ವಿರಾಜಪೇಟೆ; ಪ್ರೀತಿಯ ವಿವಾಹ ತಂದಿತು ಮನೆಯಲ್ಲಿ ಮರಣದ ಕತ್ತಲು
admincoorgdaily

ವೀರಾಜಪೇಟೆ; ಮಗಳು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಿದ್ದರಿಂದ ಮನನೊಂದ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೀರಾಜಪೇಟೆಯ ಕೆ. ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರು ಕೆ. ಬೋಯಿಕೇರಿ ಗ್ರಾಮದ ನಿವಾಸಿ ಎ. ನವೀನ್ ಅವರ ಲೈನ್ ಮನೆಯಲ್ಲಿ ವಾಸವಿದ್ದ ಪಣಿ ಎರವರ ಸುಬ್ರಮಣಿ ಅವರ ಪತ್ನಿ ಬೇಬಿ (40).
ಸುಬ್ರಮಣಿ ಹಾಗೂ ಬೇಬಿ ದಂಪತಿ ಪುತ್ರಿ ಯುವಕನೋರ್ವನನ್ನು ಪ್ರೀತಿಸುತ್ತಿದ್ದು, ಪೋಷಕರು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದರೂ ಪೋಷಕರ ವಿರೋಧದ ನಡುವೆಯೇ ಯುವತಿ ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಿದ್ದಳು ಎನ್ನಲಾಗಿದೆ.
ಈ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಮನಸ್ತಾಪ ಹಾಗೂ ಕಲಹಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ.
ನ. 5ರ ರಾತ್ರಿ ಮನೆಯ ಮತ್ತೊಂದು ಕೋಣೆಯಲ್ಲಿ ಬೇಬಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಕಿರುಚಾಟ ಕೇಳಿದ ಸುಬ್ರಮಣಿ ಅವರು ನೆರವಿಗಾಗಿ ನೆರೆಹೊರೆಯವರನ್ನು ಕರೆದಿದ್ದಾರೆ. ಆದರೆ, ನೆರೆಹೊರೆಯವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಬೇಬಿ ಮೃತಪಟ್ಟಿದ್ದರು.
ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.