ವಿರಾಜಪೇಟೆಗೆ ಒಳ್ಳೆಯ ಶಾಸಕರು ಸಿಕ್ಕಿದ್ದಾರೆ;ಸಚಿವ ಯು.ಟಿ.ಖಾದರ್ ಶ್ಲಾಘನೆ
admincoorgdaily

ಬೆಂಗಳೂರು;ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್ ಇಲಾಖೆ ಸಚಿವರಾದ ಶ್ರೀ ಯು.ಟಿ ಖಾದರ್ ಅವರ ಅಧ್ಯಕ್ಷತೆಯಲ್ಲಿ, ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ವಿರಾಜಪೇಟೆ ಕ್ಷೇತ್ರದ ಅಲ್ಪಸಂಖ್ಯಾತರ ಮುಖಂಡರೊಂದಿಗೆ ಇಂದು ವಿಕಾಸಸೌಧದ ಕೊಠಡಿ ಸಂಖ್ಯೆ 419 ರಲ್ಲಿ ಸಭೆ ಜರುಗಿತು.
ಸಭೆಯಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ, ಶಾದಿ ಮಹಲ್, ರಸ್ತೆಗಳ ನಿರ್ಮಾಣ, ಕ್ರಿಶ್ಚಿಯನ್ ಕಾಲೋನಿ, ಚರ್ಚ್ ಗಳ ಅಭಿವೃದ್ಧಿ ಹಾಗೂ ಮಸೀದಿ ನಿರ್ಮಾಣಕ್ಕೆ ಅನುದಾನ ಹಾಗೂ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂದು ಸಚಿವರಿಗೆ ಮನವಿ ಸಲ್ಲಿಸಿದರು.
ಮನವಿಗೆ ಸಚಿವರು ಪ್ರತಿಕ್ರಿಯಿಸಿ, ಸಿಬ್ಬಂದಿಗಳ ನೇಮಕಾತಿ, ರಸ್ತೆಗಳ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇನೆ. ನಿಮ್ಮ ಅದೃಷ್ಟ, ವಿರಾಜಪೇಟೆ ಕ್ಷೇತ್ರಕ್ಕೆ ಅತ್ಯುತ್ತಮವಾದ ಶಾಸಕರನ್ನ ನೀವು ಪಡೆದಿದ್ದೀರಿ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೆಚ್ಚು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಮ್ಮ ಬಗ್ಗೆ ಕಾಳಜಿ ವಹಿಸಿ ಈ ಸಭೆಯನ್ನು ಏರ್ಪಡಿಸಿದ್ದಾರೆ. ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಧಿಕಾರಿಗಳು ಕೂಡಲೇ ಸಮಸ್ಯೆಗಳ ಬಗ್ಗೆ ಪರಿಹರಿಸಲು ಕ್ರಮ ವಹಿಸಬೇಕು ಎಂದು ಈ ಸಂದರ್ಭದಲ್ಲಿ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಧರ್ಮ ಗುರುಗಳು, ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಕೆಪಿಸಿಸಿ ಸದಸ್ಯ ಯಾಕೂಬ್, ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ಉಪಾಧ್ಯಕ್ಷ ಜೋಕಿಮ್, ಪ್ರಮುಖರಾದ ರಫೀಕ್, ಎ ಜೆ ಬಾಬು, ಅಲ್ಪಸಂಖ್ಯಾತರ ಮುಖಂಡರುಗಳು ಉಪಸ್ಥಿತರಿದ್ದರು.