಿಸಿದ ಶರಣರ ಆಶಯಗಳೇ ಭಾರತದ  ಸಂವಿಧಾನದ ಅಸ್ಮಿತೆ ಎಂದು ಅನೇಕ ವಚನಗಳ ಮೂಲಕ  ಡಾ.ಜಮೀರ್ ಅಹಮದ್ ವಿವರಿಸಿದರು.

ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿನ ಬಸವಾದಿ ಶರಣರು ಆಶಿಸಿದ ಸತ್ಯ ಶುದ್ಧವಾದ ಸಮ ಸಮಾಜ ನಿರ್ಮಾಣಕ್ಕೆ ಇಂದಿನ ಪ್ರತಿಯೊಬ್ಬರು ತಮ್ಮನ್ನು ತಾವು ಅರಿತು ತಿದ್ದಿಕೊಂಡಲ್ಲಿ ಸಮಾಜ ತನ್ನಿಂದ ತಾನೇ ಶುದ್ದಿಯಾಗುತ್ತದೆ.
ಓದು ಬರಹಗಳನ್ನು ಅರಿಯದ ಶರಣರು ತಮ್ಮ ಅನುಭವಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ  ವಚನ ಸಾಹಿತ್ಯ ವಿಶ್ವದ ಮೇರು ಸಾಹಿತ್ಯವಾಗಿದೆ.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ವಚನ ಸಾಹಿತ್ಯ ವನ್ನು ಅರಿತು ನಡೆದಲ್ಲಿ ಅವರ ವ್ಯಕ್ತಿತ್ವ  ಪ್ರಕಾಶಮಾನವಾಗುತ್ತದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿ 
ಬಸವೇಶ್ವರರು ರಚಿಸಿದ ಕಲಬೇಡ ಕೊಲಬೇಡ ಎಂಬ ಸಪ್ತಸೂತ್ರದ ವಚನದಲ್ಲಿ  ಪೋಲೀಸ್ ಇಲಾಖೆಯ ಎಲ್ಲಾ ಐಪಿಸಿ ಸೆಕ್ಷನ್ ಗಳು ಅಡಕವಾಗಿರುವ ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಸಪ್ತ ಸೂತ್ರದ ವಚನವೊಂದನ್ನು ಇಂದಿನ ಯುವ ಜನಾಂಗ ಅರಿತಲ್ಲಿ ಕಲಹ, ದ್ವೇಷ, ಅಸೂಯೆಗಳಿಲ್ಲದ ಸುಂದರವಾದ  ಜೀವನ  ರೂಪುಗೊಳ್ಳಲಿದೆ.
ಈ ಕಾರಣದಿಂದಾಗಿ ಜಿಲ್ಲಾದ್ಯಂತ ಶಾಲಾ ಕಾಲೇಜುಗಳೆಡೆಗೆ ವಚನಗಳ ನಡಿಗೆ  ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.

ಮೊರಾರ್ಜಿ ಶಾಲೆಯ ಉಪಪ್ರಾಂಶುಪಾಲ ಇಟಗಿ ಅಶೋಕ್ ಮಾತನಾಡಿದರು.
ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, 
ಶಾಲಾ ಶಿಕ್ಷಕರಾದ ವೇಣುಗೋಪಾಲ್, ಲೋಲಾಕ್ಷಿ, ಅಂಬಿಕಾದೇವಿ, ಧನ್ಯ ಇದ್ದರು.