ಪೊನ್ನಂಪೇಟೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ - ಮಹರ್ಷಿ ಆದರ್ಶ ಅಳವಡಿಕೆಗೆ ಕರೆ
admincoorgdaily

ಪೊನ್ನಂಪೇಟೆ,ಅ 26: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ಆದಿವಾಸಿ ಬುಡಕಟ್ಟು ಸಂಘಟನೆಗಳ ಸಹಯೋಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಆಚರಿಸಲಾಯಿತು. ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಸಿಐಟಿ ಕಾಲೇಜಿನ ಉಪನ್ಯಾಸಕಿ ಕು. ಸುಷ್ಮಿತಾ ಮಾತನಾಡಿ, ಮಹರ್ಷಿ ವಾಲ್ಮೀಕಿ ಮಹಾಕಾವ್ಯ ರಚನೆಕಾರರಾಗಿ ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದಾರೆ. ಜ್ಞಾನ ಮತ್ತು ಆದರ್ಶಗಳು ವ್ಯಕ್ತಿಯ ಬದುಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿ ಮಹರ್ಷಿ ವಾಲ್ಮೀಕಿಯವರ ಜೀವನ, ವಿಚಾರಗಳು ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ತಪ್ಪು ಮಾಡಿದವರು ತಮ್ಮ ತಪ್ಪನ್ನು ಅರಿತು, ಅಧರ್ಮದ ಮಾರ್ಗವನ್ನು ತೊರೆದು ಸನ್ಮಾರ್ಗದಲ್ಲಿ ನಡೆಯುವ ಮೂಲಕ ಬದುಕನ್ನು ಸುಂದರಗೊಳಿಸಿಕೊಳ್ಳಬಹುದು ಎಂಬುದನ್ನು ವಾಲ್ಮೀಕಿ ಮಹರ್ಷಿಯವರ ಜೀವನ ತಿಳಿಸಿಕೊಡುತ್ತದೆ ಎಂದು ಹೇಳಿದರು.
ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಪಿ.ಟಿ. ಸುರೇಶ್ ಮಾತನಾಡಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ಸಮುದಾಯದ ಭವನ ನಿರ್ಮಾಣಕ್ಕೆ ರೂ 1 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಆದರೆ, ನಿವೇಶನದ ಕೊರತೆಯಿಂದಾಗಿ ಭವನ ನಿರ್ಮಾಣದ ಯೋಜನೆ ಸಾಕಾರಗೊಳ್ಳುತ್ತಿಲ್ಲ. ಆದ್ದರಿಂದ ಪೊನ್ನಂಪೇಟೆ ಪಟ್ಟಣದಲ್ಲಿ ಭವನ ನಿರ್ಮಿಸಲು ತಹಶೀಲ್ದಾರ್ ಸಂಜನಾ ಸಿ.ಎಸ್. ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿವೇಶನ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ವಾಲ್ಮೀಕಿ ನಾಯಕ ಸಂಘದ ತಾಲೂಕು ಕಾರ್ಯದರ್ಶಿ ಮುತ್ತುರಾಜ್ ಮಾತನಾಡಿ, ಸಮುದಾಯದ ಜನರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅನ್ಯಾಯಗಳ ಬಗ್ಗೆ ಗಮನ ಸೆಳೆದರು. ಸಮುದಾಯದ ಹಲವರಿಗೆ ಅಗತ್ಯ ದಾಖಲೆಗಳಿಲ್ಲದಿರುವುದು ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಲು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್ ಮಾತನಾಡಿ, ಸಮುದಾಯದ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಆದರ್ಶ ಹಾಗೂ ಜೀವನದ ಮೌಲ್ಯಗಳನ್ನು ಅರಿತು ಅರ್ಥಪೂರ್ಣವಾಗಿ ಆಚರಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಸಮುದಾಯಕ್ಕೆ ಅಗತ್ಯವಿರುವ ಅನುದಾನ ಹಾಗೂ ಮೂಲಸೌಕರ್ಯಗಳ ಕೊರತೆ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನದ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕಿದೆ. ಸರ್ಕಾರಿ ಅಧಿಕಾರಿಗಳು ಸಮುದಾಯದ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸಬೇಕು. ತಮ್ಮ ಆಚಾರ-ವಿಚಾರ ಹಾಗೂ ಹಕ್ಕುಗಳನ್ನು ಸಮರ್ಥವಾಗಿ ಮಂಡಿಸಲು ಸಮುದಾಯದಲ್ಲಿ ಒಗ್ಗಟ್ಟು ಮತ್ತು ಗಟ್ಟಿಯಾದ ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಾದ ಡಾ. ಸುಷ್ಮಿತಾ, ಪಿ.ಟಿ. ಸುರೇಶ್, ಕವನ್ ನಾಯಕ್ ಎಸ್., ಜೆ.ಕೆ. ರಾಮು, ಪಿ.ಸಿ. ಪಾಪಣ್ಣ, ಅಡುಗೆ ಸಿಬ್ಬಂದಿ ರಾಜೇಶ್ ಹಾಗೂ ಮರೂರು ಆಶ್ರಮ ಶಾಲೆಯ ಶಿಕ್ಷಕಿ ಉಮಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಶಿಕ್ಷಕ ಸಂಘದ ಸದಸ್ಯರು ನಾಡಗೀತೆ ಹಾಗೂ ವಂದೇ ಮಾತರಂ ಗೀತೆಯನ್ನು ಹಾಡಿದರು. ಶಿಕ್ಷಕಿ ಚೈತ್ರಾ ಪ್ರಾರ್ಥಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಪೊನ್ನಂಪೇಟೆ ತಹಶೀಲ್ದಾರ್ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷೆ ಕು. ಸಂಜನಾ ಸಿ.ಎಸ್, ತಾಲೂಕು ಪರಿಶಿಷ್ಟ ವರ್ಗಗಳ ಇಲಾಖೆಯ ಅಧಿಕಾರಿ ತೇಜರಾಜ್ ಹಲಸಸಬಾಳ , ವಿರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಕೆ., ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೋಪಿ ಎಸ್. ಹಾಗೂ ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ,ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಎಸ್ಸಿ/ಎಸ್ಟಿ ನೌಕರರ ಸಂಘದ ಅಧ್ಯಕ್ಷ ಹಾಗೂ ಶಿಕ್ಷಕ ಮಹೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಪಂಕಜ, ನಾಗರಹೊಳೆ ವನದನ ವಿಕಾಸ ಕೇಂದ್ರದ ಅಧ್ಯಕ್ಷೆ ಪುಷ್ಪಾ , ಸಿಡಿಪಿಒ ಪೂಣಚ್ಚ, ಬೆಟ್ಟಕುರುಬ ಜನಾಂಗದ ಮುಖಂಡ ಪಾಪಣ್ಣ, ವಿರಾಜಪೇಟೆ ತಾಲೂಕು ಬುಡಕಟ್ಟು ಕೃಷಿಕ ಸಂಘದ ಅಧ್ಯಕ್ಷ ಸಿದ್ದಪ್ಪ, ಕೆಪಿಎಸ್ ಶಾಲಾ ಉಪಪ್ರಾಂಶುಪಾಲ ಚಂಗಪ್ಪ, ಆದಿವಾಸಿ ಮುಖಂಡರಾದ ಜೆ.ಕೆ. ರಾಮು, ಕಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.