Kodagu

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

admincoorgdaily

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ
ಮಡಿಕೇರಿ(ಕೂರ್ಗ್ ಡೈಲಿ):-ವೀರಶೈವ-ಲಿಂಗಾಯತ ಜಾತಿ ಹಾಗೂ ಉಪಜಾತಿಗೆ ಸೇರಿದ ಸಮುದಾಯದ ಜನರ(ಪ್ರವರ್ಗ-IIIಬಿ) ಅಭಿವೃದ್ದಿಗಾಗಿ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವ ಫಲಾಪೇಕ್ಷಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 30 ಕೊನೆಯ ದಿನವಾಗಿದೆ. 

ಶೈಕ್ಷಣಿಕ ಸಾಲ ಯೋಜನೆಯಡಿ 
ಬಸವ ಬೆಳಗು ಯೋಜನೆ: ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಅವರ ಕುಟುಂಬ ವಾರ್ಷಿಕ ಆದಾಯ ರೂ.3.50 ಲಕ್ಷ ಮಿತಿಯಲ್ಲಿರುವ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‍ಗಳಾದ ಎಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ ಮುಂತಾದ 28 ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ವಾರ್ಷಿಕ ರೂ.1 ಲಕ್ಷಗಳಂತೆ ಕೊರ್ಸ್ ನ ಅವಧಿಗೆ ಗರಿಷ್ಠ ರೂ.4 ಲಕ್ಷಗಳಿಂದ 5 ಲಕ್ಷಗಳವರೆಗೆ ವಾರ್ಷಿಕ ಶೇ.2 ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ವಿದ್ಯಾರ್ಥಿಗಳು ಸಿಇಟಿ, ನೀಟ್ ಮತ್ತಿತರ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಕೋಟಾದ ಸೀಟು ಪಡೆದಿರಬೇಕು.

ಬಸವ ಬೆಳಗು ಯೋಜನೆ: ಹಿಂದಿನ ಸಾಲುಗಳಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ ನವೀಕರಣ ಸಾಲ. ನಿಗಮದಿಂದ ಹಿಂದಿನ ವರ್ಷಗಳಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ ನವೀಕರಣ ಸಾಲ ಮಂಜೂರು ಮಾಡಲು ವ್ಯಾಸಂಗ ದೃಡೀಕರಣ ಹಾಗೂ ಹಿಂದಿನ ವರ್ಷದ ಅಂಕಪಟ್ಟಿಯೊಂದಿಗೆ ಅರ್ಜಿಸಲ್ಲಿಸುವುದು.

ವಿದೇಶ ವಿದ್ಯಾವಿಕಾಸ ಯೋಜನೆ: ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಅವರ ಕುಟುಂಬದ ವಾರ್ಷಿಕ ಆದಾಯ ರೂ. 15 ಲಕ್ಷಗಳ ಮಿತಿಯಲ್ಲಿರುವ ವಿದ್ಯಾರ್ಥಿಗಳು ಕ್ಯೂಎಸ್ ವಲ್ರ್ಡ್ ರ್ಯಾಂಕಿಂಗ್ 1000 ರೊಳಗೆ ಬರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪೊಸ್ಟ್ ಡಾಕ್ಟರಲ್, ಪಿ.ಹೆಚ್.ಡಿ. ಮಾಸ್ಟರ್ ಡಿಗ್ರಿಕೋರ್ಸ್‍ಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ವಾರ್ಷಿಕ ಗರಿಷ್ಠ ರೂ.25 ಲಕ್ಷಗಳಂತೆ 3 ವರ್ಷದ ಅವಧಿಗೆ ಒಟ್ಟು ಗರಿಷ್ಟ ರೂ.50 ಲಕ್ಷಗಳನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.

ಜೀವ ಜಲಯೋಜನೆ: ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98 ಸಾವಿರ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1.20 ಲಕ್ಷ ಗಳ ಮಿತಿಯೊಳಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸುವ ಮುಖೇನ ನೀರಾವರಿ ಸೌಲಭ್ಯ ಒದಗಿಸಲಾಗುವುದು.  ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಒಳಗೆ ಜಮೀನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ರೈತರ ಫ್ರೂಟ್ಸ್ ಐಡಿ ಮತ್ತು ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಹೊಂದಿರಬೇಕು.

ಕಾಯಕ ಕಿರಣ ಯೋಜನೆ: ವೀರಶೈವ-ಲಿಂಗಾಯತ ಸಮುದಾಯದ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗನುಸಾರ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗುವುದು.

ಸ್ವಾವಲಂಭಿ ಸಾರಥಿ ಯೋಜನೆ: ಸ್ವಾವಲಂಭಿ ಸಾರಥಿ ಯೋಜನೆಯಡಿ ನಿರುದ್ಯೋಗಿ ಯುವ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನಾಲ್ಕು ಚಕ್ರ ವಾಹನ (ಹಳದಿ ಬೊರ್ಡ್) ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್‍ಗಳ/ ಖಾಸಗಿ ಹಣಕಾಸು ಸಂಸ್ಥೆಗಳ ಮೂಲಕ ಪಡೆಯುವ ಸಾಲಕ್ಕೆ ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷಗಳ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಉಳಿದ ಮೊತ್ತವನ್ನು ಸದರಿ ಬ್ಯಾಂಕಿನಲ್ಲಿ ಚಾಲ್ತಿಯಿರುವ ಬಡ್ಡಿದರದಲ್ಲಿ ಸಾಲ ಪಡೆಯುವುದು. 21 ರಿಂದ 45 ವರ್ಷಗಳ ವಯೋಮಿತಿಯಲ್ಲಿರುವವರು ಅರ್ಜಿ ಸಲ್ಲಿಸಬಹುದು.

 ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ: ವಿದ್ಯಾವಂತ ಯುವ ಜನರನ್ನು ಗುರುತಿಸಿ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ತರಬೇತಿಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಐಟಿಐ, ಜಿಟಿಟಿಸಿ, ಕೆಜಿಟಿಟಿಐ, ಎಟಿಡಿಸಿ, ವಿಟಿಯು ಮತ್ತು  ಕಾಳಿದಾಸ ಶಿಕ್ಷಣ ಸಂಸ್ಥೆ ಮೂಲಕ ವಿವಿಧ ಅಲ್ಪಾವಧಿ ಮತ್ತು ಉತ್ಕøಷ್ಟ ಕೌಶಲ್ಯ ತರಬೇತಿಯನ್ನು ನೀಡಿ ಅವರ ಉದ್ಯೋಗ ಸಾಮಥ್ರ್ಯವನ್ನು ಹಾಗೂ ಸಾಮಾಜಿಕ/ ಆರ್ಥಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಉದ್ಯೋಗ ಮುಖಿಗಳನ್ನಾಗಿಸುವುದು.
ಅರ್ಹತೆಗಳು: 10ನೇತರಗತಿ/ ದ್ವಿತೀಯ ಪಿ.ಯು.ಸಿ/ ಡಿಪ್ಲೋಮ/ ಪದವಿ/ ಎಂಜಿನಿಯರಿಂಗ್ ವ್ಯಾಸಂಗ ಪೂರ್ಣಗೊಳಿಸಿರಬೇಕು, ಅರ್ಜಿದಾರರ ವಯಸ್ಸು 18 ರಿಂದ 25 ವರ್ಷಗಳ ಒಳಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ/ ಆದಾಯ ರೂ.8 ಲಕ್ಷಗಳಿಗಿಂತ ಕಡಿಮೆ ಇರಬೇಕು. ಅರ್ಜಿದಾರರು https://www.kaushalkar.com/ ಜಾಲತಾಣದೊಂದಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನುಸೀಡ್ ಮಾಡಿರಬೇಕು
ನಿಗಮವು ಅನುಷ್ಠಾನಗೊಳಿಸುವ ಈ ಯೋಜನೆಗಳಲ್ಲಿ ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ಅಧ್ಯಕ್ಷರು/ ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯ ಬಯಸುವವರೂ ಸಹ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವುದು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರೀಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಿದೆ. 

ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. 2024-25 ಹಾಗೂ 2025-26 ನೇ ಸಾಲಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗದವರು ಆದೇ ಯೋಜನೆಗೆ ಈ ವರ್ಷ ಮರು ಅರ್ಜಿಸಲ್ಲಿಸುವ ಅಗತ್ಯತೆ ಇರುವುದಿಲ್ಲ.
ಹೆಚ್ಚಿನ ಮಾಹಿತಿಗೆ ನಿಗಮದ ಜಾಲತಾಣ https://kvldcl.karnataka.gov.in ಅಥವಾ ನಿಗಮದ ದೂ.ಸಂ. 080 22865522/ 9900012351/ 9900012352 ಅನ್ನು ಸಂಪರ್ಕಿಸುವುದು ಅಥವಾ ಜಿಲ್ಲಾ ವ್ಯವಸ್ಥಾಪಕರು,                   ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ(ನಿ) ಇವರನ್ನು ದೂ.ಸಂ.08272-221656 ಮುಖಾಂತರ ಸಂಪರ್ಕಿಸಬಹುದು ಎಂದು ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.